ವಿಭಾಗಗಳು

ಸುದ್ದಿಪತ್ರ


 

ಗೆದ್ದ ಮೇಲೆ ಬಾಲ ಹಿಡಿಯಲು ಎಲ್ಲರೂ ಧಾವಿಸಿ ಬರುತ್ತಾರೆ!

ನಮ್ಮ ದೇಶದ ಜನಪ್ರತಿನಿಧಿಗಳು ಟೇಪ್ ಕತ್ತರಿಸುವುದರಲ್ಲೇ ಸಮಯ ಕಳೆದುಬಿಡುತ್ತಾರೆ. ಅವರಿಗೆ ದೂರದೃಷ್ಟಿಯೂ ಇಲ್ಲ, ಜನಪ್ರತಿನಿಧಿಯಾಗಿ ತಮ್ಮ ಕರ್ತವ್ಯದ ಅರಿವೂ ಇಲ್ಲ. ಗೆದ್ದ ಮೇಲೆ ಫೋಟೊ ತೆಗೆಸಿಕೊಳ್ಳಲು ಧಾವಿಸಿ ಬಂದು ನಿಂತುಬಿಡುತ್ತಾರೆ. ಆದರೆ ಗೆಲ್ಲುವುದಕ್ಕೆ ಬೇಕಾದ ಅಗತ್ಯವನ್ನು ಪೂರೈಸುವಲ್ಲಿ ಅವರಿಗೆ ಆಸ್ಥೆಯೂ ಇಲ್ಲ, ಕಲ್ಪನೆಯೂ ಇಲ್ಲ!

ಕೆಲವು ದಿನಗಳ ಹಿಂದೆ ಬಂಗಾಳದ ಜಲ್ಪಾಯ್ಗುರಿಯ ಸ್ವಪ್ನ ಬರ್ಮನ್ಳ ಬಗ್ಗೆ ಬರೆದಿದ್ದೆ. ಆಕೆ ಏಷಿಯನ್ ಗೇಮ್ಸ್ನಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಅತ್ಯಂತ ಕಠಿಣವಾಗಿರುವ ಹೆಪ್ಟಾಥ್ಲಾನ್ ಕ್ರೀಡೆಯಲ್ಲಿ ಏಷ್ಯಾದ ಬೆಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಳು. ಬಹುಶಃ ಒಂದು ಗೋಲ್ಡ್ ಮೆಡಲ್ ಗೆಲ್ಲುವುದು ವಿಶೇಷವಾಗಿರಬೇಕಿರಲಿಲ್ಲ. ಜೀವ ಹೋಗುವಷ್ಟು ಹಲ್ಲು ನೋವಿನಿಂದ ಬಳಲುತ್ತಿದ್ದರೂ ಪದಕ ಬೇಕೇ ಬೇಕು ಎಂಬ ಹಠದೊಂದಿಗೆ ಮೈದಾನಕ್ಕಿಳಿದಿದ್ದ ಹುಡುಗಿ ಆಕೆ. ಹೈಜಂಪ್, ಜಾವಲೀನ್ಗಳಲ್ಲಿ ನಂಬರ್ ಒನ್ ಆಗಿ ಹೊರಹೊಮ್ಮಿದ ಆಕೆ ಶಾಟ್ಪುಟ್ ಮತ್ತು ಲಾಂಗ್ಜಂಪ್ನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಳು. ಆಕೆಯ ತೊಡೆಗಳ ಆಕಾರ ಓಟಕ್ಕೆ ಸೂಕ್ತವಾಗಿಲ್ಲದಿರುವುದರಿಂದ 100, 200 ಮತ್ತು 800 ಮೀಟರ್ ಓಟಗಳಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆಯನ್ನು ಅನುಭವಿಸಿದಳು. ಇತ್ತ ಮನೆಯಲ್ಲಿ ಪಾಶ್ರ್ವವಾಯುವಿಗೆ ತುತ್ತಾಗಿ ಏನೂ ಮಾಡಲಾಗದೇ ಹಾಸಿಗೆ ಹಿಡಿದಿರುವ ತಂದೆ, ತನ್ನ ಮಕ್ಕಳಿಗಾಗಿಯೇ ಇತರರ ಮನೆಯ ಚಾಕರಿ ಮಾಡಿ ಜೀವ ಸವೆಸುತ್ತಿರುವ ತಾಯಿ, ತಂದೆಗೆ ಹುಷಾರಿಲ್ಲ ಎಂಬ ಕಾರಣಕ್ಕೆ ಮನೆಯ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ಒಂಭತ್ತನೇ ತರಗತಿಗೇ ಅಧ್ಯಯನ ನಿಲ್ಲಿಸಿ ಮೇಸ್ತ್ರಿಯಾದ ಅಣ್ಣ! ತಗಡಿನ ಮನೆ, ಮನೆಗೆ ಹೋಗಲು ರಸ್ತೆಯೂ ಇಲ್ಲದ ವಿಕಟ ಪರಿಸ್ಥಿತಿ, ಮಧ್ಯಾಹ್ನದ ಊಟದ ನಂತರ ರಾತ್ರಿಗೇನು ಎಂದು ಯೋಚನೆ ಮಾಡಬೇಕಾದಂತಹ ಅಸಹಾಯಕತೆ. ಓಹ್! ಆಕೆಯ ಚಿನ್ನದ ಪದಕಕ್ಕೆ ಖಂಡಿತವಾಗಿಯೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಷ್ಟೇಕೆ ಭಾವುಕವಾಗುತ್ತಿದ್ದೇನೆ ಗೊತ್ತೇ? ಆಕೆಯ ಕುರಿತಂತೆ ಬರೆದ ಎರಡು ವಾರದೊಳಗೆ ಆಕೆಯ ಮನೆಗೆ ಹೋಗುವ ಅವಕಾಶ ನನಗೆ ದಕ್ಕಿತು. ಆದರೆ ಮೇಲೆ ಹೇಳಿದ ಅನೇಕ ಸ್ಥಿತಿಗಳು ಈಗಿಲ್ಲ. ಅತ್ತ ಸ್ವಪ್ನ ಚಿನ್ನ ಗೆಲ್ಲುತ್ತಿದ್ದಂತೆ ಇತ್ತ ಆಕೆಯ ಮನೆಯ ಪರಿಸ್ಥಿತಿಯೇ ಬದಲಾಗಿ ಹೋಗಿದೆ. ಸೈಕಲ್ಲೂ ಬರಲಾಗದ ಸ್ಥಿತಿ ಇದ್ದ ಮನೆಗೆ ಈಗ ಕಾರುಗಳು ಬರಬಹುದಾದಷ್ಟು ವಿಸ್ತಾರವಾದ ರಸ್ತೆಗಳಿವೆ. ಆಕೆಯ ಮನೆಗೆ ಬರುವ ಓಣಿಯುದ್ದಕ್ಕೂ ತಗಡಿನ ಶೀಟುಗಳನ್ನು ಹಾಕಿ ಅಕ್ಕ-ಪಕ್ಕದ ಕೊಳಕು ಕಾಣದಂತೆ ಮಾಡಿಬಿಟ್ಟಿದ್ದಾರೆ. ಸದಾ ಕೆಸರಿನಿಂದ ತುಂಬಿರುತ್ತಿದ್ದ ಮನೆ ಮತ್ತು ಮನೆಗೆ ಹೋಗುವ ಆವರಣವನ್ನೆಲ್ಲಾ ಸಿಮೆಂಟಿನಿಂದ ತಾತ್ಕಾಲಿಕವಾಗಿ ಸಿಂಗರಿಸಿಬಿಟ್ಟಿದ್ದಾರೆ. ಇದ್ದಕ್ಕಿದ್ದಂತೆ ಯಾರೋ ಒಬ್ಬ ಒಂದು ದಿನ ಬಂದು ಆಕೆಯ ಓಣಿಯಷ್ಟಕ್ಕೂ ಬಣ್ಣ-ಬಣ್ಣದ ಬಲ್ಬಿನ ಸರಗಳನ್ನು ಇಳಿಬಿಟ್ಟು ಹೋಗಿದ್ದಾನೆ. ಆಕೆ ಚಿನ್ನ ಗೆದ್ದು ಇಡಿಯ ಜಗತ್ತು ಆಕೆಯ ಕುರಿತಂತೆ ತಲೆ ಕೆಡಿಸಿಕೊಂಡ ಮೇಲೆ ನನ್ನ ದೇಶದ ರಾಜಕಾರಣಿಗಳು ಎದ್ದುಬಿಟ್ಟಿದ್ದಾರೆ. ನಿಜಕ್ಕೂ ನೋವಿನ ಸಂಗತಿ!

7

ಅದೇ ಸ್ವಪ್ನ ಬರ್ಮನ್ ಆರು ಬೆರಳುಗಳುಳ್ಳ ತನ್ನ ಕಾಲು ಬೇರೆೆಯವರ ಕಾಲುಗಳಿಗಿಂತಲೂ ಅಗಲವಾಗಿದ್ದು ಎಲ್ಲರೂ ಧರಿಸುವ ಶೂ ಧರಿಸಿ ಓಡುವುದಿರಲಿ ನಡೆಯುವುದೂ ಕಷ್ಟವೆಂದು ಗೋಗರೆದಾಗ ಯಾವನೂ ಎಚ್ಚೆತ್ತುಕೊಳ್ಳಲಿಲ್ಲ. ಆಕೆ ಆರಂಭದಲ್ಲಿ ಒಂದಷ್ಟು ಮೈದಾನದ ಆಟಗಳೊಂದಿಗೆ ಪ್ರೀತಿ ತೋರಿಸಿ ಆನಂತರ ಹೈ ಜಂಪ್ನಲ್ಲಿ ತನ್ನ ಆಸಕ್ತಿಯನ್ನು ವೃದ್ಧಿಸಿಕೊಂಡಮೇಲೆ ಆಕೆ ತರಬೇತಿಗಾಗಿ ಏಳೆಂಟು ಮೈಲಿ ಆಚೆಗೆ ಹೋಗಬೇಕಾಗುತ್ತಿತ್ತಂತೆ. ಪುಟ್ಟ ಹುಡುಗಿಯನ್ನು ಒಂದೋ ತಾಯಿ ಬಿಟ್ಟು ಬರಬೇಕಿತ್ತು. ಇಲ್ಲವೇ ತಂದೆ ತಾನು ಓಡಿಸುತ್ತಿದ್ದ ರಿಕ್ಷಾದಲ್ಲಿ ಆಕೆಯನ್ನು ಒಯ್ಯಬೇಕಿತ್ತು. ಅನೇಕ ಬಾರಿ ಓಟ ಮುಗಿದು ಮನೆಗೆ ಮರಳಿ ಬಂದು ಹೊಟ್ಟೆ ನೋವೆಂದು ಮಗು ಅಳುತ್ತಿದ್ದಳಂತೆ. ಆಗ ಸ್ವಪ್ನಾಗೆ ಅದೇಕೆಂದು ಅರ್ಥವಾಗುತ್ತಿರಲಿಲ್ಲ. ಮೊನ್ನೆ ಸಿಕ್ಕಾಗ ಆಕೆಯ ತಾಯಿ ಹೇಳುತ್ತಿದ್ದರು ಅಷ್ಟು ಕಠಿಣ ಶ್ರಮದ ನಂತರ ಆಕೆಗೆ ಅಗತ್ಯವಿದ್ದಷ್ಟು ಅನ್ನ ಕೊಡಲು ತನ್ನಿಂದಾಗುತ್ತಿರಲಿಲ್ಲ. ಹೀಗಾಗಿ ಶಕ್ತಿ ಇರುವುದು ಅನ್ನದಲ್ಲಲ್ಲ, ನೀರಿನಲ್ಲಿ ಎಂದು ಆಕೆಯನ್ನು ಹುರಿದುಂಬಿಸಿ ಸಮಾಧಾನ ಪಡಿಸುತ್ತಿದೆ ಎಂದು. ಇತರೆಲ್ಲರೂ ತಿಂದುಂಡು ಬಲಶಾಲಿಯಾಗಿ ಮೈದಾನಕ್ಕಿಳಿದರೆ ಈ ಹುಡುಗಿ ನೀರು ಕುಡಿದು ಓಡಿ ಪದಕ ಬಾಚಿಕೊಂಡು ಬರುತ್ತಿದ್ದಳಂತೆ.

ನಮ್ಮ ದೇಶದ ಜನಪ್ರತಿನಿಧಿಗಳು ಟೇಪ್ ಕತ್ತರಿಸುವುದರಲ್ಲೇ ಸಮಯ ಕಳೆದುಬಿಡುತ್ತಾರೆ. ಅವರಿಗೆ ದೂರದೃಷ್ಟಿಯೂ ಇಲ್ಲ, ಜನಪ್ರತಿನಿಧಿಯಾಗಿ ತಮ್ಮ ಕರ್ತವ್ಯದ ಅರಿವೂ ಇಲ್ಲ. ಗೆದ್ದ ಮೇಲೆ ಫೋಟೊ ತೆಗೆಸಿಕೊಳ್ಳಲು ಧಾವಿಸಿ ಬಂದು ನಿಂತುಬಿಡುತ್ತಾರೆ. ಆದರೆ ಗೆಲ್ಲುವುದಕ್ಕೆ ಬೇಕಾದ ಅಗತ್ಯವನ್ನು ಪೂರೈಸುವಲ್ಲಿ ಅವರಿಗೆ ಆಸ್ಥೆಯೂ ಇಲ್ಲ, ಕಲ್ಪನೆಯೂ ಇಲ್ಲ!

WhatsApp Image 2018-09-22 at 07.34.09

ಮಂಗಳೂರಿನ ವೈಟ್ಲಿಫ್ಟರ್ ಪ್ರದೀಪನ ಕಥೆಯೂ ಇದೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ದೇಶಕ್ಕೆ ಚಿನ್ನ ತಂದುಕೊಟ್ಟ ಅಪರೂಪದ ಹುಡುಗ ಆತ. ನಾವೆಲ್ಲರೂ ಮರೆತೇಬಿಟ್ಟೆವು. ಒಂದಷ್ಟು ಪತ್ರಿಕೆಗಳು ಅವರ ಬಗ್ಗೆ ಬರೆದಿದ್ದಷ್ಟೇ ಬಂತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿದ್ದಕ್ಕೆ ಕೊಡಬೇಕಾದ ಗೌರವದ ಹಣವನ್ನೂ ಸಕರ್ಾರ ಅವನಿಗೆ ಕೊಡಲಿಲ್ಲ. ಆತ ತನ್ನ ಹುಚ್ಚಿಗಾಗಿ ಜಾಗತಿಕ ಮಟ್ಟದಲ್ಲಿ ಸ್ಪಧರ್ೆಗೆ ಭಾಗವಹಿಸಬೇಕು, ಪದಕಗಳನ್ನು ತಂದು ಮನೆಯಲ್ಲಿರುವ ಯಾವುದಾದರೂ ಮೊಳೆಗೆ ನೇತು ಹಾಕಬೇಕು. ಪತ್ರಿಕೆಗಳಲ್ಲಿ ಬಂದಿರುವ ನಾಲ್ಕಾರು ವರದಿಗಳಷ್ಟೇ ಜೀವಮಾನದುದ್ದಕ್ಕೂ ಅವನು ನೋಡಬಹುದಾದ ಮತ್ತು ಹೆಮ್ಮೆ ಪಡಬಹುದಾದ ಫೋಟೊ ಫ್ರೇಮ್ಗಳಾಗುತ್ತವೆ. ಪ್ರದೀಪನಿಗೂ ಹಾಗೆಯೇ ಆಯ್ತು. ಈ ಕ್ರೀಡೆಯಲ್ಲಿ ತನ್ನ ಆಸಕ್ತಿಯನ್ನು ವಿಸ್ತರಿಸಿಕೊಂಡ ಪ್ರದೀಪ ಬದುಕನ್ನು ನಡೆಸುವುದು ಸುಲಭವೇನೂ ಆಗಿರಲಿಲ್ಲ. ಹೀಗಾಗಿ ಒಂದು ಜಿಮ್ ತೆರೆದು ತನ್ನ ತರಬೇತಿ ಮತ್ತು ಇನ್ನಷ್ಟು ಜನರನ್ನು ತಯಾರಿಸುವ ತನ್ನ ಆಸೆ ಎರಡನ್ನೂ ಈಡೇರಿಸಿಕೊಳ್ಳಲಾರಂಭಿಸಿದ. ಪುಣ್ಯ, ಪ್ರಧಾನಮಂತ್ರಿಯವರ ಮುದ್ರಾ ಯೋಜನೆಯಿತ್ತು. ಆ ಮೂಲಕ ಒಂದಷ್ಟು ಹಣವನ್ನು ಸಾಲವನ್ನಾಗಿ ತೆಗೆದುಕೊಂಡು ಜಿಮ್ ಶುರುಮಾಡಿದ. ಆಗೆಲ್ಲಾ ದೊಡ್ಡ ದೊಡ್ಡ ಕಟೌಟು ಹಾಕಿಕೊಳ್ಳುವ ಒಬ್ಬ ನಾಯಕರೂ ತಮ್ಮೂರಿನ ಹೆಮ್ಮೆಯಾಗಬಹುದಾದ ಈತನನ್ನು ಮಾತನಾಡಿಸಲೇ ಇಲ್ಲ. ಮೊನ್ನೆ ಇತ್ತೀಚೆಗೆ ಪ್ರದೀಪ ಕಾಯರ್ಾಲಯಕ್ಕೆ ಭೇಟಿಗೆಂದು ಬಂದಿದ್ದ. ದುಬೈ ಅಂತರರಾಷ್ಟ್ರೀಯ ಭಾರ ಎತ್ತುವ ಸ್ಪಧರ್ೆಯಲ್ಲಿ ಭಾಗವಹಿಸಲು ಸಹಕಾರ ಬೇಕೆಂದು ಕೇಳಿದ. 1,36,000 ರೂಪಾಯಿಯ ಪತ್ರಕವೊಂದನ್ನು ಮುಂದಿಟ್ಟ. ಅದರಲ್ಲಿ ಎಂಟ್ರೆನ್ಸ್ ಫೀಸಿನಿಂದ ಹಿಡಿದು ವಿಮಾನದಲ್ಲಿ ದುಬೈ ಹೋಗುವವರೆಗಿನ ಎಲ್ಲ ಖರ್ಚನ್ನೂ ಸ್ಪಧರ್ಿಗಳೇ ಭರಿಸಬೇಕೆಂದಿತ್ತು. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ವಿಜೇತನೊಬ್ಬ ಹೀಗೆ ಮನೆ ಮನೆ ಬಾಗಿಲು ಬಡಿದು ‘ಸಹಾಯ ಮಾಡುವಿರಾ’ ಎಂದು ಬೇಡುತ್ತಿರುವುದನ್ನು ಕಂಡು ಪಿಚ್ಚೆನಿಸಿತು. ನನ್ನ ಫೇಸ್ಬುಕ್ನಲ್ಲಿ ಈ ವಿಚಾರ ಶೇರ್ ಮಾಡಿಕೊಂಡ ನಂತರ 30,000 ರೂಪಾಯಿಯಷ್ಟು ಸಹಕಾರ ಒದಗಿತು. ಮಂಗಳೂರಿನ ಮಿತ್ರರೊಬ್ಬರು 10,000 ರೂಪಾಯಿ ಕೊಟ್ಟರು. 50,000 ರೂಪಾಯಿಯನ್ನು ಆತನೇ ಸಾಲ ಮಾಡಿ ಹೊಂದಿಸಿದ. ಇನ್ನೊಂದು 30,000 ರೂಪಾಯಿಯನ್ನು ಮಂಗಳೂರಿನ ಶಾಸಕರೊದಗಿಸಬಹುದೇನೊ ಎಂದುಕೊಂಡು ಅವರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದಾಗ ಅವರು ಕಣ್ಣೀರೊಂದು ಹಾಕಲಿಲ್ಲ ಎನ್ನುವುದನ್ನು ಬಿಟ್ಟರೆ ಸಹಾಯ ಮಾಡಲಾಗುವುದಿಲ್ಲವೆಂಬುದಕ್ಕೆ ಊರಲ್ಲಿರುವ ಎಲ್ಲಾ ಕಾರಣಗಳನ್ನೂ ಕೊಟ್ಟರು. ಕೊನೆಗೆ ಹಣ ಕೊಡಬಹುದಾದ ಕೆಲವು ಮಿತ್ರರಿಗೆ ಮಾತನಾಡಿ ಸಹಕಾರ ಮಾಡಿಸುವ ಪ್ರಯತ್ನ ಮಾಡಿ ಅಂತೂ ಪ್ರದೀಪ ದುಬೈ ಸೇರಿಕೊಂಡ. ನಿನ್ನೆ ವಾಟ್ಸಪ್ನ ತುಂಬ ಆತ ಕಂಚು ಗೆದ್ದಿರುವ ಚಿತ್ರಗಳು ತುಂಬಿಹೋದವು. ಇನ್ನೂ ಒಂದು ಸ್ಪಧರ್ೆ ಬಾಕಿ ಇದೆ. ಅಲ್ಲಿಯೂ ಆತ ಪದಕ ಗೆಲ್ಲಲಿ ಎಂದು ಹಾರೈಸುತ್ತೇನೆ. ಆದರೆ ಒಂದು ಮುಂದುವರಿಯುತ್ತಿರುವ ಸಮಾಜವಾಗಿ ನಾವು ತಲೆ ತಗ್ಗಿಸಲೇಬೇಕು. ಚಿನ್ನ ಗೆದ್ದು ಖ್ಯಾತಳಾದ ನಂತರ ಸ್ವಪ್ನ ಬರ್ಮನ್ನಳಿಗೆ ಪ್ರಶಸ್ತಿ ಕೊಡುವ ಫೋಟೋವನ್ನು ಊರ ತುಂಬಾ ಫ್ಲೆಕ್ಸ್ ಮಾಡಿಸಿ ಹಾಕಿಕೊಂಡಿರುವ ಮಮತಾ ಬ್ಯಾನಜರ್ಿಯನ್ನು ಕಂಡಾಗ ಆಗುವಷ್ಟೇ ಅಸಹ್ಯ ನಮ್ಮೂರಿನ ಶಾಸಕರುಗಳನ್ನು ಕಂಡಾಗಲೂ ಆಗುತ್ತದೆ.

ಕೊಪ್ಪಳದಲ್ಲಿ ತಂದೆ ಇಲ್ಲದ ಮಗುವೊಂದು ಮೈದಾನದಲ್ಲಿ ಚಿಗರೆಯಂತೆ ಓಡುತ್ತಾ ರಾಜ್ಯದ ಬೆಸ್ಟ್ ಅಥ್ಲೀಟ್ ಆಗಿ ಒಂಭತ್ತನೇ ತರಗತಿಯಲ್ಲಿ ಹೆಸರು ಮಾಡಿದ್ದಾಳಂತೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಾಡಿನ ಕೀತರ್ಿಯನ್ನು ಹೆಚ್ಚಿಸಬೇಕೆಂಬುದು ಅವಳ ಕನಸಂತೆ. ಕಿತ್ತು ತಿನ್ನುವ ಬಡತನ ಅವಳಿಗೆ. ಜೊತೆಗೆ ನಿಲ್ಲಬಲ್ಲವರು ಯಾರು ಹೇಳಿ? ಮಾಧ್ಯಮಗಳು ವಿಸ್ತರಿಸಿ ಮಾಡಿದ ಸುದ್ದಿಗೆ ಪ್ರತಿಕ್ರಿಯಿಸುವ ನಾವು ಸಹಜವಾಗಿಯೇ ನಮ್ಮೂರಿನ, ನಮ್ಮ ಜನರ ಕಷ್ಟಕ್ಕೆ ಸ್ಪಂದಿಸಿದ್ದರೆ ಇಂದು ನಾವು ಖಂಡಿತ ಹೊಸ ಭಾರತದಲ್ಲಿರುತ್ತಿದ್ದೆವು.

FB_IMG_1537581348841

ಅಂದಹಾಗೆ, ಭಾರತದ ಥ್ರೋಬಾಲ್ ತಂಡ ಥಾಯ್ಲ್ಯಾಂಡಿನಲ್ಲಿ ನಡೆದ ಮೂರು ದೇಶಗಳ ಸ್ಪಧರ್ೆಯಲ್ಲಿ ಮೊದಲ ಬಹುಮಾನ ಗಳಿಸಿದೆ. ಈ ತಂಡದ ನಾಯಕಿ ಕನ್ನಡದ ಕೃಪಾ ಎನ್ನುವುದು ಅನೇಕರಿಗೆ ಗೊತ್ತೇ ಇಲ್ಲ. ನಾವೆಲ್ಲಾ ಹಾಗೆಯೇ. ಯಾವುದು ಪತ್ರಿಕೆಗಳಲ್ಲಿ ಜೋರಾಗಿ ಸುದ್ದಿಯಾಗುತ್ತದೊ ಅದರ ಹಿಂದೆ ಧಾವಿಸಿಬಿಡುತ್ತೇವೆ. ಆದರೆ ಸುದ್ದಿಯಾಗುವ ಮುನ್ನವೇ ಅಂತಹ ಒಬ್ಬರನ್ನು ಗುರುತಿಸಿ ಸಹಾಯ ಮಾಡುವಲ್ಲಿ ಸೋತುಬಿಡುತ್ತೇವೆ. ಪ್ರದೀಪ ಮರಳಿ ಬಂದೊಡನೆ ಅವನ ಮನೆಗೆ ಈ ಪುಢಾರಿಗಳು ಧಾವಿಸಿ ಸೆಲ್ಫೀ ತೆಗೆದುಕೊಂಡು ಫೇಸ್ಬುಕ್ಕಿಗೆ ಹಾಕದಿದ್ದರೆ ಸಾಕು!

Comments are closed.