ವಿಭಾಗಗಳು

ಸುದ್ದಿಪತ್ರ


 

ಓ ಮೈ ಗಾಡ್! ಅವರಿಗ್ಯಾಕೆ ಹೊಟ್ಟೆಯುರಿ!?

ಲೇವಡಿ ಮಾಡೋದಕ್ಕೂ ಒಂದು ಮಿತಿ ಇದೆ. ಸಹಿಸಿಕೊಳ್ಳುತ್ತೇವೆ ಎಂದ ಮಾತ್ರಕ್ಕೆ ಹಿಂದೂ ಸೇವತೆಗಳ, ಸಂತರ ಸಾರಾಸಗಟು ಅವಮಾನ ಮಾಡೋ ಎಷ್ಟು ಸರಿ?
ಅನಿವಾರ‍್ಯವಾಗಿ ’ಓ ಮೈ ಗಾಡ್’ ಸಿನಿಮಾ ನೋಡುವಾಗ ಹೀಗೆಲ್ಲ ಅನ್ನಿಸುತ್ತಿತ್ತು. ರವಿಶಂಕರ್ ಗುರೂಜಿಯವರನ್ನು, ಅವರೊಂದಿಗೆ ಕಾವಿಧಾರಿ ಸಂತ ಗಣವನ್ನು ಅದೆಷ್ಟು ತುಚ್ಛವಾಗಿ ತೋರಿಸಲಾಗಿದೆ ಎಂದರೆ, ಪ್ರತಿಯೊಬ್ಬ ಶ್ರದ್ಧಾವಂತ ಹಿಂದೂವಿನ ಹೊಟ್ಟೆ ಉರಿಯುವಷ್ಟು.
ಹೌದು, ಹಿಂದೂ ಸಮಾಜದ ವೈಶಿಷ್ಟ್ಯವೇ ಸವಾಲುಗಳಿಗೆ ತಮ್ಮನ್ನು ಒಡ್ಡಿಕೊಳ್ಳೋದು. ಹೊಸ ಹೊಸ ಪ್ರಶ್ನೆಗಳಿಗೆ ಹಿಂದು ಎಂದೂ ಬೆನ್ನು ತೋರಿಸಿದ್ದೇ ಇಲ್ಲ. ಈ ಪ್ರಶ್ನೆಗಳಿಗೆ ಹಿಂದಿನವರ ಬೋಧನೆಗಳಲ್ಲಿ ಉತ್ತರ ದೊರೆಯದೆ ಹೋದಾಗ ಸರಿಯಾದ ಉತ್ತರ ಕೊಟ್ಟವರನ್ನು ಅನುಸರಿಸುವಲ್ಲಿ ಹಿಂದೆ ಬಿದ್ದದ್ದೂ ಇಲ್ಲ. ಹೀಗಾಗಿಯೇ ವೇದಗಳನ್ನು ಪ್ರಶ್ನಿಸಿದ, ಆಚರಣೆಗಳನ್ನು ಧಿಕ್ಕರಿಸಿದ ಬುದ್ಧನನ್ನೂ ಸ್ವೀಕರಿಸಿದವರು ನಾವು.
ದೇವರ ಪ್ರಶ್ನೆ, ಆತನ ಅಸ್ತಿತ್ವದ ಚರ್ಚೆ- ಓ ಮೈ ಗಾಡ್‌ನ ನಿರ್ದೇಶಕರಿಂದ ಶುರುವಾದದ್ದೂ ಅಲ್ಲ, ಅಲ್ಲಿಗೆ ನಿಲ್ಲುವಂಥದ್ದೂ ಅಲ್ಲ. ಈ ನೆಲದಲ್ಲಿ ಅದನ್ನು ಕುರಿತ ಪ್ರಶ್ನೆಗಳು ಉಪನಿಷತ್ತಿನ ಕಾಲದಿಂದಲೂ ಇವೆ. ಯಮನಿಗೆ ನಚಿಕೇತ ಕೇಳಿದ ಪ್ರಶ್ನೆಗಳು, ಕೇನೋಪನಿಷತ್ತಿನಲ್ಲಿ ಪಿಪ್ಪಲಾದರು ಕೊಡುವ ಉತ್ತರಗಳು ಇವೆಲ್ಲ ಇದರ ಸುತ್ತಮುತ್ತ ತಿರುಗಾಡುವಂಥದ್ದೇ. ಆದರೆ ಅಲ್ಲೆಲ್ಲ ಸೂಕ್ಷ್ಮ ರೂಪದ ಭಗವಂತ ಪರಿಕಲ್ಪನೆ ಇದೆ. ಆಮೇಲಿನ ಕಾಲದಲ್ಲಿ ಸ್ಥೂಲ ರೂಪದ ಭಗವಂತನ ಪರಿಕಲ್ಪನೆ ಬಂತು. ಅವನಿಗೆ ಆಕಾರ ಸಿಕ್ಕಿತು. ಕೈಗಳಲ್ಲಿ ಆಯುಧಗಳು, ಅಭಯ ಮುದ್ರೆಯೂ ಬಂತು. ಹಣಕ್ಕೊಬ್ಬರು, ವಿದ್ಯೆಗೊಬ್ಬರು ಹುಟ್ಟಿಕೊಂಡರು. ರೂಪವಾಗಿ ಕಂಡರೆ ಇವೆಲ್ಲವೂ ನಗು ತರಿಸುವಂಥದ್ದೇ. ಆದರೆ ತತ್ತ್ವವಾಗಿ ನಿಂತಾಗ ಯಾವುವೂ ಸಾಮಾನ್ಯವಲ್ಲ.
ಎಲ್ಲವನ್ನೂ ಹೊರಗೆ ಹುಡುಕುವ ಪ್ರಯತ್ನ ಶುರುವಾದಾಗಲಿಂದ ನಮಗೊಂದು ಸಮಸ್ಯೆ ಉಂಟಾಗಿದೆ. ಇಂದ್ರಿಯಗಳ ಅನುಭವಕ್ಕೆ ಬರದಿದ್ದುದು ಇಲ್ಲವೇ ಇಲ್ಲ ಅಂತೇವೆ. ಕೆಲವೊಮ್ಮೆ ಕಣ್ಣಿಗೆ ಕಾಣದ್ದು ಅನುಭವಕ್ಕೆ ದಕ್ಕುತ್ತದೆ. ಅದು ವಿವರಣೆಗೆ ನಿಲುಕದ ಅನುಭೂತಿ. ಸಿಯಾಚಿನ್ ತುದಿಯಲ್ಲಿನ ಚಳಿಯನ್ನು ಕರಾವಳಿಯ ಜನರಿಗೆ ವಿವರಿಸಿ ಹೇಳಿದಂತೆ ಇದು. ಈ ಜಂಜಡವೇ ಬೇಡವೆಂದು ಡಿವಿಜಿಯಂತಹ ಸಾಹಿತ್ಯ ರತ್ನಗಳು ಕೂಡ ’ದೇವರಿಗೆ ನಮಸ್ಕರಿಸಬೇಕೋ ಇಲ್ಲವೋ ತಿಳಿಯದು. ಆದರೆ ಯಾವುದನ್ನು ನೋಡದೆಯೂ ಜನ ಶ್ರದ್ಧೆಯಿಂದ ನಂಬಿಕೊಂಡಿದ್ದಾರೋ ಆ ವಿಚಿತ್ರಕ್ಕಾದರೂ ನಮಸ್ಕರಿಸಿಬೇಕು’ ಎಂದಿದ್ದು. ಇದು ನಿಜವಲ್ಲವೆ? ದೇವರೂ ಒಂಥರಾ ವಿಚಿತ್ರ. ಆತ ಎಂದಿಗೂ ತನ್ನ ಇರುವನ್ನು ಸಾಬೀತುಪಡಿಸಲಿಲ್ಲವೆಂದರೆ ಸಮಸ್ಯೆಯೇ ಇಲ್ಲ. ಆಗೀಗ ಕೆಲವರ ಮೂಲಕ ಆತ ಪ್ರಸ್ತುತಗೊಳ್ಳುತ್ತಾನೆ. ಅಸಾಧ್ಯವಾದ ಪರಿಸ್ಥಿತಿಯ ಮೂಲಕವೂ ಸಾಧ್ಯತೆಯ ಬೆಳ್ಳಿಗೆರೆ ತೋರಿಸಿಬಿಡುತ್ತಾನೆ.

ಧಾರ್ಮಿಕ ಮುಖಂಡರನ್ನು ಲೇವಡಿ ಮಾಡುವಂತಿರುವ ಓ ಮೈ ಗಾಡ್ ಚಿತ್ರದ ಒಂದು ದೃಶ್ಯ

ಯಾವಾಗಲಾದರೂ ಸಖರಾಯ ಪಟ್ಟಣದ ಅವಧೂತರನ್ನು ಭೇಟಿಯಾಗಿ ಬಂದವರನ್ನು ಮಾತನಾಡಿಸಿ. ಅವರಿಗೆ ಭಗವಂತನ ಮೇಲೆ ವಿಶ್ವಾಸ ಮೊದಲಿಗಿಂತಲೂ ಹೆಚ್ಚಿಬಿಟ್ಟಿರುತ್ತದೆ. ಫೆಬ್ರವರಿಯಲ್ಲಿ ಅಲಹಾಬಾದ್‌ನಲ್ಲೊಂದು ಕುಂಭಮೇಳವಾಗತ್ತೆ. ಅದಕ್ಕೆ ಹೋಗಿ ಬನ್ನಿ. ರೇಷಿಮೆಯ ಝಗಮಗಿಸುವ ಬಟ್ಟೆ ಉಟ್ಟ ಸಾಧುಗಳು, ಬಟ್ಟೆಯೇ ತೊಡದೆ ಆಕಾಶವನ್ನೆ ಹೊದ್ದ ನಾಗಾಗಳ ನಡುವೆ ಯಾರಿಗೂ ಕಾಣದಂತೆ ತಮ್ಮ ಪಾಡಿಗೆ ತಾವು ಆನಂದದಲ್ಲಿ ತೇಲಾಡುತ್ತ, ಪವಿತ್ರ ಸ್ನಾನಕ್ಕೆ ಹಾತೊರೆಯುತ್ತ ಇರುತ್ತಾರಲ್ಲ, ಅವರಿಗಾಗಿ ಹುಡುಕಾಡಿ. ಅಂಥವರನ್ನೊಮ್ಮೆ ನೋಡಿಬಿಟ್ಟರೆ ದೇವರು ಹೇಗಿರಬಹುದೆಂಬ ಅಂದಾಜು ನಿಮಗಾಗತ್ತೆ. ಇಷ್ಟಕ್ಕೂ ನಂಬಲೇಬಾರದೆಂಬ ಹಟವಾದಿಗಳು ನೀವಾಗಿದ್ದರೆ ಅದಕ್ಕೆ ಉತ್ತರ ಕೊಡಲಾಗುವುದಿಲ್ಲ. ಅದು ಮನಸ್ಸಿಗೆ ಸಂಬಂಧಪಟ್ಟ ಪ್ರಶ್ನೆ ಮಾತ್ರ.
ಹಾ! ಅಂದಹಾಗೆ ವಿಜ್ಞಾನವೂ ಈ ಮಾತನ್ನ ಒಪ್ಪುತ್ತೆ. ಕ್ವಾಂಟಮ್ ಸಿದ್ಧಾಂತ ಪ್ರಕಟಗೊಂಡ ನಂತರ ಜಗತ್ತು ಅನೇಕ ತಿರುವುಗಳನ್ನು ಕಂಡಿದೆ. ಬೆಳಕಿನ ಪುಂಜವೊಂದು ನಮ್ಮೆಡೆಗೆ ಬರುವಾಗ ಹೇಗೆ ಚಲಿಸುತ್ತೆ? ಎಂಬ ಪ್ರಶ್ನೆಗೆ ವಿಜ್ಞಾನಿಗಳು ’ಅಲೆಗಳಂತೆ, ಶುದ್ಧ ಸಿಪಾಯಿಗಳಾಗಿ’ ಎಂದು ಉತ್ತರಿಸಿದ್ದರು. ಅದನ್ನು ಸಾಬೀತೂ ಪಡಿಸಿದರು. ಕ್ವಾಂಟಮ್ ಸಿದ್ಧಾಂತ ಚಾಲ್ತಿಗೆ ಬಂದ ಮೇಲೆ ಮತ್ತೊಂದಷ್ಟು ವಿಜ್ಞಾನಿಗಳು ಹೇಳಿದರು, ’ಹಾಗಿಲ್ಲ. ಬೆಳಕಿನ ಪುಂಜ ಶಾಲೆ ಬಿಟ್ಟ ಮಕ್ಕಳಂತೆ ಅಡ್ಡಾದಿಡ್ಡಿಯಾಗಿ ಬಂದು ಎರಗುತ್ತವೆ’ ಎಂದು. ಹೀಗೆ ಹೇಳಿದ್ದಷ್ಟೇ ಅಲ್ಲ, ಅವರದನ್ನು ಸಾಬೀತೂ ಪಡಿಸಿದರು. ಆದರೆ, ಒಂದೇ ಬೆಳಕಿನ ಕಿರಣ ಒಮ್ಮೆ ಶಿಸ್ತಿನಿಂದ ಅಲೆಯಾಗಿ, ಮತ್ತೊಮ್ಮೆ ಚದುರಿದ ಅಶಿಸ್ತಿನ ಕಣವಾಗಿ ನಡೆದಾಡಿದ್ದು ಹೇಗೆ? ತಲೆ ಕೆಡಿಸಿಕೊಂಡ ಬುದ್ಧಿವಂತರೆಂದರು, ’ಅದು ಬೆಳಕಿನ ಇಚ್ಛೆ’.
ಅರೆ ವಾಹ್! ಬೆಳಕಿಗೂ ಇಚ್ಛೆಯಾ? ಅದಕ್ಕೂ ಮನಸ್ಸಿದೆಯಾ? ಹಾಗಿದ್ದರೆ ಈ ಎಲ್ಲ ಮನಸ್ಸಿಗೂ ಕೇಂದ್ರವಿದೆಯಾ ಎಂಬ ಚರ್ಚೆಗಳು ಶುರುವಾದುವಲ್ಲ, ಆಗಲೇ ವಿಶ್ವಪ್ರಜ್ಞೆಯ ಪರಿಕಲ್ಪನೆ ಹುಟ್ಟಿಕೊಂಡಿದ್ದು. ಈ ವಿಶ್ವಪ್ರಜ್ಞೆಯನ್ನೆ ಕೆಲವರು ಶಕ್ತಿ ಎಂದರು, ಕೆಲವರು ದೇವರು ಎಂದರು. ಈ ವಿಶ್ವ ಶಕ್ತಿಯೊಂದಿಗೆ ತಮ್ಮ ಶಕ್ತಿಯನ್ನು ಟ್ಯೂನ್ ಮಾಡಿಕೊಳ್ಳುವ ಬಗೆ ಕೆಲವರಿಗೆ ಧ್ಯಾನ ಎನ್ನಿಸಿದರೆ, ಮತ್ತೆ ಕೆಲವರಿಗೆ ಅದು ಆಚರಣೆ ಎನ್ನಿಸಿತು ಅಷ್ಟೆ.
ಕೊಂಕಣಿ ಭಾಷೆ ತನಗೆ ಅರ್ಥವಾಗುವುದಿಲ್ಲ, ತನಗೆ ಬರುವುದಿಲ್ಲ ಅಂದ ಮಾತ್ರಕ್ಕೆ ಆ ಭಾಷೆಯೇ ಸರಿಯಿಲ್ಲ ಅನ್ನುವುದು ಎಷ್ಟು ತಪ್ಪೋ ತನಗೆ ದೇವರ ಅರಿವಾಗಲಿಲ್ಲ ಎಂದ ಮಾತ್ರಕ್ಕೆ ಆರಾಧಕರನ್ನು ಟೀಕಿಸುವುದೂ ಮಂದಿರದಿಂದ ದೂರ ತಳ್ಳುವುದೂ ಅಷ್ಟೇ ತಪ್ಪು. ಬಹುಶಃ ಮೂರ್ಖತನವೂ ಹೌದು.
ಹಾಗಂತ ದೇವರ ಹೆಸರಲ್ಲಿ ವ್ಯಾಪಾರಕ್ಕಿಳಿದವರನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಸಮಾಜದಲ್ಲಿ ಹರಡಿರುವ ಈ ಭಯಾನಕ ವಾತಾವರಣಕ್ಕೆ ಅವರುಗಳೇ ಕಾರಣ. ದೇವರನ್ನು ಇವರೆಲ್ಲ ಸೇರಿ ಮಾರ್ಕೆಟಿಂಗ್ ಎಕ್ಸಿಗ್ಯುಟಿವ್ ಆಗಿಸಿಬಿಟ್ಟಿದ್ದಾರೆ. ಪುರಿಯ ಜಗನ್ನಾಥ ಮಂದಿರದಲ್ಲಿ ಸಾಲು ನಿಂತವರ ತಲೆಯ ಮೇಲೆ ಪುಜಾರಿಯೊಬ್ಬ ಪೊರಕೆಯಿಂದ ಹೊಡೆದು ನೂರು ರೂಪಾಯಿ ಕೇಳುತ್ತಾನೆ. ಗೋಕರ್ಣದಲ್ಲಿ ಶಿವಲಿಂಗ ಮುಟ್ಟಿದಾಕ್ಷಣ ದಕ್ಷಿಣೆ ಇಡಿ ಎಂದು ಕೇಳಲಾಗತ್ತೆ. ಎಲ್ಲ ಬಿಡಿ. ಪ್ರತಿನಿತ್ಯ ಬೆಳಗ್ಗೆ ಯಾವ ಚಾನಲ್ ಹಾಕಿದರೂ ನಮ್ಮ ಭವಿಷ್ಯದೊಂದಿಗೆ ಚೆಲ್ಲಾಟವಾಡುವ, ತಮ್ಮ ಭವಿಷ್ಯವನ್ನೇ ರೂಪಿಸಿಕೊಳ್ಳಲಾಗದ ಜ್ಯೋತಿಷಿಗಳ ಸೋಗಿನವರು ಕಣ್ಣಿಗೆ ರಾಚುತ್ತಾರೆ.
ಇಂಥವನ್ನು ನೋಡಿ ಸೃಷ್ಟಿಯ ಆದಿಶಕ್ತಿಯ ಕುರಿತು ಚರ್ಚೆ ನಡೆಸುತ್ತೇವಲ್ಲ, ನಮ್ಮೂರಿನ ಪತ್ರಕರ್ತ ಸುದ್ದಿ ಬರೆಯಲು ಐನೂರು ರೂಪಾಯಿ ಕೇಳಿದನೆಂದ ಮಾತ್ರಕ್ಕೆ ಪತ್ರಿಕೆಯ ಒಡೆಯನೇ ಭ್ರಷ್ಟನೆಂದುಬಿಟ್ಟಂತಿಲ್ಲವೆ ಇದು!?
ಈ ರಾದ್ಧಾಂತಗಳ ಸಹವಾಸ ಬೇಡವೆಂದೇ ಸ್ವಾಮಿ ವಿವೇಕಾನಂದರು, ರಾಮತೀರ್ಥರು, ಅರವಿಂದರೆಲ್ಲ ಮಗದೊಂದು ವೇದಾಂತ ಸಿದ್ಧಾಂತವನ್ನು ಕೊಟ್ಟುಹೋದರು. ಈ ವೇದಾಂತ ಭಗವಂತನನ್ನು ಮಂದಿರಗಳಲ್ಲಿ ಕೂಡಿ ಹಾಕುವಂತಹದಲ್ಲ. ಇದು ಭಗವಂತನನ್ನು ಎಲ್ಲರಲ್ಲೂ ಕಾಣುವ ಶ್ರೇಷ್ಠ ತತ್ತ್ವ. ನಗ್ನ ಮುನಿ ತರುಣಸಾಗರರು ಹೇಳ್ತಾರಲ್ಲ, ’ನಾನು ಮಹಾವೀರರನ್ನು ಮಂದಿರದೊಳಗೆ ಅಡಗಿರಲು ಬಿಡಲಾರೆ. ಆತನನ್ನು ನಾಲ್ಕು ರಸ್ತೆ ಕೂಡುವ ಚೌಕಕ್ಕೆ ಕರೆತರುತ್ತೇನೆ.’ ಎಂದು. ಇದು ಆ ಬಗೆಯದು.
ನಮ್ಮ ಜ್ಯೋತಿಷಿಗಳು ಹೇಳುವಂತೆ ಭಯಾನಕನಾಗಿಲ್ಲ ದೇವರು. ಆತ ಶಿಕ್ಷಿಸುವ ಕಸಾಯಿಯಲ್ಲ. ಬುದ್ಧ ಹೇಳಿದಂತೆ, ’ಆತ ಪ್ರೇಮದ ಮೂರ್ತಿ.’ ಭಾರತೀಯರಂತೂ ಈ ಭಗವತ್ಪ್ರೇಮದ ಅಮಲು ಕುಡಿದವರೇ. ಇಲ್ಲವಾದಲ್ಲಿ, ಮೀರಾಳಂತಹ, ಚೈತನ್ಯರಂತಹ, ಅಕ್ಕಮಹಾದೇವಿಯಂತಹ, ಕನಕ-ಪುರಂದರರಂತಹ ಸಂತರು ನಮ್ಮ ನಡುವೆ ನಡೆದಾಡಲು ಸಾಧ್ಯವೇ ಇರಲಿಲ್ಲ. ಬುದ್ಧನ ಮಾತುಗಳೇ ಮುಂದೆ ಪಶ್ಚಿಮದಲ್ಲಿ ಕ್ರಿಸ್ತನ ಹೆಸರಲ್ಲಿ ಅನುರಣಿತಗೊಂಡಿತು ಎಂದು ಆಮೇಲಿನ ದಿನಗಳಲ್ಲಿ ಅಧ್ಯಯನಕಾರರು ಸಾಬೀತುಪಡಿಸಿದ್ದಾರೆ.
ಚೀನಾದ ರಾಯಭಾರಿ ಭಾರತಕ್ಕೊಮ್ಮೆ ಬಂದು ದೇಶ ಸುತ್ತಾಡಿದನಂತೆ. ಮರಳಿ ತನ್ನ ದೇಶಕ್ಕೆ ಹೊರಡುವ ಮುನ್ನ ’ಭಾರತವನ್ನು ನೋಡಿ ನನಗೆ ಭಗವಂತನ ಇರುವಿಕೆಯ ಮೇಲೆ ವಿಶ್ವಾಸ ಮೂಡಿದೆ.’ ಎಂದು ಹೇಳಿದನಂತೆ. ಅರ್ರೆ! ಎಲ್ಲರಿಗೂ ಅಚ್ಚರಿ. ಭಾರತ್ಕಕೆ ಬಂದುಹೋದ ಮಾತ್ರದಿಂದಲೇ ಭಗವಂತನ ಮೇಲೆ ವಿಶ್ವಾಸ ಮೂಡಿತೆಂದರೆ ಮತ್ತೇನು!? ಅಷ್ಟಕ್ಕೇ ನಾಸ್ತಿಕನೊಬ್ಬ ಆಸ್ತಿಕನಾಗಿಬಿಟ್ಟನಾ? ಮುಂದುವರೆದು ಆ ರಾಯಭಾರಿ ಹೇಳಿದ, ’ಇಷ್ಟೊಂದು ಸ್ವಾರ್ಥ, ಭ್ರಷ್ಟಾಚಾರಗಳಿದ್ದೂ ಈ ದೇಶ ಇಷ್ಟೊಂದು ಪ್ರಗತಿ ಸಾಧಿಸುತ್ತಿದೆಯೆಂದರೆ ಇದು ದೇವರದ್ದೇ ಕೈವಾಡ. ಅನುಮಾನವೇ ಇಲ್ಲ!’ ತಮಾಷೆಗೆ ಹೇಳಿದ್ದಾದರೂ ಸುಮ್ಮನೆ ಕುಳಿತು ಯೋಚಿಸಿದರೆ ಈ ಮಾತು ಹೌದೆನ್ನಿಸಿಬಿಟುತ್ತದೆ ಅಲ್ಲವೆ?
ದೇವರ ಬಗ್ಗೆ ಮಾತನಾಡುತ್ತ ಆಡುತ್ತ ಅದೆಲ್ಲಿಯವರೆಗೆ ಬಂದುಬಿಟ್ಟೆವು ನೋಡಿ. ದೇವರ ವಿಚಾರವೇ ಹಾಗೆ. ಆ ಮಹಾ ಸಮುದ್ರದಲ್ಲಿ ಮುಳುಗು ಹಾಕಿದರೆ ತೇಲಾಡುತ್ತಿರುವಂಥ ಆನಂದ ದೊರೆಯುತ್ತದೆ. ಅಲ್ಲಿ ಉಸಿರುಕಟ್ಟುವ ಪ್ರಶ್ನೆಯೇ ಇಲ್ಲ. ಆದರೆ ಈಗ ಪ್ರಶ್ನೆ ಇರೋದು ಹೀಗೆ ಕೋಟ್ಯಂತರ ಜನರು ಶ್ರದ್ಧೆಯಿಂದ ನಂಬುವ ವಿಚಾರಕ್ಕೆ ಕೊಳ್ಳಿ ಇಟ್ಟು ಗಹಗಹಿಸಿ ನಗುವುದು ಸರಿಯೇ? ಇಷ್ಟಕ್ಕೂ ಆ ಚಿತ್ರದಲ್ಲಿ ನಿರ್ದೇಶಕರು ಕೇಳುವ ಪ್ರಶ್ನೆ ಇದೆಯಲ್ಲ, ಅದು ನಮ್ಮೂರಿನ ಸಾಮಾನ್ಯ ಹೈಸ್ಕೂಲ್ ಹುಡುಗನೂ ಕೇಳುವಂಥದ್ದು. ಆ ಪ್ರಶ್ನೆ ನಿಮ್ಮಲ್ಲಿ ವೈಚಾರಿಕ ಚರ್ಚೆಯನ್ನೇನೂ ಹುಟ್ಟು ಹಾಕಲಾರದು; ಸ್ವತಃ ಪರಿವರ್ತನೆಗೂ ಪ್ರೇರೇಪಿಸಲಾರದು. ಹೆಚ್ಚೆಂದರೆ ನಮ್ಮ ನಾಡಿನಲ್ಲಿರುವ ಕೆಲವು ಬುದ್ಧಿ ಜೀವಿಗಳಿಗೆ ಉಲ್ಲೇಖಿಸಲು ಒಂದು ಸಿನಿಮಾ ಸಿಗಬಹುದು ಅಷ್ಟೆ.
ಮನೆಯಲ್ಲಿ ಅಪ್ಪ ಅಮ್ಮ ಕುಳಿತು ಮಗುವಿಗೆ ’ನಿಮ್ಮ ಶಿಕ್ಷಕರು ಅಯೋಗ್ಯರು. ಅವರಿಗೆ ಏನೂ ಗೊತ್ತಿಲ್ಲ’ ಎಂದು ಜರಿದರು ಎಂದಿಟ್ಟುಕೊಳ್ಳಿ. ಅದರ ಪರಿಣಾಮವೇನು ಗೊತ್ತೆ? ಆ ಮಗುವಿಗೆ ಇರಬಹುದಾದ ಒಂದೇಒಂದು ಶ್ರದ್ಧೆಯ ಕೇಂದ್ರವೂ ನಾಶವಾಗಿಬಿಡತ್ತೆ. ಆಮೇಲೆ ಅದರ ಭವಿಷ್ಯವೂ ಅತಂತ್ರ. ದೇವಸ್ಥಾನದಲ್ಲಿರುವ ಮೂರ್ತಿಯೊಂದರ ಮೇಲೆ ಶ್ರದ್ಧೆಯನ್ನು ಕೇಂದ್ರೀಕರಿಸಿ, ದೇವರಿಗೆ ಹೆದರಿ ಬದುಕನ್ನು ಶುದ್ಧವಾಗಿ ಮಾಡಿಕೊಳ್ಳುವ ಯತ್ನ ನಡೆಸಿದರೆ ಇವರಿಗೇನು ತೊಂದರೆ?

ಎಂಜಲು ಕೈಯಿಂದ ಕಾಗೆಯನ್ನೂ ಓಡಿಸದವ ದೇವರ ಹುಂಡಿಗೆ ಹಣ ಸುರಿಯುತ್ತಾನೆ. ಜಗದ್ಗುರುಗಳ ಪಾದಕ್ಕೆ ಹಣದ ಥೈಲಿ ಅರ್ಪಿಸುತ್ತಾನೆ. ಆ ಮೂಲಕ ಒಂದಷ್ಟು ಶಾಲೆ ಕಾಲೇಜುಗಳು, ಸೇವಾ ಚಟುವಟಿಕೆಗಳು ನಡೆಯುತ್ತವೆ. ಇವರಿಗೇನು ಹೊಟ್ಟೆಯುರಿ?
ಎಯುರಿಈಗ ಒಂದು ನಿಮಿಷ ಕಣ್ಮುಚ್ಚಿ, ಮಠ ಮಂದಿರಗಳಿಗೆ ನಾವು ಹೋಗುವಂತಾಗಬಾರದು ಎಂಬುದರ ಹಿಂದೆ ಇರುವ ಇವರ ಒತ್ತಾಯದ ಹಿಂದಿರುವ ಷಡ್ಯಂತ್ರವೇನಿರಬಹುದು ಎಂದು ಊಹಿಸಿ. ನಿಮಗೆ ಅರಿವಿಲ್ಲದಂತೆ ನೀವೇ ಉದ್ಗಾರ ಮಾಡ್ತೀರಿ, ’ಓಹ್ ಮೈ ಗಾಡ್!’

Comments are closed.