ವಿಭಾಗಗಳು

ಸುದ್ದಿಪತ್ರ


 

ಕೆರೆ ಮಾರಿದ್ದಾರೆ ಗೊತ್ತಾ?!

ನೀರು ಸಂಪತ್ತು ಎನ್ನುವುದು ಕಳಕೊಂಡಾಗಲೇ ಗೊತ್ತಾಗೋದು. ಕೋಟಿಗಟ್ಟಲೆ ಹಣವನ್ನು ತಿಜೋರಿಯಲ್ಲಿ ಶೇಖರಿಸಿಡಬಹುದು ನಿಜ. ಆದರೆ ಅಷ್ಟರಿಂದಲೂ ಒಂದು ಹನಿ ನೀರನ್ನು ಉತ್ಪಾದಿಸಲು ಸಾಧ್ಯವಾಗದು. ನಾವು ಇದನ್ನು ಎಷ್ಟು ಬೇಗ ಅರಿತುಕೊಳ್ಳುತ್ತೇವೋ ಅಷ್ಟು ಒಳಿತು. ಈಗಾಗಲೇ ದೇಶದ ಮಹಾನಗರಗಳೆಲ್ಲವೂ ನೀರಿನ ಕೊರತೆಯಿಂದ ಬಳಲುತ್ತಿವೆ.

ಕುಂದಾಪುರದ ಸಾಸ್ತಾನದ ಪುಟ್ಟ ಹಳ್ಳಿ ಗುಂಡ್ಮಿ. ಅಲ್ಲಿನ ವಿನಾಯಕ ದೇವಸ್ಥಾನದ ಎದುರಿಗೆ ಅರ್ಧ ಎಕರೆ ಮೀರಿಸುವ ಸುಂದರವಾದ ಪುಷ್ಕರಿಣಿ. ಆದರೆ ರಸ್ತೆ ಅಗಲೀಕರಣದ ನೆಪದಲ್ಲಿ ಅದನ್ನು ಮಣ್ಣು ತುಂಬುವ ಹೊಂಡವನ್ನಾಗಿ ಮಾಡಿಕೊಂಡುಬಿಟ್ಟರು. ನಾಲ್ಕೂ ದಿಕ್ಕುಗಳಲ್ಲಿದ್ದ ಕಲ್ಲಿನ ಕಟ್ಟಡದಲ್ಲಿ ಒಂದೆಡೆಯದ್ದನ್ನು ಪೂತರ್ಿ ಧ್ವಂಸಗೊಳಿಸಲಾಯ್ತು. ಈಗ ಆ ಪುಷ್ಕರಿಣಿ ಮಳೆಗಾಲದಲ್ಲಿ ಒಂದಷ್ಟು ನೀರನ್ನು ಹಿಡಿದುಕೊಳ್ಳುತ್ತಿತ್ತು. ಅಲ್ಲಿಯೇ ನಿಂತು ಕೊಳೆತು ನಾರುತ್ತಾ ಸೊಳ್ಳೆಗಳಿಗೆ ಸೂಕ್ತ ತಾಣವಾಗುತ್ತಿತ್ತು. ಎದುರಿಗಿರುವ ಗಣೇಶನಿಗೆ ಈ ದುನರ್ಾಥ ಸದಾ ಅನುಭವಿಸಲೇಬೇಕಾಗುತ್ತಿದ್ದ ಯಾತನೆಯಾಗಿತ್ತು. ಸ್ಥಳೀಯ ಯುವಾಬ್ರಿಗೇಡ್ನ ಒಂದಷ್ಟು ತರುಣರು ಇದಕ್ಕೊಂದು ಪರಿಹಾರ ಹುಡುಕಬೇಕೆಂದು ಕಲ್ಯಾಣಿಯೊಳಕ್ಕಿಳಿದರು, ಗಟ್ಟಿಗೊಂಡಿದ್ದ ಮಣ್ಣನ್ನು ಅಗೆದು ತೆಗೆದರು.

2

ಆರು ವಾರಗಳ ಕಾಲ ವಾರಾಂತ್ಯಗಳಲ್ಲಿ ಬಿಟ್ಟೂಬಿಡದೇ ಕೆಲಸ ಮಾಡುತ್ತಾ 30 ಟಿಪ್ಪರ್ಗಳಿಗಿಂತಲೂ ಹೆಚ್ಚು ಮಣ್ಣನ್ನು ಕಲ್ಯಾಣಿಯಿಂದ ಹೊರದಬ್ಬಿದರು. ಎಲ್ಲರಿಗೂ ಧಾವಂತವಿತ್ತು. ಮಳೆಗಾಲ ಶುರುವಾಗುವ ಮುನ್ನವೇ ಕಲ್ಯಾಣಿ ಮತ್ತೆ ನೀರಿಂಗಿಸಿಕೊಳ್ಳಲು ಸಿದ್ಧವಾಗಿ ನಿಲ್ಲಬೇಕಿತ್ತು. ಹಾಗೆಯೇ ಆಯ್ತು ಕೂಡ. ಕಲ್ಯಾಣಿಯ ಕೆಲಸ ಮುಗಿದ ಕೆಲವು ದಿನಗಳಲ್ಲೇ ಭರ್ಜರಿ ಮಳೆಯಾಗಿ ಕಲ್ಯಾಣಿ ತುಂಬಿತು. ಹಳೆಯ ವೈಭವವನ್ನು ನೆನಪಿಸಿತು. ಮೊನ್ನೆ ಇತ್ತೀಚೆಗೆ ಗ್ರಾಮಸ್ಥರೆಲ್ಲಾ ಸೇರಿ ಕಲ್ಯಾಣಿಗೆ ದೀಪೋತ್ಸವವನ್ನು ಆಚರಿಸುವಾಗ ಅಲ್ಲಿನ ಜನರ ಮುಖದಲ್ಲಿದ್ದ ಮಂದಹಾಸವನ್ನು ನೋಡಬೇಕಿತ್ತು.

ನೀರು ಸಂಪತ್ತು ಎನ್ನುವುದು ಕಳಕೊಂಡಾಗಲೇ ಗೊತ್ತಾಗೋದು. ಕೋಟಿಗಟ್ಟಲೆ ಹಣವನ್ನು ತಿಜೋರಿಯಲ್ಲಿ ಶೇಖರಿಸಿಡಬಹುದು ನಿಜ. ಆದರೆ ಅಷ್ಟರಿಂದಲೂ ಒಂದು ಹನಿ ನೀರನ್ನು ಉತ್ಪಾದಿಸಲು ಸಾಧ್ಯವಾಗದು. ನಾವು ಇದನ್ನು ಎಷ್ಟು ಬೇಗ ಅರಿತುಕೊಳ್ಳುತ್ತೇವೋ ಅಷ್ಟು ಒಳಿತು. ಈಗಾಗಲೇ ದೇಶದ ಮಹಾನಗರಗಳೆಲ್ಲವೂ ನೀರಿನ ಕೊರತೆಯಿಂದ ಬಳಲುತ್ತಿವೆ. ಇದ್ದ ನೀರಿನ ಸ್ರೋತಗಳನ್ನು ಕಳೆದುಕೊಂಡ ನಾವು ಅಳಿದುಳಿದಿರುವ ನದಿಗಳನ್ನು ಚರಂಡಿಯಾಗಿಸಿಬಿಟ್ಟಿದ್ದೇವೆ. ಸ್ವಾರ್ಥಕ್ಕೆ ಮಹಾನದಿಗಳನ್ನು ಬಲಿಯಾಗಿಸುತ್ತಿದ್ದೇವೆ. ದೂರದ ಯಾವುದೋ ನಗರವನ್ನು ಬಿಡಿ ಸ್ವತಃ ನಮ್ಮ ಬೆಂಗಳೂರು ಈಗ ಕಣ್ಣೀರಿಡುವ ಸ್ಥಿತಿಯಲ್ಲಿದೆ. ಕಾವೇರಿ ನೀರಿನ ಭರವಸೆಯ ಮೇಲೆ ಬೆಂಗಳೂರನ್ನು ಬೆಳೆಸಿಯೇ ಬೆಳೆಸುತ್ತಿದ್ದೇವೆ. ಸ್ವಂತ ಬಲದ ಮೇಲೆ ನಿಲ್ಲಬಲ್ಲ ಯೋಜನೆಗಳನ್ನು ಮಾತ್ರ ಮೂಲೆಗೆ ತಳ್ಳುತ್ತಿದ್ದೇವೆ. ನಾನು ವೃಷಭಾವತಿಯ ಬಗ್ಗೆಯೇ ಉಲ್ಲೇಖಿಸುತ್ತಿರೋದು. ಬೆಂಗಳೂರಿನ ನದಿ ಎಂದರೆ ಅದು ಕೆರೆಗಳ ಗುಚ್ಛ. ಕೆರೆಗಳು ಹಾಳಾದರೆ ವೃಷಭಾವತಿಯ ಕಲ್ಪನೆಯೂ ಇಲ್ಲ. ಆದರೆ ಆಳುವ ಒಬ್ಬರಿಗೂ ಕೂಡ ಇದು ಅರ್ಥವಾಗುವ ಸ್ಥಿತಿಯಲ್ಲಿಲ್ಲ. ಇವರೆಲ್ಲರಿಗೂ ಕೆರೆಗಳೆಂದರೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಲು ಇರುವ ಬಿಟ್ಟಿ ಜಾಗ. ಬೆಂಗಳೂರಿನಲ್ಲಿ ಇದ್ದ ಮುಕ್ಕಾಲು ಪಾಲು ಕೆರೆಗಳನ್ನು ಅದಾಗಲೇ ಇವರು ನುಂಗಿ ನೀರು ಕುಡಿದುಬಿಟ್ಟಿದ್ದಾರೆ. ಅಳಿದುಳಿದಿರುವ ಕೆರೆಗಳನ್ನಾದರೂ ಉಳಿಸಿಕೊಳ್ಳೋಣವೆಂದರೆ ಅಲ್ಲಿಯೂ ಕೂಡ ಪರಿಸ್ಥಿತಿ ಭಯಾನಕವಾಗಿದೆ. ಅರಕೆರೆಯಲ್ಲಿರುವ ಕೆರೆಯ ಅಭಿವೃದ್ಧಿಗೆ ಹಣ ಇದೆ. ಆದರೆ ಪುಢಾರಿಗಳ ಕುಮ್ಮಕ್ಕಿನಿಂದ ಕೋಟರ್ಿಗೆ ಕೆರೆಯನ್ನೇ ಎಳೆದೊಯ್ದಿರುವ ಸ್ಥಳೀಯ ವ್ಯಕ್ತಿಯೊಬ್ಬನ ಕಾರಣದಿಂದಾಗಿ ಇಡಿಯ ಕೆರೆ ಕೊಳಕಿನ ಆಗರವಾಗಿದೆ. ಅದನ್ನು ಮತ್ತೆ ಸರಿಪಡಿಸುವುದು ಸದ್ಯಕ್ಕೆ ಸಾಧ್ಯವಿಲ್ಲವೆಂದು ಅನೇಕರು ಕೈಬಿಟ್ಟುಬಿಟ್ಟಿದ್ದಾರೆ.

3

ವೃಷಭಾವತಿಯ ದಂಡೆಯ ಮೇಲೆ ಇರುವ ಹೊಸಕೆರೆ ಹಳ್ಳಿಯ ಕೆರೆಯ ಕಥೆ ಇನ್ನೂ ವಿಚಿತ್ರವಾದುದು. ಅದನ್ನು ಸ್ವಚ್ಛಗೊಳಿಸಲೆಂದು ಮೂರು ವಾರಗಳಿಂದ ಯುವಾಬ್ರಿಗೇಡ್ನ ಕಾರ್ಯಕರ್ತರು ಪ್ರಯತ್ನಿಸುತ್ತಿರುವಾಗ ಈ ಕೆರೆ ಯಾರ ಅಧೀನದಲ್ಲಿದೆ ಎಂದು ಹುಡುಕಾಟ ನಡೆಸಿದರು. ಇದು ಬಿಬಿಎಮ್ಪಿಗೆ ಸೇರಿಲ್ಲ, ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಲ್ಲ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೂ ಸೇರಿಲ್ಲ. ಹಾಗಿದ್ದರೆ ಇದು ಯಾರ ತೆಕ್ಕೆಯಲ್ಲಿದೆ? ಸದ್ಯದ ಮಟ್ಟಿಗೆ ಯಾರಿಗೂ ಗೊತ್ತಿಲ್ಲ. ಮೂಲಗಳನ್ನು ನಂಬುವುದೇ ಆದರೆ ಸಕರ್ಾರ ಖಾಸಗಿಯವರಿಗೆ ಕೆರೆಯನ್ನು ಮಾರಿಯೇಬಿಟ್ಟಿದೆ! ಅಚ್ಚರಿಯಾಯ್ತಲ್ಲವೇ. ಇದು ಆಳುವ ಅಯೋಗ್ಯರು ಬೆಂಗಳೂರನ್ನು, ರಾಜ್ಯವನ್ನು ನಡೆಸಿಕೊಂಡಂತಹ ರೀತಿ. ಸಮಸ್ಯೆ ಇಲ್ಲಿಗೇ ನಿಂತಿಲ್ಲ. ಮೂರು ವಾರಗಳಿಂದ ತರುಣರೊಂದಷ್ಟು ಜನ ಕೆರೆ ಸ್ವಚ್ಛತೆಯ ಪ್ರಯತ್ನ ಮಾಡುತ್ತಿರುವುದನ್ನು ಕಂಡ ಖಾಸಗಿ ಸಾಹುಕಾರರು ಮತ್ತೊಂದೆಡೆಯಿಂದ ಕೆರೆಗೆ ಮಣ್ಣು ತುಂಬಿಸುವ ಕೆಲಸ ಆರಂಭಿಸಿಬಿಟ್ಟಿದ್ದಾರೆ. ಒಂದೆಡೆ ನರೇಂದ್ರಮೋದಿ ಜಲಶಕ್ತಿ ಅಭಿಯಾನ ನಡೆಸುತ್ತಾ ಅದಕ್ಕೊಬ್ಬ ಮಂತ್ರಿಯನ್ನೇ ಕೊಡುಗೆಯಾಗಿ ಕೊಟ್ಟಿದ್ದರೆ ಇತ್ತ ಅವರದ್ದೇ ಪಕ್ಷದ ಸಕರ್ಾರದ ಅವಧಿಯಲ್ಲಿ ಹೊಸಕೆರೆಹಳ್ಳಿ ಕೆರೆಯನ್ನೇ ಮುಚ್ಚಿಬಿಡುವ ಹುನ್ನಾರ ನಡೆಯುತ್ತಿದೆ. ಕೆರೆಯ ವೀಕ್ಷಣೆಗೆ ಬರುತ್ತೇನೆಂದು ಮಾತುಕೊಟ್ಟಿದ್ದ ಬೆಂಗಳೂರಿನ ಮೇಯರ್ ಮಾತುಕೊಡುವುದಕ್ಕೂ ಕೈ ಕೊಡುವುದಕ್ಕೂ ಬಹಳ ಅಂತರವನ್ನೇನೂ ಇಟ್ಟುಕೊಂಡಂತೆ ಕಾಣಲಿಲ್ಲ.

4

ಇವರಿಗೆಲ್ಲರಿಗೂ ಅಧಿಕಾರ ನಡೆಸುವುದಷ್ಟೇ ಗುರಿ. ತಮ್ಮ ಅಧಿಕಾರಾವಧಿಯಲ್ಲಿ ಭವಿಷ್ಯದ ಪೀಳಿಗೆ ಸಂತೋಷ ಪಡುವಂತಹ ವಾತಾವರಣ ರೂಪಿಸಿಕೊಡಬೇಕೆಂಬ ಎಳ್ಳಷ್ಟೂ ಇಚ್ಛೆ ಇಲ್ಲ. ಮುಂದಿನ ವಾರ ಸ್ವಚ್ಛತೆಯ ದೃಷ್ಟಿಯಿಂದ ಅಲ್ಲಿಗೆ ಹೋಗವು ವೇಳೆಗಾಗಲೇ ಬಹುಪಾಲು ಕೆರೆಯನ್ನು ಆಪೋಶನ ತೆಗೆದುಕೊಂಡುಬಿಟ್ಟಿರುತ್ತಾರೆ. ಕೆರೆಯ ಸಮಾಧಿಯ ಮೇಲೆ ಇವರುಗಳೆಲ್ಲಾ ತಮ್ಮ ಸೌಧವನ್ನು ಕಟ್ಟಿಕೊಂಡು ಮೆರೆಯುತ್ತಾರಲ್ಲಾ ಭವಿಷ್ಯ ಇವರನ್ನು ಶಪಿಸಲಿದೆ. ಎಷ್ಟು ಕೆರೆಗಳು ಸಾಯುತ್ತವೆಯೋ ಅಷ್ಟು ಬೆಂಗಳೂರಿನ ಅಂತ್ಯ ಸನ್ನಿಹಿತವಾಗುತ್ತದೆ. ಬೆಂಗಳೂರಿನ ಸಂಚಾರ ದಟ್ಟನೆ ಕಡಿಮೆ ಮಾಡಲು ನೈಸ್ ರಸ್ತೆ ಬೇಕು, ಆದರೆ ನೀರಿನ ಹಾಹಾಕರ ತಣಿಸಲು ಕೆರೆ ಬೇಡವೇನು? ಕೆರೆ, ಅರಣ್ಯಗಳನ್ನೆಲ್ಲಾ ಮಾರಿ ತಮ್ಮ ಸಂಪತ್ತು ವೃದ್ಧಿಸಿಕೊಳ್ಳುವ ಈ ಎಲ್ಲಾ ತಥಾಕಥಿತ ನಾಯಕರುಗಳನ್ನು ಇತಿಹಾಸ ಎಂದಿಗೂ ಕ್ಷಮಿಸಲಾರದು. ಆದರೆ ಅದನ್ನು ನೋಡುತ್ತಾ ನಾವುಗಳು ಸುಮ್ಮನಿದ್ದರೂ ಇತಿಹಾಸ ನಮ್ಮನ್ನು ದೂಷಿಸಲಿದೆ. ಜಾಗೃತಿಯಾಗಲೇ ಬೇಕಾಗಿರುವಂತಹ ಸಮಯ ಬಂದಿದೆ. ಸಾಸ್ತಾನದ ತರುಣರು ಶ್ರಮಹಾಕಿ ಕಲ್ಯಾಣಿಯೊಂದಕ್ಕೆ ಮರುಜೀವ ಕೊಟ್ಟರು. ಬೆಂಗಳೂರಿನ ತರುಣರು ಜೀವತೇಯ್ದು ಅಗತ್ಯಬಿದ್ದರೆ ಅಯೋಗ್ಯ ಪುಢಾರಿಗಳೊಂದಿಗೆ ಗುದ್ದಾಡಿ ಕೆರೆಯನ್ನು, ನದಿಯನ್ನು ಉಳಿಸಬೇಕಿದೆ. ನಮ್ಮ ಕಾಲದ ನಿಜವಾದ ಸವಾಲು ಇದೇ!

Comments are closed.