ವಿಭಾಗಗಳು

ಸುದ್ದಿಪತ್ರ


 

ಒಂದು ಲೀಟರ್ ಪೆಟ್ರೋಲು, ಸಾಕು ಜಗವ ನಡುಗಿಸಲು…

ತನ್ನ ತೈಲ ಸ್ವಾಮ್ಯಕ್ಕೆ ಧಕ್ಕೆ ಬಂದಾಗಲೆಲ್ಲ ಅಮೆರಿಕಾ ಯುದ್ಧ ಮಾಡಿದೆ. ಪಶ್ಚಿಮದ ರಾಷ್ಟ್ರಗಳೆಲ್ಲ ಆಗ ಅದರ ಬಗಲಿಗೇ ಆತುಕೊಂಡಿವೆ. ತೈಲ ಉತ್ಪಾದಕ ರಾಷ್ಟ್ರಗಳು ಒಂದಲ್ಲ ಒಂದು ರೀತಿಯಲ್ಲಿ ತನ್ನ ಮರ್ಜಿಯಲ್ಲೆ ಇರಬೇಕೆಂದು ಪಶ್ಚಿಮ ಬಯಸುತ್ತದೆ. ಹೀಗಾಗಿಯೇ ಆ ರಾಷ್ಟ್ರಗಳನ್ನು ಬಡಿದಾಡುವಂತೆ ಮಾಡಿ, ತಾನು ಬೇಳೆ ಬೇಯಿಸಿಕೊಳ್ಳುವ ಕೆಲಸ ಅವು ಮಾಡುತ್ತಲೇ ಇವೆ.

ನಮ್ಮಬೈಕಿಗೆ ಹಾಕಿಸಿಕೊಳ್ಳುವ ಒಂದು ಲೀಟರ್ ಪೆಟ್ರೋಲು; ಬೆಲೆ ಏರಿದಾಗ ಬೆಂಕಿ ಹಾಕುತ್ತೇವೆ. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಸುಟ್ಟು ಬೂದಿ ಮಾಡುತ್ತೇವೆ. ರಾಷ್ಟ್ರ ಸ್ತಬ್ಧವಾಗುತ್ತದೆ. ಕೊನೆಗೆ ಸರ್ಕಾರಗಳೇ ಉರುಳಿಬೀಳುತ್ತವೆ. ಬರೀ ಇಷ್ಟೇ ಅಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರದ್ದೊಂದು ದೊಡ್ಡ ರಾಜಕೀಯವೇ ಇದೆ. ತೈಲ ಸ್ವಾಮ್ಯಕ್ಕಾಗಿ ರಾಷ್ಟ್ರ ರಾಷ್ಟ್ರಗಳು ಬಡಿದಾಡುತ್ತವೆ. ಅಧ್ಯಕ್ಷರ ಹತ್ಯೆಗಳಾಗುತ್ತವೆ. ಕೊನೆಗೆ ಉತ್ಕ್ರಾಂತಿಗಳೂ ನಡೆದುಬಿಡುತ್ತವೆ. ಎಲ್ಲಕ್ಕೂ ಕಾರಣ ಅದೇ, ಲೀಟರ್ ಪೆಟ್ರೋಲ್.
ಮೊದಲ ಮಹಾಯುದ್ಧದವರೆಗೂ ತೈಲದ ಬಗ್ಗೆ ಯಾರೂ ತಲೆಕೆಡಿಸಿಕೊಡಿರಲಿಲ್ಲ. ಜಗತ್ತಿಗೆ ಬೇಕಾಗೋ ಒಟ್ಟು ತೈಲದ ಹೆಚ್ಚೂ ಕಡಿಮೆ ಮುಕ್ಕಾಲು ಭಾಗ ಅಮೆರಿಕವೇ ಉತ್ಪಾದಿಸಿಬಿಡುತ್ತಿತ್ತು. ಯುದ್ಧ ಮುಗಿಯುತ್ತಿದ್ದಂತೆ, ತೈಲದ ಅವಶ್ಯಕತೆ ಎದ್ದುಕಾಣತೊಡಗಿತು. ಬ್ರಿಟಿಷರು, ಡಚ್ಚರು, ಫ್ರೆಂಚರು, ಅಮೆರಿಕಾದ ಏಕಸ್ವಾಮ್ಯಕ್ಕೊಂದು ಬ್ರೇಕು ಹಾಕಿದರು. ಅತ್ತ ಇರಾನ್, ವೆನಿಜುವೆಲಾದಂತಹ ರಾಷ್ಟ್ರಗಳು ಓಟದಲ್ಲಿ ಭಾಗವಹಿಸಿದವು. ಈ ನಡುವೆ ಅಮೆರಿಕದಲ್ಲಿ ತೈಲ ದಾಸ್ತಾನು ಖಾಲಿಯೇ ಆಗಿಬಿಟ್ಟೀತೆಂಬ ಆತಂಕ ತೀವ್ರವಾಯ್ತು. ಪೆಟ್ರೋಲು ಇಲ್ಲದ ದಿನ ಊಹಿಸಿಕೊಳ್ಳಲಾಗದೇ ಅಮೆರಿಕಾ ನಡುಗಿಬಿಟ್ಟಿತು. ಅತ್ತ ರಷ್ಯಾದ ಪ್ರಭಾವವುಳ್ಳ ರಾಷ್ಟ್ರಗಳಲ್ಲಿ ತೈಲ ನಿಕ್ಷೇಪ ದೊರಕುತ್ತ ಹೋದಂತೆಲ್ಲ ಅಮೆರಿಕ ವಿಲವಿಲ ಒದ್ದಾಡಿತು. ಹೊಸ ನಿಕ್ಷೇಪಗಳ ಹುಡುಕಾಟ ಶುರುವಾಯ್ತು. ಆಗಲೇ ಟೆಕ್ಸಾಸ್, ಒಕ್ಲಹಾಮಾ, ಕ್ಯಾಲಿಫೋರ್ನಿಯಾಗಳಲ್ಲಿ ತೈಲಬಾವಿಗಳು ದೊರೆತವು. ಅಮೆರಿಕಾ ಮತ್ತೆ ನಗಲಾರಂಭಿಸಿತು. ಇಷ್ಟಕ್ಕೆ ಸುಮ್ಮನಾಗದ ಅಮೆರಿಕಾ ಎರಡನೆ ಮಹಾಯುದ್ಧದ ನಂತರ ತನ್ನ ಕಂಪನಿಗಳನ್ನು ಮಧ್ಯಪೂರ್ವ ರಾಷ್ಟ್ರಗಳತ್ತ ಓಡಿಸಿ, ತೈಲ ಶೋಧ, ತೆಗೆಯುವಿಕೆ ಹಾಗೂ ರಫ್ತು ಮಾಡುವ ಕೆಲಸಗಳಲ್ಲಿ ಕೈಜೋಡಿಸುವಂತೆ ಮಾಡಿತು. ಅಚ್ಚರಿಯೇನು ಗೊತ್ತೆ? ತೈಲ ನಿಕ್ಷೇಪದ ಅರಿವೂ ಇರದೆ ಭಿಕಾರಿಯಂತಿದ್ದ ಅನೇಕ ರಾಷ್ಟ್ರಗಳಿಗೆ ಅಮೆರಿಕಾದ ಕಂಪನಿಗಳೇ ನಿಧಿ ತೋರಿಸಿದ್ದು. ಒಮ್ಮೆ ನಿಧಿ ಇರುವುದು ಗೊತ್ತಾದೊಡನೆ ಆ ರಾಷ್ಟ್ರಗಳು ಈ ಕಂಪನಿಗಳ ತಾಳಕ್ಕೆ ಕುಣಿಯತೊಡಗಿದವು. ಆಳದಲ್ಲಿ ಹುದುಗಿರುವ ತೈಲವನ್ನು ತೆಗೆಯುವ ತಂತ್ರಜ್ಞಾನ ಹೊಂದಿದ್ದ ಅಮೆರಿಕಾ ಈ ರಾಷ್ಟ್ರಗಳ ಪಾಲಿಗೆ ದೇವರಂತಾಯ್ತು. ಆದರೆ, ಲಾಭದ ದೃಷ್ಟಿಯಿಂದಲೇ ಜಗತ್ತನ್ನು ನೋಡುವ ಈ ಕಂಪನಿಗಳು ತಮಗೆ ಪೂರಕವಾಗುವಂತೆ ಒಪ್ಪಂದ ಮಾಡಿಕೊಂಡು ಕೊಬ್ಬಿ ಬೆಳೆದವು. ಬಡ ರಾಷ್ಟ್ರಗಳು ತಮ್ಮ ಸಂಪತ್ತನ್ನು ಸೂರೆಹೋಗಗೊಟ್ಟವು. ಮತ್ತಷ್ಟು ಸೊರಗಿದವು. ಬರುಬರುತ್ತ ಅಮೆರಿಕಾ ತೈಲಕ್ಕಾಗಿ ಮಧ್ಯಪೂರ್ವ ರಾಷ್ಟ್ರಗಳಾದ ಗಲ್ಫ್, ಪೌರಿ, ಇರಾನ್, ಇರಾಕ್ ಮೊದಲಾದ ದೇಶಗಳ ಮೇಲೆ ನಿರ್ಭರವಾಯ್ತು.

ತೆರಿಗೆ ಕಟ್ಟುವಲ್ಲಿ, ಲಾಭದ ಪ್ರಮಾಣ ಹಂಚುವಲ್ಲಿ, ಈ ಕಂಪನಿಗಳು ಮಾಡುತ್ತಿರುವ ಅಪಾರ ಮೋಸದ ಕುರಿತು ಮೊದಲ ಎತ್ತಿದ್ದು ವೆನಿಜುಯೆಲಾ. ಈ ಪುಟ್ಟ ರಾಷ್ಟ್ರ ತನ್ನ ತೈಲಸಂಪತ್ತನ್ನು ರಾಷ್ಟ್ರೀಕರಣಗೊಳಿಸಿ, ಅರ್ಧದಷ್ಟು ಲಾಭ ತನಗೆ ಕೊಡಬೇಕೆಂದು ಕಂಪನಿಗಳು ತಾಕೀತು ಮಾಡಿತು. ಅದರಿಂದ ಕಂಪನಿಗಳಿಗೆ ಭಾರೀ ನಷ್ಟವೇನೂ ಆಗದಿದ್ದರೂ ತೈಲ ಸಂಪತ್ತನ್ನು ರಾಷ್ಟ್ರೀಕರಣ ಮಾಡುವುದು ಲಾಭದಾಯಕವೆಂದು ಇತರ ರಾಷ್ಟ್ರಗಳಿಗೆ ಅನ್ನಿಸಲಾರಂಭಿಸಿತು. ಇಂತಹುದೊಂದು ಪ್ರಯಾಸವಂತೂ ಜೋರಾಗಿಯೇ ಶುರುವಾಯ್ತು. ಇದರ ಬಿಸಿ ಅದೆಂಥದ್ದಿತ್ತೆಂದರೆ, ಇರಾನಿನಲ್ಲಿ ತನ್ನ ಕಂಪನಿ ಬ್ರಿಟಿಷ್ ಪೆಟ್ರೋಲಿಯಮ್ ಕೆಲಸ ಮಾಡಲಾರದೆಂದು ಬ್ರಿಟನ್ ಪ್ರತಿಭಟಿಸಿತು. ಮೊಹಮ್ಮದ್ ಮೊಸಾದಿಕ್ ಈ ಹಿನ್ನೆಲೆಯಲ್ಲಿಯೇ ಇರಾನಿನ ಗದ್ದುಗೆಯೇರಿದ್ದು. ಅವನ ವಿರುದ್ಧ ಜನ ಸಂಘಟನೆ ಮಾಡಿ ಶಾಹ್ ಛೀಮಾರಿ ಹಾಕಿಸಿಕೊಂಡಿದ್ದೂ ಆಯ್ತು. ಇರಾನ್ ತನ್ನ ಕೈತಪ್ಪಿದರೆ ರಷ್ಯಾ ಬಲಾಢ್ಯವಾಗಿಬಿಡುವುದು ಎಂದು ಹೆದರಿದ ಅಮೆರಿಕಾ ತನ್ನ ಗುಪ್ತಚರರನ್ನು ಇರಾನಿಗೆ ಕಳಿಸಿ, ಬ್ರಿಟನ್ನಿನ ಸಹಕಾರದಿಂದ ಶಾಹ್ ನೊಂದಿಗೆ ಸಂಪರ್ಕ ಮಾಡಿಕೊಂಡಿತು. ಜನ ಸಂಘಟನೆ ಮಾಡಲು ಶಾಹ್ ನಿಗೆ ಹಣ ಮತ್ತು ಬೌದ್ಧಿಕ ಬೆಂಬಲವನ್ನೂ ನೀಡಿತು. ಅತ್ತ ಸೂಕ್ತ ಸಮಯ ಬಳಸಿ ಸೈನಿಕರನ್ನು ಉಪಯೋಗಿಸಿಕೊಂಡು ಮೊಸಾದಿಕನನ್ನು ಕುರ್ಚಿಯಿಂದ ಕೆಳಗಿಳಿಸಿ ಜೈಲಿಗೆ ಅಟ್ಟಿತು. ಶಾಹ್ ನ ತೆಕ್ಕೆಗೆ ಇರಾನ್ ಬಿತ್ತು. ಇರಾನಿನ ಶೇಕಡಾ ನಲವತ್ತರಷ್ಟು ತೈಲ ನಿಕ್ಷೇಪದ ಸುಪರ್ದಿಯೀಗ ಅಮೆರಿಕಾ ಪಾಲಿಗೆ!
ತನ್ನ ತೈಲ ಸ್ವಾಮ್ಯಕ್ಕೆ ಧಕ್ಕೆ ಬಂದಾಗಲೆಲ್ಲ ಅಮೆರಿಕಾ ಯುದ್ಧ ಮಾಡಿದೆ. ಪಶ್ಚಿಮದ ರಾಷ್ಟ್ರಗಳೆಲ್ಲ ಆಗ ಅದರ ಬಗಲಿಗೇ ಆತುಕೊಂಡಿವೆ. ತೈಲ ಉತ್ಪಾದಕ ರಾಷ್ಟ್ರಗಳು ಒಂದಲ್ಲ ಒಂದು ರೀತಿಯಲ್ಲಿ ತನ್ನ ಮರ್ಜಿಯಲ್ಲೆ ಇರಬೇಕೆಂದು ಪಶ್ಚಿಮ ಬಯಸುತ್ತದೆ. ಹೀಗಾಗಿಯೇ ಆ ರಾಷ್ಟ್ರಗಳನ್ನು ಬಡಿದಾಡುವಂತೆ ಮಾಡಿ, ತಾನು ಬೇಳೆ ಬೇಯಿಸಿಕೊಳ್ಳುವ ಕೆಲಸ ಅವು ಮಾಡುತ್ತಲೇ ಇವೆ. ಇರಾಕ್ ಮತ್ತು ಇರಾನ್ ನಡುವೆ ಅಮೆರಿಕಾ ಮಾಡಿದ್ದೂ ಅದನ್ನೇ. ಇರಾನ್ ಅನ್ನು ಮಟ್ಟಹಾಕಲು ಇರಾಕ್ ಹವಣಿಸುತ್ತಿದೆಯೆಂಬ ಸುದ್ದಿಯನ್ನು ತನ್ನ ಪತ್ರಿಕೆಗಳಲ್ಲಿ ಮೇಲಿಂದ ಮೇಲೆ ಪ್ರಕಟಿಸಿತು. ಎರಡೂ ರಾಷ್ಟ್ರಗಳು ಒಬ್ಬರನ್ನೊಬ್ಬರು ಗುಮಾನಿಯಿಂದ ನೋಡುತ್ತಿರುವಾಗಲೇ ಇಬ್ಬರ ಗಡಿಯಗುಂಟ ಇರುವ ಶತ್ ಅಲ್ ಅರಬ್ ನಲ್ಲಿ ಭಾರೀ ತೈಲ ನಿಕ್ಷೇಪ ಇರುವ ಪುಕಾರು ಹಬ್ಬಿಸಿತು. ಈಗ ನೋಡಿ, ತೈಲಕ್ಕಾಗಿ ಶುರುವಾಯ್ತು ಕಾದಾಟ. ಇದು ಎಂಟು ವರ್ಷಗಳಷ್ಟು ದೀರ್ಘ ಕಾಲ ಮುಂದುವರೆಯಿತು. ಅಷ್ಟೂ ಕಾಲ ಶಸ್ತ್ರಾಸ್ತ್ರ ಪೂರೈಸಿದ್ದು, ಮತ್ತೆ ಅಮೆರಿಕಾವೇ. ಅದಕ್ಕೆ ಪ್ರತಿಯಾಗಿ ಎರಡೂ ರಾಷ್ಟ್ರಗಳ ತೈಲ ನಿಕ್ಷೇಪಗಳು ಅಮೆರಿಕಾ ಪಾಲಿಗೆ ತೆರೆದುಕೊಂಡವು. ಕೊನೆಗೆ ತನ್ನ ಮಧ್ಯಸ್ಥಿಕೆಯಲ್ಲಿ ಯುದ್ಧ ವಿರಾಮ ಮಾಡಿಸಿ ಶತ್ ಅಲ್ ಅರಬ್ ನಲ್ಲಿ ತೈಲ ತೆಗೆಯುವ ಜವಾಬ್ದಾರಿಯನ್ನು ತಾನೇ ಹೊತ್ತಿತು!
ಈ ಆಟ ಬಹಳ ಕಾಲ ನಡೆಯಲಿಲ್ಲ. ಒಂದಷ್ಟು ರಾಷ್ಟ್ರಗಳು ಪಶ್ಚಿಮದ ಏಕಾಸ್ವಾಮ್ಯ ಮುರಿಯಬೇಕೆಂದು ಒಟ್ಟಾಗಿ ‘ಒಪೆಕ್’ ರಚಿಸಿಕೊಂಡವು. ತೈಲ ಪೂರೈಕೆಯ ಜವಾಬ್ದಾರಿ ಹೊತ್ತವು. ಬೆಲೆ ನಿರ್ಧರಿಸುವ ಜವಾಬ್ದಾರಿ ತಾವೇ ಮೇಲೆಳೆದುಕೊಂಡವು. ಆರಂಭದಲ್ಲಿ ಕಠಿಣವೆನ್ನಿಸಿದರೂ ಬರಬರುತ್ತ ಅದು ಫಲಪ್ರದವಾಯ್ತು. ಜಗತ್ತಿನ ಅನೇಕ ಕಂಪನಿಗಳು ತೈಲ ತೆಗೆದು ಮಾರುವಲ್ಲಿ ಆಸಕ್ತಿ ತೋರಿದವು. ಆದರೆ ಆಗಲೂ ಡಾಲರಿನಲ್ಲಿಯೇ ವಹಿವಾಟು ನಡೆಯುವಂತೆ ಅಮೆರಿಕಾ ನೋಡಿಕೊಂಡಿತು. ಈಗಲೂ ಪೆಟ್ರೋಲು ಕೊಂಡುಕೊಳ್ಳಲು ಇರುವ ಮಾಧ್ಯಮ ಡಾಲರ್ ಮಾತ್ರ. ಡಾಲರ್ ನ ಗಳಿಕೆಯಾಗಬೇಕೆಂದರೆ ಪಶ್ಚಿಮದ ಸಹವಾಸ ಬೇಕೇಬೇಕು. ವಿಶೇಷವಾಗಿ ಅಮೆರಿಕಾದ್ದು. ಅಂದಮೇಲೆ ಅದೇ ಸಾರ್ವಭೌಮ ರಾಷ್ಟ್ರವಾಗಿ ಉಳಿಯುವುದು. ಸದ್ದಾಮ್ ಹುಸೇನನಿಗೆ ಇದು ಸರಿ ಕಾಣಲಿಲ್ಲ. ಅತಿ ದೊಡ್ಡ ತೈಲನಿಧಿಯ ಒಡೆಯ ಡಾಲರ್ ಬೇಡ, ಯೂರೋ ಕೊಡಿ ಅಂದ. ತಗೊಳ್ಳಿ, ಅಮೆರಿಕಾಕ್ಕೆ ಬೆಂಕಿ ಬಿತ್ತು. ಸದ್ದಾಮನನ್ನು ಅಟ್ಟಿಸಿಕೊಂಡು ಹೋದರು. ಅಣ್ವಸ್ತ್ರ ಬಚ್ಚಿಟ್ಟುಕೊಂಡಿದ್ದಾನೆಂದು ಗೂಬೆ ಕೂರಿಸಿ ದಾಳಿ ಮಾಡಿದರು. ತಮ್ಮ ದೇಶಕ್ಕೊಯ್ದು ಅವನನ್ನು ನೇಣಿಗೂ ಏರಿಸಿದರು. ಅಲ್ಲಿಗೆ, ತಮ್ಮ ವಿರುದ್ಧ ತೊಡೆ ತಟ್ಟಿದರೆ ಯಾರೂ ಉಳಿಯಲಾರರೆಂಬ ಎಚ್ಚರಿಕೆ ರವಾನಿಸಿದರು. ತೈಲ ರಾಷ್ಟ್ರಗಳು ತೆಪ್ಪಗಾದವು. ಇನ್ನು, ಆಫ್ಘಾನಿಸ್ತಾನದಲ್ಲಿ ಅಮೆರಿಕಾ ಸೇನೆ ಬೀಡುಬಿಟ್ಟಿರುವ ಕಾರಣ ಊಹಿಸಲು ನಿಮಗೀಗ ಕಷ್ಟವಾಗದು. ಇಷ್ಟಕ್ಕೂ ಕೋಟ್ಯಂತರ ಡಾಲರು ಖರ್ಚು ಮಾಡಿ ಬೇರೊಂದು ರಾಷ್ಟ್ರವನ್ನು ಉದ್ಧರಿಸುವ ಯಾವ ಪುಣ್ಯದ ಪರಿಕಲ್ಪನೆಯೂ ಅಮೆರಿಕಾಕ್ಕೆ ಇಲ್ಲ ಬಿಡಿ.
ಈಗ ಇರಾನ್ ತೊಡೆ ತಟ್ಟಿದೆ. ಅಮೆರಿಕಾ ಗುರ್ ಎಂದಿದೆ. ಆದರೆ ಈಗಿನ ಪರಿಸ್ಥಿತಿ ಕೊಂಚ ಭಿನ್ನ. ಚೀನಾದ ಕಂಪನಿಗಳೂ ಈಗ ತೈಲ ಸಂಸ್ಕರಣದ ಮುಂಚೂಣಿಯಲ್ಲಿವೆ. ಆ ರಾಷ್ಟ್ರಗಳಿಗೆ ಚೀನಾ ಸಹಾಯ ಮಾಡಿ ಒಲಿಸಿಕೊಂಡಿದೆ. ಅಮೆರಿಕಾ ಮಿಸುಕಾಡಿದರೆ, ಚೀನಾ ಬೆಂಬಲಿಸುವ ಭರವಸೆ ಅವಕ್ಕಿದೆ. ಹೀಗಾಗಿ ಅಮೆರಿಕಾ ಚೀನಾದ ಮೇಲೊಂದು ಕಣ್ಣಿಟ್ಟಿದೆ. ಭಾರತಕ್ಕೆ ಸೈನಿಕ ಸಹಾಯ ನೀಡಿ ಚೀನಾವನ್ನು ಕೆಳತಳ್ಳುವ ಚಿಂತನೆಯೂ ಇದ್ದರೆ ಅಚ್ಚರಿ ಬೇಡ.
***
ಇನ್ನೀಗ ಸ್ವಲ್ಪ ಭಾರತಕ್ಕೆ ಬನ್ನಿ. ಇಂತಹದೊಂದು ಭಯಾನಕ ಮಾಫಿಯಾದೊಳಕ್ಕೆ ಕೈಹಾಕುವ ಛಾತಿ ಪ್ರಧಾನಿ ಮನಮೋಹನ ಸಿಂಗರಿಗೆ ಇದೆ ಅನ್ನಿಸುತ್ತಾ? ಖಂಡಿತ ಇಲ್ಲ. ಅವರೇನಿದ್ದರೂ ಇದ್ದದ್ದು ಇದ್ದಹಾಗೆ ನಡೆದುಕೊಂಡು ಹೋದರೆ ಸಾಕು ಅನ್ನೋದು. ನಮಗೊಂದು ಸವಾಲು ಈಗ ಇದೆ. ಎಂದಿದ್ದರೂ ಖಾಲಿಯಾಗುವ ಈ ತೈಲ ನಿಕ್ಷೇಪದ ಹಿಂದೆ ಓಡುವ ಬದಲು ಶಕ್ತಿ ಉತ್ಪಾದನೆಗೆ ಹೊಸ ಮಾರ್ಗ ಹುಡುಕೋ ಪ್ರಯತ್ನ ಮಾಡಬಹುದೇ? ಅದಾಗಲೇ ಭಾರತ ಮೂಲದ ಅಮೆರಿಕಾ ಉದ್ಯಮಿ ವಿನೋದ್ ಖೋಸ್ಲಾ ಇದರ ಬೆನ್ನತ್ತಿ ಹೊರಟಿದ್ದಾರೆ. ಎಥೆನಾಲ್ ಬಳಸಿ ಪೆಟ್ರೋಲ್-ಡೀಸೆಲ್ ಗಳ ಕ್ಷಮತೆ ಹೆಚ್ಚಿಸುವ ಬಗ್ಗೆ ಮಾತು ಶುರು ಮಾಡಿದ್ದಾರೆ. ನಮ್ಮ ದೇಶದಲ್ಲಿ ಮಾತ್ರ ಈ ಬಗ್ಗೆ ಚಿಂತನೆಗಳೇ ನಡೆಯುತ್ತಿಲ್ಲ. ನಮ್ಮ ಇಂಜಿನಿಯರಿಂಗ್ ಕಾಲೇಜುಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಐಐಟಿಗಳಲ್ಲಿ ಬಯೋಫ್ಯೂಯೆಲ್ ಬಗ್ಗೆ ಸೆಮಿನಾರುಗಳು ನಡೆಯುತ್ತಿವೆಯಾದರೂ ಪರಿಹಾರ ದಕ್ಕಿಲ್ಲ. ನಾವೀಗ ಹೊಸ ಶತಮಾನದತ್ತ ಹೆಜ್ಜೆ ಇಡಬೇಕಿದೆ. ಹೊಸ ಶಕ್ತಿಯನ್ನು ಅರಸಬೇಕಿದೆ.
ಅಂದಹಾಗೆ, ಗೋದಾವರೀ ತೀರದಲ್ಲಿ ಸಾಕಷ್ಟು ತೈಲನಿಧಿ ಪತ್ತೆಯಾಗಿದೆ. ಬೇಡಬೇಡವೆಂದರೂ ತೈಲ ಮಾಫಿಯಾದೊಳಕ್ಕೆ ನಾವು ನುಗ್ಗಬೇಕಿದೆ. ಊರ ಹಬ್ಬ ಇನ್ನು ಮುಂದೈತೆ!

Comments are closed.