ವಿಭಾಗಗಳು

ಸುದ್ದಿಪತ್ರ


 

ಇನ್ನು ಹಳೆಯ ಗಿಮಿಕ್ಕು ನಡೆಯಲಾರದು, ಹೊಸ ಅಲೆಯೂ ಬೇಕು

ಸುಗ್ರೀವಾಜ್ಞೆಯನ್ನು ನಾನ್‌ಸೆನ್ಸ್ ಎಂದೂ, ಹರಿದು ಬಿಸಾಡಬೇಕೆಂದೂ ರಾಹುಲ್ ಹೇಳುತ್ತಿದ್ದರೆ ಪ್ರಜಾಪ್ರಭುತ್ವ ಗಾಂಧಿ ಪರಿವಾರದ ಬೂಟಿನಡಿ ಸಿಲುಕಿ ನರಳುತ್ತಿತ್ತು. ಮೊದಲಿನಂತೆ ಆಗಿದ್ದರೆ ದಿನ ಬೆಳಗಾಗುವುದರೊಳಗೆ ರಾಹುಲ್ ಹೀರೋ ಆಗಿಬಿಡುತ್ತಿದ್ದರು. ಈ ಬಾರಿ ಫೇಸ್‌ಬುಕ್, ಟ್ವಿಟರ್‌ಗಳು ರಾಹುಲ್ ಗಾಂಧಿಯನ್ನು ಉಸಿರೆತ್ತಲೂ ಬಿಡಲಿಲ್ಲ.

ವಿಮೋಚನಾ ವೇಗ ಅಥವಾ velocity ಅಂದರೆ ಏನು ಗೊತ್ತಾ? ಹಾಗಂತ ಪ್ರಶ್ನೆ ಕೇಳಿದ್ದು ವಿಜ್ಞಾನದ ಮೇಷ್ಟ್ರಲ್ಲ. ಈ ದೇಶದ ಮುಂದಿನ ಪ್ರಧಾನಿಯೆಂದು ಕಾಂಗ್ರೆಸ್ಸು ಬಿಂಬಿಸುತ್ತಿರುವ ರಾಹುಲ್ ಗಾಂಧಿ. ಈ ಪ್ರಶ್ನೆ ವಿದ್ಯಾರ್ಥಿ ಸಮಾವೇಶದಲ್ಲಿ ಹರಿದಾಡಿದ್ದಲ್ಲ; ದಲಿತರ ‘ಅಧಿಕಾರ್ ದಿವಸ್’ ಕಾರ್ಯಕ್ರಮದಲ್ಲಿ ಕೇಳಿಬಂದದ್ದು. ಸಭೆಯಲ್ಲಿ ಭಾಗಿಯಾದವರೊಬ್ಬರು ಹಾಗೆಂದರೇನೆಂದು ಹೇಳಿದೊಡನೆ ಮೇಷ್ಟ್ರು ಮತ್ತೊಂದು ಪ್ರಶ್ನೆ ಕೇಳಿದರು- ‘ಗುರು ಗ್ರಹದ ವಿಮೋಚನಾ ವೇಗವೇನು?’. ಎದುರಿಗಿದ್ದವರು ಬಿಡಿ ವಿಜ್ಞಾನದ ಅಧ್ಯಾಪಕರೂ ಗಾಬರಿಯಾಗುವ ಪ್ರಶ್ನೆ ಅದು. ಈಗ ವಿಜಯದ ನಗೆ ನಕ್ಕ ರಾಹುಲ್ ಬಾಬಾ “ದಲಿತರು ಜಾತಿಯ ವ್ಯವಸ್ಥೆಯಿಂದ ಮೇಲೇರಲು ವಿಮೋಚನಾ ವೇಗ ಪಡೆದುಕೊಳ್ಳಬೇಕು” ಅಂದರು. ಅಷ್ಟಕ್ಕೇ ಸುಮ್ಮನಾಗದೆ ಅಂಬೇಡ್ಕರರು ಈ ವೇಗ ಪಡೆದುಕೊಂಡೇ ಯು.ಎಸ್.ಗೆ ಹಾರಿದ್ದು ಎಂದದ್ದೂ ಆಯ್ತು. ಆದರೆ ‘ಅಧಿಕಾರ ದಿವಸ’ಕ್ಕೂ ಯು.ಎಸ್.ಗೆ ಹೋಗುವುದಕ್ಕೂ ಎತ್ತಣಿಂದೆತ್ತ ಸಂಬಂಧ ಅಂತ ರಾಹುಲ್‌ಗಾಗಲೀ, ನೆರೆದ ದಲಿತರಿಗಾಗಲಿ ಗೊತ್ತಿದ್ದುದ್ದು ಅನುಮಾನ.rahul-gandhi
ರಾಜಕೀಯ ಪಕ್ಷಗಳನ್ನೆಲ್ಲ ಒಮ್ಮೆ ಜಾಲಾಡಿಸಿ ನೋಡಿ. ಅಲ್ಲೆಲ್ಲ ಮೊದಲ ಹಂತದ ನಾಯಕರ ಮಕ್ಕಳೇ ಎರಡನೇ ಹಂತದ ಲೀಡರುಗಳು. ಅವರ ಬಳಿ ಹುಟ್ಟಿದಾಗಿನಿಂದ ಬಾಯಲ್ಲಿ ಬೆಳ್ಳಿ ಚಮಚವಿದೆ, ಹಣವಿದೆ, ಅಧಿಕಾರವಿದೆ. ಹೀಗಾಗಿ ಬಡವರ ಕಂಬನಿ, ನೋವುಗಳೆಲ್ಲ ಅವರಿಂದ ಬಲು ದೂರ. ರಾಜಕೀಯವೆಂದರೆ ಅವರ ಪಾಲಿಗೆ ಚುನಾವಣೆ ಮಾತ್ರ. ಆಗ ಖರ್ಚು ಮಾಡುವ ಹಣ, ಒಂದಷ್ಟು ಓಲೈಕೆ ಮತ್ತೊಂದಷ್ಟು ಗಿಮಿಕ್ಕು ಇಷ್ಟರಿಂದಲೇ ಗೆಲುವು ನಿಶ್ಚಿತವೆಂಬುದನ್ನು ಅರಿತುಕೊಂಡಿದ್ದಾರೆ. ಹೀಗಾಗಿಯೇ ವರ್ಷದಿಂದ ವರ್ಷಕ್ಕೆ ಹೆಚ್ಚು ಖರ್ಚು, ಹೆಚ್ಚು ಗಿಮಿಕ್ಕು, ಹೆಚ್ಚು ಓಲೈಕೆಗಳಿಂದ ರಾಜಕಾರಣವೂ ಹೊಲಸೆದ್ದಿದೆ, ದೇಶವೂ ಹಳ್ಳ ಹಿಡಿದಿದೆ. ಇದರದ್ದೇ ಮುಂದಿನ ಭಾಗ ರಾಹುಲ್ ಗಾಂಧಿ
‘ಯುವರಾಜ’ರದಂತೂ ಅಧಿಕಾರದಲ್ಲಿ ನಾಲ್ಕನೇ ಪೀಳಿಗೆ. ಅಂದಮೇಲೆ ಮಾನಸಿಕ ಸ್ಥಿತಿ ಲೆಕ್ಕ ಹಾಕಿ. ಅವರಿಗೆ ಬಡತನ ಮನಸ್ಸಿಗೆ ಸಂಬಂಧಪಟ್ಟಿದ್ದು ಅನಿಸುತ್ತೆ; ಪ್ರಧಾನಮಂತ್ರಿ ನಾನ್‌ಸೆನ್ಸ್ ಅನಿಸುತ್ತಾರೆ. ಕೊನೆಗೆ ದಲಿತರು ಅಮೆರಿಕಕ್ಕೆ ಹೋಗೋದು ಪರಿಹಾರ ಅನಿಸುತ್ತೆ! ನಿಜಕ್ಕೂ ರಾಹುಲ್ ಬಾಬಾ ಶ್ರದ್ಧೆಯಿಟ್ಟು ಅಧ್ಯಯನ ಮಾಡಿದ್ದರೆ, ಆತ್ಮವಿಶ್ವಾಸ ತುಂಬಬೇಕೆಂದು ಬಯಸಿದ್ದರೆ ದಲಿತ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಈಐಇಇಐ)ಯನು ಅರಿತಿದ್ದರೆ ಸಾಕಿತ್ತು. ಸರ್ಕಾರದ ಕೊಡುಗೆಗಳ ಭಾರದಿಂದ ನಲುಗಿರುವ ದಲಿತರು ಈಗಾಗಲೇ ಮೈಕೊಡವಿಕೊಂಡು ಎದ್ದಾಗಿದೆ. ಅಷ್ಟೇ ಅಲ್ಲ ಮುಂದಿನ ಹತ್ತು ವರ್ಷಗಳಲ್ಲಿ ೫೦೦ ಕೋಟಿ ರೂಪಾಯಿ ಸಂಗ್ರಹಿಸಿ ದಲಿತರಲ್ಲಿ ಉದ್ಯಮಶೀಲತೆ ತರಲು ಯೋಜನೆಗಳನ್ನು ರೂಪಿಸಲಾಗಿದೆ. ಇತ್ತೀಚೆಗೆ ಮಹಿಳಾ ಉದ್ಯಮಿಗಳನ್ನು ಗುರುತಿಸಿ ಸನ್ಮಾನಿಸಿದ ಈಐಇಇಐ ಹೊಸ ಮೈಲಿಗಲ್ಲನ್ನೇ ಸೃಷ್ಟಿಸಿತು.
ಅದರಲ್ಲಿ ಒಬ್ಬಾಕೆ ಮುಂಬೈನ ಐವತ್ತು ವರ್ಷದ ಸರೋಜ್. ೧೨ನೇ ವಯಸ್ಸಿಗೇ ಮದುವೆಯಾಗಿ, ಕೆಲವು ತಿಂಗಳಲ್ಲೆ ಅತ್ತೆಯ ಕಾಟದಿಂದ ತವರಿಗೆ ಓಡಿಬಂದವಳು. ತಂದೆ ಕಾನ್‌ಸ್ಟೇಬಲ್ ಆದ್ದರಿಂದ ತಾನೂ ಅದೇ ದಿಕ್ಕಿನತ್ತ ಹೆಜ್ಜೆ ಇಟ್ಟು ಸೋತಳು. ಬಟ್ಟೆ ಹೊಲಿಯುವುದನ್ನು ಕಲಿತು ಹಳ್ಳಿಗರ ಮುಂದೆ ನಿಂತಾಗ ಗಂಡನನ್ನು ಬಿಟ್ಟವಳೆಂಬ ಹಣೆಪಟ್ಟಿಯಿಂದ ದೂರೀಕರಿಸಲ್ಪಟ್ಟವಳು. ಪಟ್ಟಣಕ್ಕೆ ಬಂದು ಗುಜರಾತಿ ಕುಟುಂಬವೊಂದರ (ಸತ್ಯವಾಗಲೂ ಇದರಲ್ಲಿ ಮೋದಿಯ ಕೈವಾಡವಿಲ್ಲ!) ಬೆಂಬಲದಿಂದ ಬಟ್ಟೆ ಹೊಲಿಯುವ ಕಾರ್ಖಾನೆಗೆ ಸೇರಿಕೊಂಡಳು. ದಿನಕ್ಕೆರಡು ರೂಪಾಯಿ ಕೂಲಿ.
ಆಗ ಅವಳ ಕೈಹಿಡಿದವ ಕಬ್ಬಿಣದ ಕಪಾಟಿನ ಅಂಗಡಿಯವ. ಗಂಡನಿಗೆ ಬೆನ್ನೆಲುಬಾಗಿ ನಿಂತ ಸರೋಜ್ ಉದ್ದಿಮೆಗೆ ಹೊಸ ದಿಕ್ಕು ತೋರಿದಳು. ಕಡಿಮೆ ಬೆಲೆಗೆ ಸಿಕ್ಕ ಜಮೀನು ಖರೀದಿಸಿ ಸರ್ಕಾರದಿಂದ ಸಾಲ ಪಡೆದು ಅಪಾರ್ಟ್‌ಮೆಂಟ್ ಕಟ್ಟಿ ಮಾರಾಟಮಾಡಿ ಲಾಭ ಪಡೆದಳು. ಉತ್ಸಾಹ ವೃದ್ಧಿಸಿತು. ನಷ್ಟದಲ್ಲಿದ್ದ ‘ಕಮಾನಿ ಟ್ಯೂಬ್ಸ್’ ಕಂಪನಿ ಖರೀದಿಸಿ ಜೀವ ತುಂಬಿ ಲಾಭದತ್ತ ಕೊಂಡೊಯ್ದಳು. ಇಂದು ಆಕೆಯ ಉದ್ಯಮದ ವ್ಯಾಪ್ತಿ ಸುಮಾರು ಮೂರು ಸಾವಿರ ಕೋಟಿ ರೂಪಾಯಿಯಷ್ಟು! ಮುಂಬೈನ ಕಾಲನಿಗಳಲ್ಲಿ ಮುದುಡಿಹೋಗಬೇಕಿದ್ದ ಸರೋಜ್ ದಲಿತರ ಪಾಲಿನ ಆಶಾಕಿರಣ. ಒಬ್ಬ ಮುತ್ಸದ್ಧಿ ಇಂತಹ ಉದಾಹರಣೆಗಳು, ಸರ್ಕಾರಿ ಯೋಜನೆಗಳ ಮೂಲಕ ಆತ್ಮವಿಶ್ವಾಸ ತುಂಬಬೇಕಿತ್ತೇ ಹೊರತು ವಿಮೋಚನಾ ವೇಗದ ಕಥೆ ಹೇಳಬೇಕಿರಲಿಲ್ಲ.
ಹಾಗಂತ ರಾಹುಲ್ ಗಾಂಧಿಯ ಈ ಉದ್ಧಟತನ ಮೊದಲ ಬಾರಿಯದೇನಲ್ಲ. ಇತ್ತೀಚೆಗೆ ಅಪರಾಧಿ ಚುನಾಯಿತ ಪ್ರತಿನಿಧಿಗಳ ಕುರಿತಂತೆ ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡಾಗಲೂ ಹೀಗೆಯೇ ಆಯ್ತು. ಇದೊಂದು ದೇಶವಿರೋಧಿ ಕಾನೂನೆಂದು ಅರಿತ ನಂತರವೂ ಸೋನಿಯಾರ ಒತ್ತಡಕ್ಕೆ ಮಣಿದು ಮನಮೋಹನರು ಈ ಸುಗ್ರಿವಾe ಹೊರಡಿಸುವ ನಿರ್ಧಾರಕ್ಕೆ ಅಸ್ತು ಎನ್ನಬೇಕಾಯಿತು. ಆದರೆ ರಾಷ್ಟ್ರಪತಿಗಳು ಅದಕ್ಕೆ ಸಹಿ ಹಾಕುವುದಿಲ್ಲ ಎಂಬ ಸುಳಿವು ಸಿಗುತ್ತಲೇ ಕಾಂಗ್ರೆಸ್ಸು ರಾಹುಲ್ ಬಾಬಾರನ್ನು ಹೀರೋ ಮಾಡ ಹೊರಟಿತು. ಸರ್ಕಾರದ ನಿರ್ಧಾರವನ್ನು ಮಾಧ್ಯಮಗಳ ಮುಂದೆ ಸಮರ್ಥಿಸಿಕೊಳ್ಳುತ್ತಿದ್ದ ಅಜಯ್ ಮಾಕನ್‌ರ ಮುಖದಲ್ಲಿ ನೀರಿಳಿವಂತೆ ರಾಹುಲ್ ಗಾಂಧಿ ಮಾತನಾಡಲಾರಂಭಿಸಿದಾಗ ಇಡಿಯ ದೇಶಕ್ಕೆ ಗಾಬರಿ. ಸುಗ್ರೀವಾಜ್ಞೆಯನ್ನು ನಾನ್‌ಸೆನ್ಸ್ ಎಂದೂ, ಹರಿದು ಬಿಸಾಡಬೇಕೆಂದೂ ರಾಹುಲ್ ಹೇಳುತ್ತಿದ್ದರೆ ಪ್ರಜಾಪ್ರಭುತ್ವ ಗಾಂಧಿ ಪರಿವಾರದ ಬೂಟಿನಡಿ ಸಿಲುಕಿ ನರಳುತ್ತಿತ್ತು. ಮೊದಲಿನಂತೆ ಆಗಿದ್ದರೆ ದಿನ ಬೆಳಗಾಗುವುದರೊಳಗೆ ರಾಹುಲ್ ಹೀರೋ ಆಗಿಬಿಡುತ್ತಿದ್ದರು. ಮಾಧ್ಯಮಗಳು ತಯಾರಿಯನ್ನೂ ಮಾಡಿಕೊಂಡಿದ್ದವು. ಈ ಬಾರಿ ಫೇಸ್‌ಬುಕ್, ಟ್ವಿಟರ್‌ಗಳು ರಾಹುಲ್ ಗಾಂಧಿಯನ್ನು ಉಸಿರೆತ್ತಲೂ ಬಿಡಲಿಲ್ಲ. ಅಲ್ಲಿಗೆ ಹೂಡಿದ ಬಾಣ ಕಾಂಗ್ರೆಸ್ಸಿನತ್ತಲೇ ತಿರುಗಿತ್ತು. ರಾಹುಲ್ ಮತ್ತೆ ಇಂಗು ತಿಂದರು!
ಕಾಂಗ್ರೆಸ್ಸಿಗರು ರಾಹುಲ್‌ರನ್ನು ಹೀರೋ ಮಾಡಿ, ಮನಮೋಹನ್ ಸಿಂಗ್‌ರು ಕುಪಿತರಾಗಿ ರಾಜೀನಾಮೆ ಕೊಡುವಂತೆ ಮಾಡಿದರೆ ಎಲ್ಲವೂ ಸರಿಹೋಗುವುದೆಂದು ಭಾವಿಸಿದ್ದರು. ಅದೇಕೋ ಅಂದುಕೊಂಡಂತಾಗಲಿಲ್ಲ. ಹಿಂದೊಮ್ಮೆ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವೆಂಕಟೇಶ್ವರನ್ ಕುರಿತಂತೆ ರಾಜೀವ್ ಗಾಂಧಿ ಲಘುವಾಗಿ ಮಾತನಾಡಿದ್ದಾಗ ಕುಪಿತ ವೆಂಕಟೇಶ್ವರನ್ ರಾಜೀನಾಮೆ ಎಸೆದು ಬಂದಿದ್ದರು. ಮನಮೋಹನ್‌ರ ತಾಳ್ಮೆ ಮೆಚ್ಚಬೇಕಾದ್ದೇ! ಅವರು ತಲೆ ಕೆಡಿಸಿಕೊಳ್ಳಲಿಲ್ಲ. ಮೈಗೆ ಮೆತ್ತಿದ್ದ ಧೂಳು ಕೊಡವಿಕೊಂಡೇಳುವಂತೆ ಪ್ರಕರಣದಿಂದ ಕೈ ತೊಳೆದುಕೊಂಡರು. ಈ ಬಾರಿ ಪಾಪದ ಪ್ರಧಾನಿಯನ್ನು ಬೈದ ಕೊಳೆ ರಾಹುಲ್‌ಗೇ ಮೆತ್ತಿಕೊಂಡಿತು.
ನಿಜವಾಗಿಯೂ ಕಾಂಗ್ರೆಸ್ಸಿಗರು ಬುದ್ಧಿವಂತರಾಗಿದ್ದರೆ ಭ್ರಷ್ಟಾಚಾರದ ಸುದ್ದಿ ಜೋರಾಗುತ್ತಿದ್ದಂತೆ ಮನಮೋಹನರನ್ನು ಕೆಳಗಿಳಿಸಿ ಪ್ರಣಬ್ ಮುಖರ್ಜಿಯವರನ್ನು ಪ್ರಧಾನಿ ಮಾಡಿಬಿಡಬೇಕಿತ್ತು. ಒಂದು ಶುದ್ಧ ಮುಖದೊಂದಿಗೆ ಒಂದೆರಡು ವರ್ಷ ಅಧಿಕಾರ ನಡೆಸಿ ಚುನಾವಣೆಗೆ ನಡೆದಿದ್ದರೆ ಮೋದಿ ಬಳಗಕ್ಕೆ ಬಲವಾದ ಸವಾಲಿರುತ್ತಿತ್ತು. ಆದರೆ ಅದು ಹೇಗೆ ಸಾಧ್ಯ? ಮಗನನ್ನು ಪ್ರಧಾನಿಯಾಗಿ ನೋಡಲೇಬೇಕೆಂಬ ಹಟ ತೊಟ್ಟ ತಾಯಿ ಪ್ರಣಬ್‌ರನ್ನು ರಾಷ್ಟ್ರಪತಿಯಾಗಿಸಿ, ದಾರಿ ಸುಗಮ ಮಾಡಿಕೊಟ್ಟರು. ಹೌದು, ಎಲ್ಲವೂ ಸರಿಯಾಗಿಯೇ ಇತ್ತು. ಕೊರತೆ ಒಂದೇ. ಪ್ರಧಾನಿಯಾಗುವವನಿಗೆ ಇರಬೇಕಾದ ಸ್ವಂತ ಯೋಗ್ಯತೆ!
ನೆನಪಿರಲಿ. ಈ ಬಾರಿಯ ಚುನಾವಣೆ ಹಿಂದುಳಿದವರ, ಮುಸಲ್ಮಾನರ, ದಲಿತರ ವೋಟುಗಳ ಆಧಾರದ ಮೇಲೆ ನಿಂತಿಲ್ಲ. ಈ ಬಾರಿ ತರುಣರ ವೋಟುಗಳು ನಿರ್ಣಾಯಕ. ಉತ್ತರ ಪ್ರದೇಶವೊಂದರಲ್ಲಿಯೇ ಎರಡೂವರೆ ಕೋಟಿಯಷ್ಟು ಹೊಸ ಮತದಾರರಿದ್ದಾರೆ. ದೇಶದಾದ್ಯಂತ ಹೆಚ್ಚು ಕಡಿಮೆ ಹನ್ನೆರಡು ಕೋಟಿ! ಅಧಿಕಾರದ ಗದ್ದುಗೆಯೇರುವ ಪಕ್ಷ ಇದರ ಎರಡರಷ್ಟು ಮತ ಪಡೆದುಕೊಂಡರೆ ಸಾಕು. ಅಂದರೆ ಇನ್ನು ಹಳೆಯ ಗಿಮಿಕ್ಕು ನಡೆಯಲಾರದು, ಹೊಸ ಅಲೆಯೂ ಬೇಕು. ಕಾಂಗ್ರೆಸ್ಸಿಗೆ ಇದು ಗೊತ್ತಿಲ್ಲವೆಂದಲ್ಲ. ಹೀಗಾಗಿಯೇ ಅದು ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಹಳೆಯದನ್ನೂ ಬಿಡದೇ, ರಾಹುಲ್ ಗಾಂಧಿ ನೇತೃತ್ವದಲ್ಲಿ ಹೊಸದನ್ನೂ ಸೆಳೆಯುವ ಪ್ರಯತ್ನ ಜೋರಾಗಿ ನಡೆದಿದೆ.
ಮತ್ತೊಂದೆಡೆ ಒನ್ ಮ್ಯಾನ್ ಆರ್ಮಿ ನರೇಂದ್ರ ಮೋದಿ ಕಾಂಗ್ರೆಸ್ಸಿನ ಮೇಲೆ ಮುಗಿಬಿದ್ದಿದ್ದಾರೆ. ಕಾಂಗ್ರೆಸ್ಸಿಗರು ರಾಹುಲ್ ಗಾಂಧಿಯ ಭಾಷಣ ಕೇಳಿದ ನಂತರ ಮೋದಿಯ ಭಾಷಣಕ್ಕೆ ಕಿವಿಗೊಟ್ಟು ಕುಳಿತಿರುತ್ತಾರೆ. ಮೋದಿ ವ್ಯಂಗ್ಯದ ಬಾಣಗಳು ಪರಿವಾರದ ಆಳ್ವಿಕೆಯ ಬಲೂನನ್ನೇ ತಿವಿಯುತ್ತವೆ. ಹೀಗಾಗಿ ರಾಜಕೀಯದ ಪಡಸಾಲೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದಾಗಲೆಲ್ಲ ಬಿಜೆಪಿಗೆ ವೋಟುಗಳು ಜಾಸ್ತಿಯಾಗುತ್ತವೆ ಅನ್ನೋದು. ಮೋದಿಯೂ ಅಷ್ಟೇ. ಒಂದು ಭಾಷಣದಿಂದ ಮತ್ತೊಂದು ಭಾಷಣಕ್ಕೆ ಹೊಸ ವಿಚಾರಗಳನ್ನು, ಹೊಸ ಆರೋಪಗಳನ್ನು ಹೊತ್ತು ತರುತ್ತಾರೆ. ಅದನ್ನು ಸುಧಾರಿಸಿಕೊಳ್ಳುವ ವೇಳೆಗೇ ಹೈರಾಣಾಗುವ ಕಾಂಗ್ರೆಸ್ಸು ರಾಹುಲ್ ಗಾಂಧಿಯವರನ್ನು ಬೇರೆ ಸಮರ್ಥಿಸಿಕೊಳ್ಳಬೇಕು!
ಹಿಂದೊಮ್ಮೆ ಮೋದಿಯವರು ಸೋನಿಯಾ ಗಾಂಧಿಯವರ ವಿದೇಶ ಪ್ರಯಾಣ ಮತ್ತು ಚಿಕಿತ್ಸೆಗಾಗಿ ಸರ್ಕಾರ ಮಾಡಿರುವ ಖರ್ಚು ೧೮೮೦ ಕೋಟಿ ರೂಪಾಯಿ ಎಂದು ಹೇಳಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದರು. ಚೆಸ್‌ನಲ್ಲಿ ರಾಜನ ರಕ್ಷಣೆಗೆ ಕಾಲಾಳು, ಕುದುರೆ, ಆನೆಗಳೆಲ್ಲ ಕಾದಾಡುತ್ತವಲ್ಲ ಹಾಗೆಯೇ ಇಲ್ಲಿ ರಾಣಿಯ ರಕ್ಷಣೆಗೆ ಆಕೆಯ ನಂಬಿಕಸ್ಥರೆಲ್ಲ ಧಾವಿಸಿ ಬಂದರು. ಮೋದಿಯನ್ನು ಜರಿದರು; ಮಾಧ್ಯಮಗಳೆದುರು ಜಾರಿಕೊಂಡರು. ಮೋದಿ ಮಾತ್ರ ನಸುನಕ್ಕು ಸುದ್ದಿ ಸುಳ್ಳಾದರೆ ನಿಜವಾಗಿಯೂ ಖರ್ಚು ಮಾಡಿದ್ದೆಷ್ಟು ಹೇಳಿ ನೋಡೋಣ ಎಂದರು. ಅತ್ತಲಿಂದ ದನಿಯಿರಲಿಲ್ಲ.
ಈ ಬಾರಿಯ ಚುನಾವಣೆ ಅಪರೂಪದ ಕದನ. ಮೊದಲ ಬಾರಿಗೆ ಕಾಂಗ್ರೆಸ್ಸು ಹೆದರಿಕೆಯಿಂದ ಕಣಕ್ಕಿಳಿದಿದೆ. ಈಗಾಗಲೇ ಸೋನಿಯಾ ೨೦೧೬ಕ್ಕೆ ತಮ್ಮ ನಿವೃತ್ತಿಯೆಂದು ಹೇಳಿಸಿದ್ದಾರೆ. ಆ ವೇಳೆಗೆ ಕಾಂಗ್ರೆಸ್ಸಿನ ಸೂತ್ರವನ್ನು ರಾಹುಲ್ ಗಾಂಧಿಯ ಕೈಲಿಟ್ಟು ತಮ್ಮ ರಾಜಕೀಯ ಬದುಕಿಗೆ ಕೊನೆ ಹಾಡುವುದು ಅವರ ಬಯಕೆ. ಆದರೆ ರಾಹುಲ್ ನಡೆ ಆ ದಿಕ್ಕಿನಲ್ಲಿಲ್ಲ. ಆತ ತನ್ನ ಸುತ್ತ ಕಟ್ಟಿಕೊಂಡ ಬಳಗ, ಆಡುವ ಮಾತುಗಳು ಇವ್ಯಾವುವೂ ಹೊಸ ಪೀಳಿಗೆಗೆ ಹಿಡಿಸುತ್ತಿಲ್ಲ. ಗಾಂಧಿ ಪರಿವಾರದ ನೇತೃತ್ವವಿಲ್ಲದೇ ಕಾಂಗ್ರೆಸ್ಸಿಲ್ಲ. ಅಗತ್ಯ ಬಿದ್ದರೆ ರಾಬರ್ಟ್ ವಾದ್ರಾಗೂ ಗಾಂಧಿಯ ಹೆಸರಿಟ್ಟು ಗದ್ದುಗೆಯ ಮೇಲೆ ಕೂರಿಸಲು ಅವರು ತಯ್ಯಾರು. ಹೀಗಾಗಿಯೇ ಈ ಬಾರಿಯ ಚುನಾವಣೆ ವಿಶೇಷ ಅನ್ನೋದು. ಹಿಂದೆಂದಿಗಿಂತಲೂ ಹೆಚ್ಚು ಜನ ಪಾಲ್ಗೊಳ್ಳುವ, ಅನೇಕರಿಗೆ ಮಾಡು ಇಲ್ಲವೇ ಮಡಿಯೆನ್ನುವಂತಹ ವಾತಾವರಣ. ಕಾದು ನೋಡಬೇಕಷ್ಟೇ.

Comments are closed.