ವಿಭಾಗಗಳು

ಸುದ್ದಿಪತ್ರ


 

ಕೊಡುತ್ತೇನೆಂದರೆ ಬೇಡವೆನ್ನುವ ಜನ!

ನಾವು ಒಂದು ಸಭ್ಯ ಸಮಾಜವಾಗಿ ಸೋಲುತ್ತಿರುವ ಲಕ್ಷಣ ಕಣ್ಣಿಗೆ ರಾಚುತ್ತಿದೆ. ಊರಿನ ವಿಲೇಜ್ ಅಕೌಂಟೆಂಟುಗಳು ಸಕರ್ಾರದ ಸೌಲಭ್ಯಕ್ಕೆ ಅರ್ಹರಾದ ವ್ಯಕ್ತಿಗಳನ್ನು ತಾವೇ ಸಮರ್ಪಕವಾಗಿ ಹುಡುಕಿಕೊಟ್ಟುಬಿಟ್ಟರೆ ಇಂಥವರ ಅರ್ಧ ಸಮಸ್ಯೆಗಳು ನಿವಾರಣೆಯಾದಂತೆ.

ಪ್ರವಾಹ ಕಳೆದು 130ಕ್ಕೂ ಹೆಚ್ಚು ದಿನಗಳಾದವು. ನಾವೆಲ್ಲರೂ ಹಾಗೆಯೇ. ಭಾವನೆಗಳ ಉತ್ತುಂಗದಲ್ಲಿ ಎಷ್ಟು ದುಃಖಿತರೊಂದಿಗೆ ಇರುತ್ತೇವೆಯೋ ಆ ಭಾವನೆಗಳ ಪ್ರವಾಹ ಕೊಚ್ಚಿಹೋದೊಡನೆ ಎಲ್ಲವನ್ನೂ ಮರೆತುಬಿಡುತ್ತೇವೆ. ಪ್ರವಾಹದ ದೃಶ್ಯಗಳನ್ನು ಟಿವಿಯಲ್ಲಿ ನೋಡುತ್ತಿದ್ದ ಅನೇಕ ತಾಯಂದಿರು ಆ ಹೊತ್ತಿನಲ್ಲಿ ಕರೆಮಾಡಿ ಜನರ ದುಃಖವನ್ನಳಿಸಲು ಏನಾದರೂ ಮಾಡಬೇಕೆಂದು ಒಂದೇ ಸಮನೆ ರೋಧಿಸುತ್ತಿದ್ದುದನ್ನು ನಾನೇ ನೋಡಿದೆ. ಆದರೆ ಇವ್ಯಾವುವೂ ದೀರ್ಘಕಾಲದ ಆಲೋಚನೆಗಳಾಗಿ ಉಳಿಯುವುದಿಲ್ಲ. ಇದು ಆಧ್ಯಾತ್ಮಿಕ ದೃಷ್ಟಿಯಲ್ಲಿ ಹೇಳುವ ಮಾಯೆಯ ಪ್ರಭಾವವೋ ಅಥವಾ ಮೆದುಳಿನ ಹೊರ ಆವರಣದಲ್ಲಿ ಮಾತ್ರ ದಾಖಲಾಗುವ ಕೆಲವು ಅಂಶಗಳು ಬಲುಬೇಗನೇ ಅಳಿಸಿ ಹೋಗುವ ಪ್ರಭಾವವೋ ಗೊತ್ತಿಲ್ಲ! ಇದು ಸಹಾಯ ಮಾಡುವವರ ಸಮಸ್ಯೆಯಷ್ಟೇ ಅಲ್ಲ. ಸಹಾಯ ಕೇಳುವವರ ಪರಿತಪನವೂ ಅಂಥದ್ದೇ. ಪ್ರವಾಹದ ಹೊತ್ತಲ್ಲಿ ಮನೆಯಿಂದ ಹೆಂಚು ಬಿದ್ದಿದ್ದರೂ ಆಕಾಶವೇ ಬಿದ್ದು ಹೋದಂತೆ ಕಣ್ಣೀರಿಡುತ್ತಾರೆ. ಆನಂತರ ಮನೆಯೇ ಮುರಿದು ಹೋಗಿದ್ದರೂ ಹೇಗೋ ಸರಿದೂಗಿಸಿಕೊಂಡು ಜೀವನ ನಡೆಸುತ್ತಾರೆ. ಏನೇ ಹೇಳಿ, ಪ್ರಕೃತಿ ವಿಕೋಪ ಎನ್ನುವುದು ನಮಗೆ ಅನೇಕ ಬಗೆಯ ಪಾಠಗಳನ್ನು ಕಲಿಸಿಬಿಡುತ್ತವೆ.

2

ನಿನ್ನೆ ತಾನೆ ಕುಮಟಾದ ಹೆಗ್ಡೆಯ ಬಳಿ ಮಾದೇವಿ ಬೀರಾಗೌಡ ಎಂಬ ತಾಯಿಯನ್ನು ಭೇಟಿ ಮಾಡಿದ್ದೆವು. ಆಕೆಗೆ ನಾಲ್ಕು ಹೆಣ್ಣುಮಕ್ಕಳು. ಇಬ್ಬರ ಮದುವೆಯಾಗಿ ಸಾಮಾನ್ಯ ಬದುಕನ್ನು ನಡೆಸುತ್ತಿದ್ದಾರೆ. ಇನ್ನಿಬ್ಬರು ಬುದ್ಧಿಮಾಂದ್ಯರು. ಈ ಬುದ್ಧಿಮಾಂದ್ಯ ಹೆಣ್ಣುಮಗಳಿಗೂ ಮದುವೆಯಾಗಿ ಈಗ ಮನೆಗೇ ಬಂದಿರುವಂಥವಳು. ಬಹುಶಃ ಮದುವೆಯ ನಂತರವೇ ಬುದ್ಧಿಮಾಂದ್ಯತೆ ಆವರಿಸಿರಲೂಬಹುದು. ಮನೆಯಲ್ಲಿ ಮೂರು ಪುಟ್ಟ ಮೊಮ್ಮಕ್ಕಳು. ಈ ಬಾರಿಯ ಪ್ರವಾಹದಲ್ಲಿ ಇವರ ಮನೆ ಜಲಾವೃತಗೊಂಡು ಒಂದು ಭಾಗ ಕುಸಿದು ಬಿದ್ದುಹೋಗಿತ್ತು. ನೀರಿನಲ್ಲಿ ಮುಳುಗಿದ್ದುದರಿಂದ ಮನೆಯ ಮಾಡು ಕೆಲಸಕ್ಕೆ ಬಾರದಂತಾಗಿದೆ. ಗೋಡೆ-ಅಡಿಪಾಯಗಳೆಲ್ಲಾ ಹೇಳುವಷ್ಟು ಬಲವಾಗೇನೂ ಉಳಿದುಕೊಂಡಿಲ್ಲ. ಸಕರ್ಾರದಿಂದ ಸಿಗಬಹುದಾದ ಸವಲತ್ತುಗಳನ್ನು ಪಡೆಯಲು ಓಡಾಡಬೇಕಾದವರ್ಯಾರೂ ಆ ಮನೆಯಲ್ಲಿ ಇಲ್ಲ. 70ರ ಆಸುಪಾಸಿನ ಆ ಅಜ್ಜಿಯೊಬ್ಬರೇ ಅಕ್ಕಪಕ್ಕದ ಮನೆಯಲ್ಲಿ ಕೆಲಸ ಸಂಭಾಳಿಸಿಕೊಂಡು ತನ್ನಿಬ್ಬರು ಬುದ್ಧಿಮಾಂದ್ಯ ಹೆಣ್ಣುಮಕ್ಕಳನ್ನು ನೋಡಿಕೊಳ್ಳಬೇಕು, ಮೊಮ್ಮಕ್ಕಳನ್ನು ಓದಿಸಬೇಕು. ನಿಜಕ್ಕೂ ಆಕೆಯ ಬದುಕೇ ಸವಾಲುಗಳ ಸಂತೆ! ಯುವಾಬ್ರಿಗೇಡ್ನ ಕಾರ್ಯಕರ್ತರು ಆಕೆಯ ಸಂಕಟಗಳನ್ನು ನಿವಾರಿಸುವ ದೃಷ್ಟಿಯಿಂದ ಕೊನೆಯಪಕ್ಷ ಮನೆಯನ್ನಾದರೂ ಕಟ್ಟಿಕೊಡಬೇಕೆಂಬ ಸಂಕಲ್ಪ ಮಾಡಿದುದರಿಂದ ಅಲ್ಲಿ ಮನೆಗೆ ಗುದ್ದಲಿಪೂಜೆ ಮಾಡಬೇಕಾಗಿ ಬಂತು. ಮುಂದಿನ 60 ದಿನಗಳಲ್ಲಿ ಅವರಿಗೆ ಬೇಕಾದ ಸುಂದರ ಮನೆಯೊಂದನ್ನು ನಿಮರ್ಿಸಿಕೊಡಲು ತರುಣರ ತಂಡವೀಗ ಸಿದ್ಧವಾಗಿದೆ. ಅದಕ್ಕೆ ಪೂರಕವಾದ ಚಟುವಟಿಕೆಗಳೂ ನಡೆದಿವೆ. ಈ ಹಿಂದೆ ಇದೇ ರೀತಿ ನಂಜನಗೂಡಿನಲ್ಲಿ ಮತ್ತು ಶಿವಮೊಗ್ಗದಲ್ಲಿ ಮನೆ ನಿಮರ್ಿಸಿಕೊಟ್ಟಿದ್ದನ್ನು ಈ ಹೊತ್ತಿನಲ್ಲಿ ಸ್ಮರಿಸಬಹುದು.

ಈಗಿನ ಪ್ರಶ್ನೆ ಅದಲ್ಲ. ನಾವು ಒಂದು ಸಭ್ಯ ಸಮಾಜವಾಗಿ ಸೋಲುತ್ತಿರುವ ಲಕ್ಷಣ ಕಣ್ಣಿಗೆ ರಾಚುತ್ತಿದೆ. ಊರಿನ ವಿಲೇಜ್ ಅಕೌಂಟೆಂಟುಗಳು ಸಕರ್ಾರದ ಸೌಲಭ್ಯಕ್ಕೆ ಅರ್ಹರಾದ ವ್ಯಕ್ತಿಗಳನ್ನು ತಾವೇ ಸಮರ್ಪಕವಾಗಿ ಹುಡುಕಿಕೊಟ್ಟುಬಿಟ್ಟರೆ ಇಂಥವರ ಅರ್ಧ ಸಮಸ್ಯೆಗಳು ನಿವಾರಣೆಯಾದಂತೆ. ಆದರೇನು? ಅಲ್ಲೂ ಕೂಡ ಸ್ವಹಿತಾಸಕ್ತಿಯ ಲಾಬಿಗಳು ಕೆಲಸ ಮಾಡುತ್ತವೆ. ಇಂತಹ ಅಜ್ಜಿಯಂದಿರ ಅಕೌಂಟಿಗೆ ಹತ್ತುಸಾವಿರ ರೂಪಾಯಿ ಬಂದರೆ ಎಲ್ಲವೂ ಬಲವಾಗಿದ್ದೂ ಶಕ್ತವಾಗಿರುವವರ ಮನೆಗೆ ಹತ್ತಾರುಸಾವಿರ ರೂಪಾಯಿಗಳು ಸಂದಾಯವಾಗುತ್ತವೆ. ಸ್ವಾರ್ಥ ಎಷ್ಟರಮಟ್ಟಿಗೆ ಆಳ್ವಿಕೆ ನಡೆಸುತ್ತಿದೆ ಎಂದರೆ ಮಾನವೀಯತೆ ಪ್ರಪಾತದಲ್ಲಿ ತನ್ನ ಪಾಡಿಗೆ ತಾನು ಕೂಗುತ್ತ ಬಿದ್ದಿದೆ!

3

ಈ ನಡುವೆಯೂ ಕೂಡ ಕೆಲವು ಸಂಗತಿಗಳನ್ನು ಮೆಚ್ಚಬೇಕಾದ್ದೇ. ಯುವಾಬ್ರಿಗೇಡ್ ಕಷ್ಟಕಾಲದ ಗೆಳೆಯ ಎಂಬ ಯೋಜನೆಯನ್ನು ಜಾರಿಗೆ ತಂದು ನಿಜಕ್ಕೂ ಸಂಕಟದಲ್ಲಿರುವವರಿಗೆ ಪ್ರತಿ ತಿಂಗಳು 10,000 ರೂಪಾಯಿ ತಲುಪಿಸುವ ಯೋಜನೆ ಕೈಗೆತ್ತಿಕೊಂಡಿತ್ತು. ಹೀಗೆ ಫಲಾನುಭವಿಗಳನ್ನು ಹುಡುಕಲೆಂದು ಕಾರ್ಯಕರ್ತರು ಅನೇಕ ಕಡೆ ಹೋದಾಗ ಕಣ್ಣೀರಿಡುತ್ತಿರುವ ತಾಯಂದಿರನ್ನು ಕಂಡು ಮನಕರಗಿ, ಅವರಿಗೆ ವಿಚಾರವನ್ನೆಲ್ಲಾ ತಿಳಿಸಿ, ಅಂಥವರಿಗೆ ಹಣ ಹಾಕುವುದಾಗಿ ನಿಶ್ಚಯ ಮಾಡಿದ ನಂತರವೇ ಗೊತ್ತಾಗಿದ್ದು, ಕೆಲವರ ಮಕ್ಕಳು ಸಕರ್ಾರಿ ನೌಕರಿಯಲ್ಲಿದ್ದು ಸಾಕಷ್ಟು ದುಡಿಯುತ್ತಿದ್ದಾರೆ ಅಂತ. ವಾಸ್ತವವಾಗಿ ಅವರಿಗೆ ಮನೆ ಕಟ್ಟಿಕೊಳ್ಳುವುದು ಚಿಟಿಕೆ ಹೊಡೆದಷ್ಟು ಸುಲಭ. ಆದರೆ ಯಾರೋ ಕೊಡುವ ಹಣ ಬಂದರೆ ಬರಲಿ ಎಂಬ ದುರದೃಷ್ಟಕರ ಮನೋಭಾವ ಅವರುಗಳನ್ನು ಆವರಿಸಿಕೊಂಡುಬಿಟ್ಟಿತ್ತು. ಏನು ಮಾಡುವುದು ಹೇಳಿ? ಹಾಗಂತ ಎಲ್ಲರೂ ಹಾಗೇ ಏನೂ ಅಲ್ಲ. ಶಿವಮೊಗ್ಗದಲ್ಲಿ ಒಂದು ಕುಟುಂಬ. ಪೊರಕೆ ಮಾಡುವುದು ಅವರ ಕಾಯಕ. ಪ್ರವಾಹದಲ್ಲಿ ಅವರಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಪೊರಕೆ ಮಾಡುವ ಆಯುಧಗಳೆಲ್ಲಾ ಕೊಚ್ಚಿಹೋಗಿದ್ದವು. ಮೂರು ತಿಂಗಳ ಹಣವನ್ನು ಹಂತ-ಹಂತವಾಗಿ ಪಡೆದ ನಂತರ ನಾಲ್ಕನೇ ತಿಂಗಳಿನಿಂದ ಅವರು ಹಣವೇ ಬೇಡವೆಂದುಬಿಟ್ಟರು. ದಾನಿಗಳಿಗೆ ಪೀಕಲಾಟ. ಪಡೆದುಕೊಳ್ಳುವ ವ್ಯಕ್ತಿ ಬೇಡವೆನ್ನುತಿದ್ದಾನೆ. ಕೊಡುವ ವ್ಯಕ್ತಿ ಕೊಡಲೇಬೇಕೆಂದು ಹಠ ಹಿಡಿದಿದ್ದಾನೆ. ಈಗ ತಲೆ ನೋವು ನಮಗೆ. ಫಲಾನುಭವಿಯ ಮನೆಗೆ ಕಾರ್ಯಕರ್ತರು ಹೋಗಿ ಹೀಗೇಕೆಂದು ವಿಚಾರಿಸಿದರೆ ಆತ ಕೊಟ್ಟ ಉತ್ತರ ನಮ್ಮೆಲ್ಲರನ್ನೂ ಚಕಿತಗೊಳಿಸಿತ್ತು. ‘ಮೂರು ತಿಂಗಳ ಹಣವನ್ನು ಒಟ್ಟು ಮಾಡಿ ನನಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡೆ. ಇನ್ನು ಮುಂದೆ ಪೊರಕೆ ಮಾರಿ ಜೀವನ ನಡೆಸುತ್ತೇನೆ. ಉಳಿದ ಹಣವನ್ನು ಬೇರೆ ಯಾರಿಗಾದರೂ ಕೊಡಿ’ ಎಂದು ವಿನಂತಿ ಪೂರ್ವಕವಾಗಿ ಕೇಳಿಕೊಂಡರು. ನಿಜಕ್ಕೂ ಮೈಯ್ಯ ಮೇಲೆ ಮುಳ್ಳುಗಳೇಳುವ ಸಂದರ್ಭ ಅದು. ಈ ರೀತಿಯ ಜನರೇ ಸಮಾಜದಲ್ಲಿನ ಸಜ್ಜನಿಕೆಯ ವಿಶ್ವಾಸವನ್ನು ಜೀವಂತವಾಗಿರಿಸೋದು. ಕೆಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ ಮಾಡಲೆಂದೇ ಲಕ್ಷಾಂತರ ರೂಪಾಯಿ ಹಣ ಪೀಕುವ ಅಧಿಕಾರಿಗಳು, ರಾಜಕಾರಣಿಗಳು, ಅವರ ಚೇಲಾಗಳು, ಇಂಥವರೆಲ್ಲರೂ ಈ ಬಡವರ ಕಾಲ್ಕೆಳಗೆ ನುಸುಳಿ ತಮ್ಮ ಮೂಗನ್ನು ನೆಲಕ್ಕೆ ನೂರು ಬಾರಿ ಉಜ್ಜಬೇಕು.

ಭಾರತಕ್ಕೆ ಪಿಡುಗು ಮೀಸಲಾತಿ ಖಂಡಿತ ಅಲ್ಲ. ಭಾರತವನ್ನು ಕಾಡುತ್ತಿರುವುದು ಜನರಲ್ಲಿ ತುಂಬಿ ತುಳುಕುತ್ತಿರುವ ಸ್ವಾರ್ಥ ಮತ್ತು ಭ್ರಷ್ಟಾಚಾರಗಳು ಮಾತ್ರ!

Comments are closed.