ವಿಭಾಗಗಳು

ಸುದ್ದಿಪತ್ರ


 

ಕೋಳಿಮೊಟ್ಟೆ ನ್ಯಾಯ ಅರಿಯುವ ತುರ್ತಿದೆ

ಸಂಸ್ಕೃತದಲ್ಲಿ ಒಂದು ನ್ಯಾಯ ಇದೆ. ಅದು ಕೋಳಿಮೊಟ್ಟೆಯನ್ನು ಮುಂದಿಟ್ಟುಕೊಂಡು ಹೇಳುವ ನ್ಯಾಯ. ಹಸಿ ಮೊಟ್ಟೆಯನ್ನು ಒಡೆದು, ’ಬಿಳಿಯ ಭಾಗ ನನಗೆ, ಹಳದಿ ಭಾಗ ನಿನಗೆ’ ಎನ್ನುವಂತಿಲ್ಲ. ಒಂದೋ ಪೂರ್ತಿ ಮೊಟ್ಟೆ ಸ್ವೀಕರಿಸಿ, ಇಲ್ಲವೇ ಪೂರ್ತಿ ತಿರಸ್ಕರಿಸಿ. ಈ ಅರ್ಧಂಬರ್ಧ ಸೂಕ್ತವೇ ಅಲ್ಲ. ಸ್ವಾತಂತ್ರ್ಯ ಬಂದಾಗ ಪಂಡಿತರ‍್ಯಾರಾದರೂ ಈ ನ್ಯಾಯವನ್ನು ಗಾಂಧೀಜಿ ಸ್ಮರಣೆಗೆ ತಂದುಕೊಟ್ಟಿದ್ದರೆ ಇಂದು ಭಾರತ ಸಂಪೂರ್ಣ ಹಿಂದೂ ರಾಷ್ಟ್ರವಾಗಿರುತ್ತಿತ್ತು. ಮುಸಲ್ಮಾನರನ್ನು ಅರ್ಧ ಅಲ್ಲಿ, ಅರ್ಧ ಇಲ್ಲಿ ಉಳಿಸುವ ಪರಿಸ್ಥಿತಿಯೇ ಇರುತ್ತಿರಲಿಲ್ಲ. ಈ ನ್ಯಾಯವನ್ನು ಧಿಕ್ಕರಿಸಿ ಇಲ್ಲೇ ಉಳಿದಿರುವ ಆ ಅರ್ಧ ಅದೆಷ್ಟು ತಲೆನೋವಾಗಿದೆಯೆಂದು ದಡ್ಡನಿಗೂ ಅರ್ಥವಾಗುವಂತಹದ್ದು.

’ಇವನ್ಯಾಕೋ ಏಳು ತಿಂಗಳಿಗೇ ಹುಟ್ಟಿದವನ ಹಾಗೆ ಆಡ್ತಾನಲ್ಲ!’ ಹಾಗಂತ ಹೇಳೋದನ್ನು ಕೇಳಿದ್ದೀರಾ? ಪ್ರತಿಯೊಂದನ್ನೂ ತುರ್ತುತುರ್ತಾಗಿ, ಮುಂದಾಲೋಚನೆ ಇಲ್ಲದೆ ಅರ್ಧಂಬರ್ಧ ಕೇಳಿ ನಿರ್ಣಯ ತೆಗೆದುಕೊಳ್ಳೋರಿಗೆ ಹೇಳುವ ಮಾತು ಇದು. ಕೆಲವೊಮ್ಮೆ ಹೀಗೆ ಮಾಡಿದ ಕೆಲಸಗಳು ತಮಾಷೆಯಾಗಿರ‍್ತವೆ, ಕೆಲವೊಮ್ಮೆ ಬೋಧಪ್ರದವಾಗಿರುತ್ತವೆ, ಮತ್ತು ಕೆಲವೊಮ್ಮೆ ಭಯಾನಕ ಪರಿಣಾಮವನ್ನೂ ಉಂಟು ಮಾಡುತ್ತವೆ.
ಕುರುಕ್ಷೇತ್ರ ಯುದ್ಧದಲ್ಲಿ ಅಶ್ವತ್ಥಾಮನೆಂಬ ಆನೆ ಸತ್ತಾಗ ಧರ್ಮರಾಯ ಹೇಳಿದ ಮಾತು ಹಾಗೇ ಅಲ್ಲವೆ? ’ಅಶ್ವತ್ಥಾಮೋ ಹತಃ’ ಇಷ್ಟು ಮಾತನ್ನು ಕೇಳುತ್ತಲೇ ಪುತ್ರವ್ಯಾಮೋಹಿಯಾದ ದ್ರೋಣರು ಶಸ್ತ್ರತ್ಯಾಗ ಮಾಡಿ ರಣರಂಗ ಮಧ್ಯದಲ್ಲಿ ಕುಳಿತುಬಿಟ್ಟರು. ಅಲ್ಲೇ ಅವರ ವಧೆಯಾಯಿತು. ’ಕುಂಜರಃ’ ಎಂದು ಹೇಳಿದ್ದನ್ನು ಕೇಳುವ ವ್ಯವಧಾನ ಅವರಿಗಿರಲಿಲ್ಲ, ಅಥವಾ ಬಹುಶಃ ಧರ್ಮರಾಯನೇ ಹೇಳಿದ್ದು ಸರಿಯಾಗಿ ಕೇಳುವಂತಿರಲಿಲ್ಲ.
’ಅಹಿಂಸಾ ಪರಮೋಧಮಃ’ ಎಂಬ ವಾಕ್ಯವನ್ನ ಪದೇಪದೇ ಕೇಳಿದ್ದೇವಲ್ಲ, ಅದೊಂಥರಾ ನಮ್ಮ ಘೋಷ ವಾಕ್ಯ. ಅದರ ಆಧಾರದ ಮೇಲೆಯೇ ರಾಷ್ಷ್ರವನ್ನು ಕಟ್ಟುವ ಭ್ರಮೆಯ ಮೇಲಿದ್ದೇವೆ ನಾವು. ಹಾಗೆನ್ನುತ್ತಲೇ ಬ್ರಿಟಿಷರ ಲಾಠಿಗೆ ಎದೆ ಕೊಟ್ಟೆವು, ಪಾಕಿಸ್ತಾನ ಕಳಕೊಂಡೆವು. ಹಾಗೆನ್ನುತ್ತಲೇ ಚೀನಾಕ್ಕೆ ಸಾವಿರಾರು ಹೆಕ್ಟೇರ್‌ಗಳಷ್ಟು ಭೂಮಿಯನ್ನು ಬಿಟ್ಟುಕೊಟ್ಟೆವು. ಅಹಿಂಸೆಯ ಆರಾಧನೆ ಮಾಡುತ್ತಲೇ ಕಸಬ್‌ನನ್ನು ಅಳಿಯನಂತೆ ಗೌರವದಿಂದ ಸಾಕಿಕೊಂಡೆವು. ಆದರೆ ಇದೇ ವಾಕ್ಯದ ಉತ್ತರಾರ್ಧ ’ಧರ್ಮ ಹಿಂಸಾ ತಥೈವ ಚ’ ನಮಗೆ ಕೇಳಿಸಲೇ ಇಲ್ಲ. ಧರ್ಮ ಸ್ಥಾಪನೆಗೋಸ್ಕರ ಹಿಂಸೆ ಮಾಡಿದರೆ ತಪ್ಪಲ್ಲ ಎನ್ನುವುದೂ ಈ ರಾಷ್ಟ್ರದ ಘೋಷ ವಾಕ್ಯವೇ. ಹೀಗಾಗಿಯೇ ಪರಮ ಶಾಂತ, ಧ್ಯಾನ ಸಿದ್ಧರೂ ಹತ್ತು ಕೈಗಳಲ್ಲಿ ಆಯುಧ ಹಿಡಿದ ದೇವಿಯನ್ನೇ ಪೂಜಿಸುವುದು. ಧರ್ಮ, ಶಾಂತಿ, ಹಿಂಸೆಗಳ ಪರಿಧಿಯನ್ನು ಚೆನ್ನಾಗಿ ಅರಿತವನು ಅವನು.
ಸಂಸ್ಕೃತದಲ್ಲಿ ಒಂದು ನ್ಯಾಯ ಇದೆ. ಅದು ಕೋಳಿಮೊಟ್ಟೆಯನ್ನು ಮುಂದಿಟ್ಟುಕೊಂಡು ಹೇಳುವ ನ್ಯಾಯ. ಹಸಿ ಮೊಟ್ಟೆಯನ್ನು ಒಡೆದು, ’ಬಿಳಿಯ ಭಾಗ ನನಗೆ, ಹಳದಿ ಭಾಗ ನಿನಗೆ’ ಎನ್ನುವಂತಿಲ್ಲ. ಒಂದೋ ಪೂರ್ತಿ ಮೊಟ್ಟೆ ಸ್ವೀಕರಿಸಿ, ಇಲ್ಲವೇ ಪೂರ್ತಿ ತಿರಸ್ಕರಿಸಿ. ಈ ಅರ್ಧಂಬರ್ಧ ಸೂಕ್ತವೇ ಅಲ್ಲ. ಸ್ವಾತಂತ್ರ್ಯ ಬಂದಾಗ ಪಂಡಿತರ‍್ಯಾರಾದರೂ ಈ ನ್ಯಾಯವನ್ನು ಗಾಂಧೀಜಿ ಸ್ಮರಣೆಗೆ ತಂದುಕೊಟ್ಟಿದ್ದರೆ ಇಂದು ಭಾರತ ಸಂಪೂರ್ಣ ಹಿಂದೂ ರಾಷ್ಟ್ರವಾಗಿರುತ್ತಿತ್ತು. ಮುಸಲ್ಮಾನರನ್ನು ಅರ್ಧ ಅಲ್ಲಿ, ಅರ್ಧ ಇಲ್ಲಿ ಉಳಿಸುವ ಪರಿಸ್ಥಿತಿಯೇ ಇರುತ್ತಿರಲಿಲ್ಲ. ಈ ನ್ಯಾಯವನ್ನು ಧಿಕ್ಕರಿಸಿ ಇಲ್ಲೇ ಉಳಿದಿರುವ ಆ ಅರ್ಧ ಅದೆಷ್ಟು ತಲೆನೋವಾಗಿದೆಯೆಂದು ದಡ್ಡನಿಗೂ ಅರ್ಥವಾಗುವಂತಹದ್ದು.
ಇದರಲ್ಲೆಲ್ಲ ಕಮ್ಯುನಿಸ್ಟರು ಬಲು ಚುರುಕು. ಸಾಧಕರ ಹೇಳಿಕೆಯಲ್ಲಿ ತಮಗೆ ಬೇಕಾದುದನ್ನು ಮಾತ್ರ ಆರಿಸಿಕೊಂಡು, ಆ ವ್ಯಕ್ತಿಯನ್ನೇ ಎಡ ಪಂಥೀಯನೆನಿಸುವಂತೆ ಮಾಡುವಲ್ಲಿ ಅವರು ನಿಸ್ಸೀಮರು. ಕುವೆಂಪುರವರ ವಿವೇಕಾನಂದ ಪ್ರೇಮ, ರಾಮಕೃಷ್ಣ ಭಕ್ತಿ ಅವರಿಗೆಂದೂ ಕಾಣುವುದೇ ಇಲ್ಲ. ಕಾಣುವುದು ಒಂದು ಕವನದ ಸಾಲು ಮಾತ್ರ. ’ನೂರು ದೇವರನೆಲ್ಲ ನೂಕಾಚೆ ದೂರ’ ಇಷ್ಟನ್ನು ಮಾತ್ರ ಕೇಳಿದವರು, ಓದಿದವರು ಕುವೆಂಪುರವರ ಬಗ್ಗೆ ಬೆಳೆಸಿಕೊಳ್ಳಬಹುದಾದ ಸೈದ್ಧಾಂತಿಕ ಭಾವನೆಗಳೇನು? ಯೋಚಿಸಿ. ಶಿವಮೊಗ್ಗದ ಸಾಹಿತ್ಯ ಸಮ್ಮೇಳನದಲ್ಲಿ ದೊಡ್ಡದಾಗಿ ಕಂಗೊಳಿಸುತ್ತಿದ್ದ ಈ ಸಾಲನ್ನು ಕಂಡು ಅನೇಕರು ಗಾಬರಿ ಬಿದ್ದಿದ್ದರು. ಅನಂತರ ಮುಂದಿನ ಸಾಲನ್ನು ತಿಳಿದು ಸಾವರಿಸಿಕೊಂಡರು. ಅದರಲ್ಲಿ ಪುಟ್ಟಪ್ಪನವರು ’ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರಾ’ ಅನ್ನುತ್ತಾರೆ. ಅಕ್ಷರಶಃ ವಿವೇಕಾನಂದರ ವಿಚಾರ ಧಾರೆಯ ಕವನ ರೂಪವದು. ’ನಿಮ್ಮ ಮೂವತ್ಮೂರು ಕೋಟಿ ದೇವತೆಗಳನ್ನು ಸಮುದ್ರಕ್ಕೆಸೆಯಿರಿ. ಇನ್ನು ಎಪ್ಪತ್ತು ವರ್ಷಗಳ ಕಾಲ ಭಾರತ ಮಾತೆಯನ್ನು ದೇವರೆಂದು ಪೂಜಿಸಿ’ ಎಂದು ಸ್ವಾಮೀಜಿ ಪಶ್ಚಿಮದಿಂದ ಭಾರತಕ್ಕೆ ಬಂದೊಡನೆ ಹೇಳಿದ ಮಾತಿನ ಪರಮಾದ್ಭುತ ಕನ್ನಡೀಕರಣ ಅದು. ದೇಶವೇ ದೇವರು, ತಾಯಿ ಭಾರತಿಯೆ ದುರ್ಗೆ – ಕಾಳಿ ಎಂಬಂತೆ ಅದು. ಮೊದಲರ್ಧವನ್ನು ಒಪ್ಪಿದವರಿಗೆ ಉತ್ತರಾರ್ಧವನ್ನೂ ಸ್ವೀಕರಿಸುವ ಧೈರ್ಯವಿದೆಯೇನು?
ಇತ್ತೀಚೆಗೆ ಸಂತರೊಬ್ಬರು ಭಜನೆ ಸತ್ಸಂಗಗಳಲ್ಲಿ ಧಾವಂತ ಇಡಬೇಡಪ್ಪಾ ಅಂದಿದ್ದು ಮತ್ತೆ ಮತ್ತೆ ನೆನಪಾಗುತ್ತಿದೆ. ಗುರಿ ಮುಟ್ಟುವೆಡೆಗೆ ವೇಗ ಇರಬೇಕು. ಹಾಗಂತ ಆರಂಭ ಸೂಚಿಸುವ ಪಿಸ್ತೂಲು ಸದ್ದು ಮಾಡುವ ಮುನ್ನವೇ ಓಡಿದರೆ ಓಟ ವ್ಯರ್ಥವಗುತ್ತದೆಯಷ್ಟೆ.
ಕಥೆ ಅದೆಷ್ಟು ಸತ್ಯವೋ ಗೊತ್ತಿಲ್ಲ. ಮತ್ತೆ ಮತ್ತೆ ಉಲ್ಲೇಖವಂತೂ ಆಗ್ತಿರುತ್ತದೆ. ಅದೊಮ್ಮೆ ಗುರುವೊಬ್ಬರು ಶಿಷ್ಯರೊಡನೆ ಹೊರಟಿದ್ದರಂತೆ. ಪ್ರಸಾದ ದೊರೆತು ಬಹಳ ದಿನಗಳಾಗಿದ್ದವು. ಹಸಿವಿನಿಂದ ಶಿಷ್ಯರ ಪ್ರಾಣ ಹೋಗ್ತಿತ್ತು. ಗುರುಗಳು ದಾರಿಯಲ್ಲಿ ಹೆಂಡ ಇಳಿಸುವ ಜನರನ್ನು ಕಂಡರು. ಅವರು ಇಳಿಸಿಟ್ಟ ಹೆಂಡವನ್ನೆ ಪ್ರಸಾದವೆಂದು ಸ್ವೀಕರಿಸಿ, ಹೊರಡಲನುವಾದರು. ಶಿಷ್ಯರು ಆರಂಭದಲ್ಲಿ ಗಾಬರಿಯಾದರೂ ಸಾವರಿಸಿಕೊಂಡು ಗುರುಗಳನ್ನು ಅನುಸರಿಸಿ, ವಿಧೇಯತೆಯಿಂದ ಎಂಬಂತೆ ತಾವೂ ಕುಡಿಯತೊಡಗಿದರು. ಹೆಂಡ ಗಟಗಟನೆ ಗಂಟಲಿಂದ ಇಳಿಯಿತು. ತೂರಾಡುತ್ತ ನಡೆದರು. ಆದರೆ ಗುರುಗಳು ಮಾತ್ರ ದೃಢವಾಗಿಯೇ ಇದ್ದರು. ಮತ್ತೆ ಮೂರ‍್ನಾಲ್ಕು ದಿನ ಪ್ರಯಾಣ ಸಾಗಿತು. ನಡು ದಾರಿಯಲ್ಲೆಲ್ಲೂ ಪ್ರಸಾದ ದೊರೆಯಲಿಲ್ಲ. ಶಿಷ್ಯರ ಮೇಲೆ ಕರುಣೆದೋರಿದ ಗುರುಗಳು, ದಾರಿಯಲ್ಲಿ ಕಬ್ಬಿಣ ಕಾಸುವ ಕಮ್ಮರನಿಂದ ಕಾದ ಕಬ್ಬಿಣದ ರಸವನ್ನು ಆಹಾರವಾಗಿ ಪಡೆದು, ಗಂಟಲಿಗೆ ಸುರಿದುಕೊಂಡರು, ಕೃತಜ್ಞತೆ ಅರ್ಪಿಸಿ ಹೊರಟರು. ಶಿಷ್ಯರ ಕಥೆ ಹೇಳಿ! ಅವರು ಕಕ್ಕಾಬಿಕ್ಕಿ. ಮಾತಿಲ್ಲ, ಕಥೆಯಿಲ್ಲ.. ಎಲ್ಲವೂ ಮೌನ!
ಇಷ್ಟನ್ನೂ ಹೇಳಿದ್ದೇಕೆ ಗೊತ್ತೆ? ಇತ್ತೀಚೆಗೆ ನಿತಿನ್ ಗಡ್ಕರಿ ವಿವೇಕಾನಂದರ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿಕೊಂಡರಲ್ಲ, ಅದಕ್ಕೆ. ನಮ್ಮೆಲ್ಲ ಮಾಧ್ಯಮಗಳೂ ’ವಿವೇಕಾನಂದರು ಮತ್ತು ದಾವೂದರ ಐಕ್ಯೂ ಒಂದೇ’ ಎಂಬ ಗಡ್ಕರಿ ಹೇಳಿಕೆಯನ್ನು ಪದೇ ಪದೇ ಪ್ರಕಟಿಸಿದವು. ಈ ಸಾಲು ಕೇಳಿದವರೆಲ್ಲ ನಖಶಿಖಾಂತ ಉರಿದುಹೋದರು. ಗಡ್ಕರಿಯ ಐಕ್ಯೂ ಬಗ್ಗೆಯೇ ಚರ್ಚೆಗಳಾದವು. ಅಚ್ಚರಿಗೊಂಡು ಹೇಳಿಕೆಯ ಪೂರ್ಣಪಾಠ ಕೇಳಿದಾಗ ಆ ರಾಜಕಾರಣಿಯ ಬಗ್ಗೆ ಅಯ್ಯೋ ಪಾಪ ಅನ್ನಿಸಿಬಿಟ್ಟಿತು!
’ವಿವೇಕಾನಂದರ ಮತ್ತು ದಾವೂದನ ಐಕ್ಯೂ ವೈಜ್ಞಾನಿಕವಾಗಿ ಒಂದೇ. ಒಬ್ಬ ಅದನ್ನು ಕೆಟ್ಟದಕ್ಕೆ ಬಳಸಿಕೊಂಡ. ಮತ್ತೊಬ್ಬರು ಅದನ್ನು ಬಳಸಿ ಉತ್ತಮ ಕೆಲಸಗಳನ್ನು ಮಾಡುತ್ತಾ ಶ್ರೇಷ್ಠ ವ್ಯಕ್ತಿ ಎನ್ನಿಸಿಕೊಂಡರು. ನೀವೂ ನಿಮ್ಮ ಬುದ್ಧಿಮತ್ತೆಯನ್ನು ಸತ್ಕಾರ್ಯಗಳಿಗೆ ಬಳಸಿಕೊಳ್ಳಿ’ ಎಂದಿದ್ದರು ಗಡ್ಕರಿ. ಹೌದು, ಹೋಲಿಕೆ ಅಸಂಬದ್ಧವೆನಿಸಿದರೂ ಹೇಳಿಕೆ ಅಸಂಬದ್ಧವಲ್ಲ. ರಾಮನಷ್ಟೇ ರಾವಣನೂ ಸಮರ್ಥ ಎಂದಾಗ ತಪ್ಪೆನಿಸುವುದೇನು? ಬುದ್ಧಿವಂತಿಕೆಯಲ್ಲಿ ಹಿಟ್ಲರ್ ಗಾಂಧೀಜಿಗಿಂತ ಕಡಿಮೆಯೇನಿರಲಿಲ್ಲ. ಆದರೆ ಹಿಡಿದ ದಾರಿಗಳು ಸರಿಯಿರಲಿಲ್ಲ ಎಂದರೆ ನಾವು ತಲೆಯಾಡಿಸುತ್ತೇವಲ್ಲ, ಹೀಗೇಕೆ? ಇದ್ದಕ್ಕಿದ್ದ ಹಾಗೆ ಬರ್ಖಾ, ರಾಜೀವ್, ಅರ್ಣಬ್‌ರಿಗೆ ವಿವೇಕಾನಂದರ ಮೇಲೆ ಇಷ್ಟೊಂದು ಪ್ರೀತಿ ಉಕ್ಕಲು ಕಾರಣವೇನು? ಎಲ್ಲಬಿಡಿ, ಮಫಿಯಾ ಡಾನ್‌ಗಳನ್ನು ಗೌರವದಿಂದ ಸಂಬೋಧಿಸುವ, ಅವರ ಶವ ಸಂಸ್ಕರಗಳಿಗೆ ಹೂಹಾರ ಒಯ್ಯುವ ಕೈ ನಾಯಕರಿಗೆ ಈಗೇಕೆ ವಿವೇಕಾನಂದರ ಮೇಲೆ ಅಭಿಮಾನ ಉಕ್ಕಿಬಿಟ್ಟಿದೆ!? ಕೇಸರಿಯನ್ನು ಕಂಡರೆ ಕೆಂಡ ಕೆಂಡವಾಗಿ ಬಿಡುವವರು ವಿವೇಕಾನಂದರ ಬೆನ್ನ ಹಿಂದೆ ನಿಂತು ಬಿಟ್ಟಿದ್ದಾರಲ್ಲ, ಹೇಗೆ? ಏಕೆ? ಅಂದ ಮೇಲೆ ಹೋರಾಟವೂ ರಾಜಕೀಯವಾ? ಗಡ್ಕರಿಯವರ ರಾಜಕೀಯ ಬದುಕು ಮುಗಿಸಲೆಂದೆ ಪ್ರಸಾರಗೊಂಡಿದ್ದವೇ ಆ ಸಾಲುಗಳು? ಈ ಪ್ರಶ್ನೆ ಕಾಡುವುದಿಲ್ಲವೆ? ಇಲ್ಲವಾದರೆ ಅರ್ಧಂಬರ್ಧ ಸಾಲುಗಳನ್ನು ಬಿತ್ತರಿಸಿ, ಜನರ ತಲೆಕೆಡಿಸುವ ಜರೂರತ್ತೇನಿತ್ತು?
ಇತ್ತೀಚಿನ ದಿನಗಳಲ್ಲಿ ಇದೊಂದು ಫ್ಯಾಷನ್ ಆಗಿದೆ. ಮಾಧ್ಯಮಗಳು ಮನಸೋ ಇಚ್ಛೆ ಒಬ್ಬನನ್ನು ಹೀರೋ ಮಾಡಿಬಿಡುತ್ತವೆ, ಮರು ದಿನವೇ ಅವನನ್ನು ಝೀರೋ ಮಾಡಿಬಿಡುತ್ತವೆ. ಎಲ್ಲಾ ಬೆರಳ ತುದಿಯ ಕೆಲಸ. ಅರವಿಂದ್ ಕೇಜ್ರೀವಾಲ್‌ರಂಥವರೂ ಈ ಮಾಧ್ಯಮಗಳ ಹುನ್ನಾರಕ್ಕೆ ಬಲಿಯಾಗಿಬಿಟ್ಟಿದ್ದಾರೆ. ರಾಬರ್ಟ್ ವಾಧ್ರಾನ ಮೇಲೆ ಮುಗಿಬಿದ್ದು ಟೀವಿಯ ಪ್ರೈಮ್ ಟೈಮ್‌ಗಳನ್ನು ಆಕ್ರಮಿಸಿತ್ತು ಟೀಮ್ ಅರವಿಂದ್. ಕೆಲವೇ ದಿನಗಳಲ್ಲಿಅವರನ್ನು ಬಿಟ್ಟು ಮತ್ತೊಬ್ಬರ ಹಿಂದೆ ಬಿದ್ದಿತು. ಮತ್ತೆ ಕೆಲವು ದಿನಗಳಲ್ಲಿ ಗಡ್ಕರಿಯ ಬೆನ್ನು ಪರಚಿತು. ಇಷ್ಟೆಲ್ಲ ಮಾಡಿ ಪರಿಹಾರ ಹುಡುಕುವ ನಿಟ್ಟಿನಲ್ಲಿ ಅದು ಕೆಲಸ ಮಾಡಲಿಲ್ಲ. ಬದಲಾಗಿ, ಬಡಿದು ಓಡುವ ಪುಟ್ಟ ಮಕ್ಕಳ ಆಟದಂತೆ, ಜನ ಸಾಮಾನ್ಯರ ನಂಬಿಕೆ, ವಿಶ್ವಾಸಗಳೊಂದಿಗೆ ಅದು ಚೆಲ್ಲಾಟವಾಡಿತು. ’ಶುದ್ಧ ರಾಜಕಾರಣಿ’ ಎನ್ನುವುದೇ ಅಸಾಧ್ಯ ಪ್ರಯೋಗವೇನೋ ಎನ್ನಿಸುವಷ್ಟರ ಮಟ್ಟಿಗೆ ಮಾಡಿಟ್ಟುಬಿಟ್ಟಿವೆ ಮಾಧ್ಯಮಗಳು.
ಉಡುಪಿಯ ಶಾಸಕರೊಬ್ಬರ ಪತ್ನಿಯ ಆತ್ಮಹತ್ಯೆಗೆ ಕಾರಣವಾಗಿದ್ದು ಮಾಧ್ಯಮಗಳಲ್ಲ ಎಂದು ಯಾರಾದರೂ ಹೇಳುತ್ತಾರೇನು? ಆಕೆಯೊಂದಿಗೆ ಆ ಶಾಸಕರ ರಾಜಕೀಯ ಬದುಕು ಅಂಧಕಾರದತ್ತ ತಳ್ಳಲ್ಪಟ್ಟಿತಲ್ಲ, ಅದರ ಹೊಣೆ ಯಾರು ಹೊರುತ್ತಾರೆ?
ಎಂದಾದರೂ ಸೀಧೀ ಬಾತ್ ಥರದ, ಡೆವಿಲ್ಸ್ ಅಡ್ವೊಕೇಟ್ ಥರದ ಕಾರ್ಯಕ್ರಮಗಳನ್ನು ನೋಡಿ. ಇಲ್ಲೆಲ್ಲ ಪ್ರಶ್ನೆಗೆ ಉತ್ತರ ಪಡೆಯಬೇಕೆನ್ನುವ ಪ್ರಯತ್ನಕ್ಕಿಂತ, ಎದುರಿಗೆ ಕುಳಿತಿರುವವರನ್ನು ಸಿಕ್ಕಿ ಹಾಕಿಸಿ ಮುಗಿಸಿಬಿಡಬೇಕೆನ್ನುವ ಆತುರವಷ್ಟೆ ಕಾಣುತ್ತದೆ. ಅರ್ಧ ಉತ್ತರ ಕೊಡುತ್ತಿರುವಾಗಲೇ ಅದನ್ನು ಆಧರಿಸಿ, ಮುಂದಿನ ಪ್ರಶ್ನೆ ತಯಾರು. ಉತ್ತರಿಸುವವ ಕಕ್ಕಾಬಿಕ್ಕಿಯಾದಷ್ಟೂ ಬೆವರು ಹರಿಸಿದಷ್ಟೂ ನಿರೂಪಕರಿಗೆ ಆನಂದ. ಇದು ವಿಕೃತವಲ್ಲದೆ ಮತ್ತೇನು?
ಸತ್ಯವನ್ನು ಹೊರತರುವುದೇ ಮಾಧ್ಯಮಗಳ ನಿಜವಾದ ಪ್ರಯತ್ನವಾಗಿದ್ದರೆ, ಅವರು ರಾಬರ್ಟ್ ವಾಧ್ರಾನನ್ನು ಬಿಟ್ಟಿದ್ದಾದರೂ ಏಕೆ? ಅನೇಕ ರಾಜಕಾರಣಿಗಳ ಹಿಂದೆ ಬಿದ್ದು ಅವರ ಕಥೆ ಮುಗಿಸಿಬಿಡುವ ಈ ಘಟಾನಿಘಟಿಗಳು ವಾಧ್ರಾ ವಿಚಾರದಲ್ಲಿ ಸುಮ್ಮನಾಗಿದ್ದು ಹೇಗೆ? ಎಲ್ಲ ಹೋಗಲಿ, ನೀರಾ ರಾಡಿಯಾ ವಿಚಾರದಲ್ಲಿ ಬರ್ಖಾಳ ರಾಡಿ ಜಗದ್ವ್ಯಾಪಕವಾದಾಗಲೂ ವಿದ್ಯುನ್ಮಾನ ಮಾಧ್ಯಮಗಳು ಮಿಸುಕಾಡಲಿಲ್ಲವಲ್ಲ? ಗಡ್ಕರಿಯ ರಾಜೀನಾಮೆ ಬೇಡಿಕೆಯಂತೆ ಆಕೆಗೂ ಕ್ಷೇತ್ರ ಬಿಟ್ಟು ಹೋಗುವಂತೆ ತಾಕೀತು ಮಾಡಲಿಲ್ಲವೇಕೆ? ತಮಗೊಂದು ನ್ಯಾಯ, ಬೇರೆಯವರಿಗೆ ಮತ್ತೊಂದಾ?
ಸಮಯ ಪಕ್ವವಾಗಿದೆ. ಅರ್ಧವನ್ನಷ್ಟೆ ಕಕ್ಕುವವರು ಹೊಟ್ಟೆಯೊಳಗೆ ಜೀರ್ಣಶೇಷವನ್ನು ಇನ್ನೂ ಉಳಿಸಿಕೊಂಡಿದ್ದಾರೆಂದೇ ಅರ್ಥ. ಅಂಥವರನ್ನು ಮುಂದಿಟ್ಟುಕೊಂಡು ಬದುಕದಿದ್ದರೆ ಒಳಿತು.

1 Response to ಕೋಳಿಮೊಟ್ಟೆ ನ್ಯಾಯ ಅರಿಯುವ ತುರ್ತಿದೆ

  1. Laxminarayan

    Awesome article sir…