ವಿಭಾಗಗಳು

ಸುದ್ದಿಪತ್ರ


 

ಟೀಮ್‌ ಮೋದಿಯ ಚರಮಗೀತೆ!

ಟೀಮ್‌ಮೋದಿ ಸಂಘಟನೆ ತನ್ನ‌ ಕೆಲಸವನ್ನು ಮುಗಿಸುವ ಹೊತ್ತು ಬಂದಿದೆ. ನಮೋಬ್ರಿಗೇಡನ್ನು ಕಟ್ಟಿದ್ದಾಗಲು ಉದ್ದೇಶ ತೀರಿದೊಡನೆ ಮುಗಿಸಿ ಬಿಡುವ ಮಾತು ಕೊಟ್ಟಿದ್ದೆವು. ಟೀಮ್‌ಮೋದಿಗೂ ಹಾಗೆಯೇ. 23‌ಕ್ಕೆ ಎರಡೂ ಹಂತದ ಚುನಾವಣೆಗಳು ಮುಗಿಯುವುದರೊಂದಿಗೆ ಈ ತಂಡ ಹುಟ್ಟಿಕೊಂಡಿದುದರ ಉದ್ದೇಶ ಪೂರ್ಣಗೊಳ್ಳುತ್ತದೆ. ಕರ್ಮ ಮಾಡುವುದರಲ್ಲಷ್ಟೇ ನಮ್ಮ ಆಸಕ್ತಿ. ಫಲ ಕೊಡುವುದು ಭಗವಂತನಿಗೆ ಬಿಟ್ಟಿದ್ದು. ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆಂಬ ತೃಪ್ತಿಯಷ್ಟೇ. ಇಷ್ಟಕ್ಕೂ ಇಂಥದೊಂದು ರಾಜಕೀಯ ಕಲ್ಪನೆಯನ್ನಿಟ್ಟುಕೊಂಡ ಸಂಘಟನೆ ಸಮರ್ಪಕ ಕೆಲಸ ಇಲ್ಲದೇ ಬದುಕಿಯೂ ಇರಬಾರದು. ಏಕೆಂದರೆ ರಾಜಕೀಯ ಪಡಸಾಲೆಗಳಲ್ಲಿ ಕಾರ್ಯಕರ್ತರು ಹೋಗಿ ನಿಂತು ಬೇಡಿಕೆ ಮಂಡಿಸುವ ಸಂಘಟನೆಯಾಗಿ ನಿಂತುಬಿಡುತ್ತದೆ‌. ಹೀಗಾಗಿ ಎಚ್ಚರಿಕೆ ವಹಿಸಲೇಬೇಕಲ್ಲ. ಈ ಬಾರಿಯಂತೂ ಟೀಮ್‌ಮೋದಿ ಬಿಡಿ, ಆಯ್ಕೆಯಾಗಲಿರುವ ಎಮ್‌ಪಿಗಳು ಮತ್ತು ಸ್ವತಃ ಪಕ್ಷವೂ ತಾನೇನು ಅದ್ಭುತವಾದದ್ದನ್ನು ಸಾಧಿಸಿದ್ದೇನೆಂದು ಬೀಗುವಂತಿಲ್ಲ. ಏಕೆಂದರೆ ಎಲ್ಲವೂ ಮೋದಿ ಕೃಪೆ!


ಪಂಚರಾಜ್ಯಗಳ ಚುನಾವಣೆಯ ಸೋಲಿನ ನೋವಿನಲ್ಲಿ ಮೋದಿ ಇದ್ದಾಗ ಹುಟ್ಡಿದ್ದು ಟೀಮ್‌ಮೋದಿ. 300ಕ್ಕೂ ಹೆಚ್ಚು ಕಡೆಗಳಲ್ಲಿ ಬೈಕ್ ರ್ಯಾಲಿ ಮಾಡಬೇಕೆಂಬ ನಿಶ್ಚಯದೊಂದಿಗೆ ನಾವು ಆರಂಭಿಸಿದ ಯಾತ್ರೆ ಅಭೂತಪೂರ್ವ ಯಶಸ್ಸನ್ನು ಕಂಡಿತು. ಅದಾಗಲೇ ಅನೇಕರು ಮೋದಿ ಬೆಂಬಲಕ್ಕೆ ಚಟುವಟಿಕೆ ಶುರು ಮಾಡಿದ್ದರೂ ಜನರಿಗೆ ನಮ್ಮ ಮೇಲೊಂದು ವಿಶ್ವಾಸ ಇದ್ದೇ ಇತ್ತು. ಪ್ರತಿಯೊಬ್ಬರೂ ಕಾಯುತ್ತಲೇ ಇದ್ದರು. ಹೀಗಾಗಿ ಆರಂಭ ಬಲು ಜೋರಾಗಿಯೇ ಇತ್ತು. ಮಂಗಳೂರಿನಲ್ಲಿ ಬೆಸ್ತರ ಕೇರಿಯಲ್ಲಿ ಟೀಮ್‌ಮೋದಿಯ ಹುಡುಗರು ನಡೆಸಿದ ಪಾದಯಾತ್ರೆ ಮನೋಜ್ಞವಾಗಿತ್ತು. ಬಳ್ಳಾರಿಯ ಕೆಲವೆಡೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೈಕಿನಲ್ಲಿ ಬಂದ ತರುಣರು‌ ತಮ್ಮ ಮೋದಿ ಪ್ರೇಮವನ್ನು‌ ಸಾಬೀತು ಪಡಿಸಿದ್ದರು. ರಾಜ್ಯದಲ್ಲೆಲ್ಲಾ ಕಡೆ ಉತ್ಸಾಹ ಜೋರಾಗಿಯೇ ಇತ್ತು. ಇದರ ಜೊತೆ‌-ಜೊತೆಗೇ ಟೀಮ್‌ಮೋದಿ, ನಮೋ ಸುನಾಮಿ ಪೇಜ್‌ಗಳನ್ನು ಆರಂಭಿಸಿದೆವು. ಪ್ರತೀ ಪೋಸ್ಟ್‌ಗಳೂ ಆ ಹಂತದಲ್ಲಿ ನಾಲ್ಕಾರು ಸಾವಿರದಷ್ಟು‌ ಶೇರ್ ಆಗುತ್ತಿದ್ದುದು ಹೆಮ್ಮೆಯೆನಿಸುತ್ತಿತ್ತು. ಕೆಲವು ದಿನಗಳಲ್ಲಿಯೇ ರಾಜ್ಯದಾದ್ಯಂತ ಮೋದಿ ಸಾಧನೆಗಳನ್ನು ಬಿತ್ತರಿಸಬಲ್ಲ ತರುಣರನ್ನು ತರಬೇತುಗೊಳಿಸುವ ಪ್ರಯತ್ನಕ್ಕೆ ಬೆಂಗಳೂರಿನಲ್ಲಿ ಕಾರ್ಯಾಗಾರ ಆರಂಭವಾಯ್ತು. ಇಲ್ಲಿ ತರಬೇತಿ ಪಡೆದವರು ರಾಜ್ಯದಾದ್ಯಂತ 35‌ಕ್ಕೂ ಹೆಚ್ಚು ಕಡೆಗಳಲ್ಲಿ ತರುಣರಿಗೆ ತರಬೇತಿ ನೀಡಿ ಕಾರ್ಯ ಚುರುಕುಗೊಳಿಸಿದರು. ಇದರ ಹಿಂದು ಹಿಂದೆಯೇ ಟೀಮ್‌ಮೋದಿ ನನಗೆ ಪ್ರವಾಸ ಮಾಡಲು‌ ಕೇಳಿಕೊಂಡಿತು. ಕಾರ್ಯಕರ್ತರ ಅಪೇಕ್ಷೆಯಂತೆಯೇ ಮಾರ್ಗವೊಂದನ್ನು ರೂಪಿಸಿ‌ ಪ್ರವಾಸ ಆರಂಭಿಸಬೇಕೆಂದು‌ ನಿಶ್ಚಯಿಸಲಾಯ್ತು. ಅದರ ಜೊತೆ ಜೊತೆಯೇ‌ ಪ್ರಧಾನಸೇವಕ ರಥಯಾತ್ರೆಯೂ ಕೂಡ.


ಈ ರಥಯಾತ್ರೆಯ ಹಿನ್ನೆಲೆಯನ್ನು ನಿಮಗೆ ಹೇಳಲೇಬೇಕು. ರಾಜ್ಯದ ಬೇರೆಲ್ಲರೂ ಆಲೋಚಿಸುವ ಮುನ್ನವೇ ರಥದ ಕಲ್ಪನೆ‌ ನಮ್ಮೊಳಗೆ ಟಿಸಿಲೊಡೆದಿತ್ತು. ಚುನಾವಣೆಗಳು ಘೋಷಣೆಯಾಗುವ ಮುನ್ನವೇ ರಾಜ್ಯದ ಪ್ರತಿ ಜಿಲ್ಲೆಗೂ ರಥವನ್ನೋಯ್ದು ಹಳ್ಳಿಗಳ ಭಾಗವನ್ನು ನಾವು ಮುಟ್ಟಬೇಕೆಂದು ನಿಶ್ಚಯಿಸಿಯಾಗಿತ್ತು. ಬೆಂಗಳೂರಿನಿಂದ ಭರತ್, ಮಂಗಳೂರಿನಿಂದ ನರೇಶ್ ತಂತಮ್ಮ ಗಾಡಿಗಳನ್ನು ಕಳಿಸಿಕೊಟ್ಟರು.‌ ನಮ್ಮ ಸರ್ವ‌ಋತು ಮಿತ್ರ ಕಲಾವಿದ ಪ್ರಸನ್ನ ರಥವನ್ನು ಸಿಂಗರಿಸುವ ಹೊಣೆಹೊತ್ತ. ರಥಕ್ಕೆ ಚಾಲನೆಯನ್ನು ಪೀಣ್ಯದಿಂದಲೇ ಕೊಡುವುದೆಂದು ನಿಶ್ಚಯಿಸಲಾಯ್ತು. ಕಾರ್ಯಕ್ರಮದ ಹೊಣೆ ಭರತ್‌ಗೆ. ಪೂಜ್ಯ ಆನಂದ ಗುರೂಜಿಯವರನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಯ್ತು. ಜನವರಿ 26 ರಂದು ನಡೆದ ಈ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮ. ಮೋದಿಯವರ ಮೂರ್ತಿಯನ್ನು ಹೊತ್ತ ರಥ ಪೀಣ್ಯದ ಆವರಣ ತಲುಪಿದಾಗ ಜನರ ಕೇಕೆ ಮುಗಿಲು ಮುಟ್ಟಿತು. ಊಹೆಗೂ ನಿಲುಕದಷ್ಟು ಜನ ಕಿಕ್ಕಿರಿದು ಸೇರಿದ್ದರು. ರಥದ ಉದ್ಘಾಟನೆಯೊಂದಿಗೆ ‘ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು’ ಎಂಬ ಸಾರ್ವಜನಿಕ‌ ಕಾರ್ಯಕ್ರಮದ ಉದ್ಘಾಟನೆಯೂ ಅಂದೇ ಆಯ್ತು. ಮೋದಿಯವರ ಸಾಧನೆಯ ಪ್ರದರ್ಶಿನಿ‌ ಮನಸೂರೆಗೊಳ್ಳುವಂತಿತ್ತು. ಎರಡು ರಥ ಎರಡು ದಿಕ್ಕಿಗೆ ಪಯಣ ಬೆಳೆಸಿದವು. ರಥಕ್ಕೆ ಎರಡು ಟಿವಿಯನ್ನು ಐವತ್ತು ದಿನಗಳ ‌ಕಾಲ ಬಳಕೆಗೆಂದು ಕೊಟ್ಟಿದ್ದು ಹಳೆಯ ಮಿತ್ರರಾದ ಶ್ರೀನಿವಾಸ್ ರೆಡ್ಡಿ ಮತ್ತವರ ಸಹೋದರರು. ನಮೋಬ್ರಿಗೇಡ್‌ನ ಸಂದರ್ಭದಲ್ಲೂ ಮುಲಾಜಿಲ್ಲದೇ ನಮ್ಮ ಸಹಕಾರಕ್ಕೆ ನಿಂತವರು ಅವರು. ಅಮೇರಿಕಾದ ಟೀಮ್‌ಮೋದಿ ತಂಡ ರಥದ ನಿರ್ಮಾಣಕ್ಕೆ ಸಾಕಷ್ಟು ಕೊಟ್ಟಿತ್ತು. ಮುಂದಿನ ದಿನಗಳಲ್ಲಿ ಈ ರಥ 500ಕ್ಕೂ‌‌ ಹೆಚ್ಚು ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಕರಪತ್ರಗಳನ್ನು ಹಂಚುತ್ತಾ ರಾಜ್ಯದ 30 ಜಿಲ್ಲೆಗಳನ್ನು ಸುತ್ತಾಡಿ ಸಿದ್ದರಾಮಯ್ಯನವರ ಕ್ಷೇತ್ರವಾದ ಬಾದಾಮಿಯಲ್ಲಿ ಸಂಪನ್ನಗೊಳ್ಳುವಾಗ ಸಾರ್ಥಕತೆಯ ಭಾವ ಮನದಲ್ಲಿತ್ತು. ಈ ನಡುವೆ ಮೋದಿಯವರ ಕುರಿತ ಲೇಖನಗಳ ಸಂಗ್ರಹದ ಪುಸ್ತಕ ಪ್ರಧಾನಸೇವಕವನ್ನೂ ಜನರ ಕೈಲಿಡಲಾಯ್ತು. ಈ ಕೃತಿಯನ್ನು ಕಡಿಮೆ ಬೆಲೆಯಲ್ಲಿ ಸಮಾಜಕ್ಕೆ ತಲುಪಿಸಲೆಂದು ಅಮೇರಿಕಾದಿಂದ ಪ್ರಸನ್ನ ಮತ್ತವರು ಮಿತ್ರರು ಸಹಕರಿಸಿದ್ದರು. 10,000 ಪುಸ್ತಕಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ನಾವು ಯಶಸ್ವಿಯಾದೆವು. ರಾಜೇಶ ಟೀಮ್‌ಮೋದಿ ಟಿಶರ್ಟ್‌ಗಳನ್ನು ರಾಜ್ಯದ ಮೂಲೆ-ಮೂಲೆಗಳಿಗೆ ಮುಟ್ಟಿಸಲು‌ ತೋರಿದ‌ ಆಸ್ಥೆಯೂ ವಿಶೇಷವಾಗಿತ್ತು.


ಇದರೊಟ್ಟಿಗೆ ಆರಂಭವಾದ ಮೋದಿದೂತರ ಚಟುವಟಿಕೆ ತೀವ್ರವಾಗಿ ನೆಲಮಟ್ಟಕ್ಕೆ ಮುಟ್ಟಿದ್ದು ಉತ್ತರಕನ್ನಡದಲ್ಲಿ. ಕಾರ್ಯಕರ್ತ ಅನಂತ್ ಭಟ್ಟರ ಉತ್ಸಾಹ ಅಲ್ಲಿ ಮೋದಿದೂತರಿಗೆ ಶಕ್ತಿ ತುಂಬಿತ್ತು. ನಿಧಾನವಾಗಿ ರಾಜ್ಯದ ಇತರೆ ಭಾಗಗಳಲ್ಲಿ ಮೋದಿದೂತರ ಚಟುವಟಿಕೆ ವ್ಯಾಪಕವಾಗಿ, ಹಳ್ಳಿ-ಹಳ್ಳಿಯಲ್ಲಿ ಮನೆ‌ಮನೆಗೆ ಮೋದಿಯವರ ವಿಚಾರವನ್ನು ತಲುಪಿಸುವ ತರುಣರ‌ ಪಡೆ‌ ನಿರ್ಮಾಣಕ್ಕೆ‌ ಈ ಕಲ್ಪನೆ ಸಹಕಾರಿಯಾಯ್ತು. ರಾಜ್ಯದಾದ್ಯಂತ ಸುಮಾರು ಮೂರು ಸಾವಿರ ಮೋದಿದೂತರು ಚುನಾವಣೆಯ ಹೊತ್ತಲ್ಲೂ ಹಗಲು-ರಾತ್ರಿ ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ಮಾಡುತ್ತಾ ಮೋದಿಯ ಗೆಲುವನ್ನು ಖಾತ್ರಿ ಪಡಿಸಲು ಪ್ರಯತ್ನಿಸುತ್ತಿದ್ದರು.

8

ಈ ನಡುವೆಯೇ ನಾವು ಆರಂಭಿಸಿದ‌‌ ಟೀಮ್‌ಮೋದಿ ಕಾಲ್ ಸೆಂಟರ್ ವ್ಯಾಪಕವಾದ ಜನಮನ್ನಣೆ ಗಳಿಸಿತು. ಬೆಂಗಳೂರಿನ ಶ್ರೀಯುತ ಆನಂದ್ ತಮ್ಮ‌ ಮನೆಯ ನೆಲಮಾಳಿಗೆಯನ್ನೇ ಟೀಮ್‌ಮೋದಿ ಯ ಕಾಲ್‌ಸೆಂಟರ್‌ಗೆಂದು ಬಿಟ್ಟುಕೊಟ್ಟರು. ಅದರ ಉದ್ಘಾಟನೆ ತರಾತುರಿಯಲ್ಲಾಯಿತಾದರೂ ಉತ್ಸಾಹ ತುಂಬಿದ ವಾತಾವರಣಕ್ಕೆ ಕೊರತೆ ಇರಲಿಲ್ಲ. ಪ್ರತಿನಿತ್ಯ ಸರಾಸರಿ‌ 300 ಕರೆಗಳು ಕಾಲ್‌ಸೆಂಟರ್‌ಗೆ ಬರುತ್ತಿದ್ದವು. ಕನಿಷ್ಠ 50 ಜನ ಪ್ರತಿನಿತ್ಯವೂ ಕಾಲ್‌ಸೆಂಟರ್‌ಗೆ ಭೇಟಿಕೊಟ್ಟು ತಾವೂ ಪ್ರಚಾರ ಕಾರ್ಯದಲ್ಲಿ ಕೈಜೋಡಿಸುವ ಮಾತುಗಳನ್ನಾಡುತ್ತಿದ್ದರು. ನಾ.ಸೋಮೇಶ್ವರ್ ಅವರು ಆಗಮಿಸಿದ್ದಾಗ ಅನಿಯಮಿತ ಕರೆಗಳು ಕಾಲ್‌ಸೆಂಟರ್‌ಗೆ. ಜನಧನ್ ಅಕೌಂಟ್‌ನ ಮತ್ತು ಬ್ಯಾಂಕಿನಿಂದ ದೊರೆಯುವ ಸೌಲಭ್ಯಗಳ ಕುರಿತಂತೆ ತಜ್ಞೆಯಾಗಿದ್ದ ಸುಮಲತಾ ಅವರು ನಾಲ್ಕು ದಿನಗಳ ಕಾಲ ಕಾಲ್‌ಸೆಂಟರ್‌ನಲ್ಲಿ ಜನರ ಕರೆಗಳನ್ನು ಸ್ವೀಕರಿಸಿದ್ದು ವಿಶೇಷವಾಗಿತ್ತು. ವಿಶೇಷ ಅತಿಥಿಗಳು ಬಂದಾಗ ನೂರಾರು ಜನ ಕಾಲ್‌ಸೆಂಟರ್‌ಗೆ ಭೇಟಿಕೊಟ್ಟು ಅತಿಥಿಗಳನ್ನು ಮಾತಾಡಿಸಿಕೊಂಡು ಹೋಗುವುದನ್ನು ನೋಡಲು ಆನಂದವೆನಿಸುತ್ತಿತ್ತು. ಅದಕ್ಕೆ ಮನೆಯ ಮಾಲೀಕರಾದ ಆನಂದ್ ಅವರು ಕಾರಣ. ಅಲ್ಲಿದ್ದ ಕಾರ್ಯಕರ್ತರಿಗೆ ಅವರು ಊಟ, ತಿಂಡಿಯ ವ್ಯವಸ್ಥೆ ಮಾಡಿಕೊಡುತ್ತಿದ್ದುದಲ್ಲದೇ ಕೆಲವೊಮ್ಮ ಬಂದ ಅತಿಥಿಗಳಿಗೂ ಮುಲಾಜಿಲ್ಲದೇ ಚಹಾ, ಕಾಫಿ ಕೊಡುವುದರಲ್ಲಿ ಹಿಂದೆ-ಮುಂದೆ ನೋಡುತ್ತಿರಲಿಲ್ಲ. ಕಾಲ್ ಸೆಂಟರ್‌ನ ಜವಾಬ್ದಾರಿಯನ್ನು ನಿರ್ವಹಿಸಿದ ಕಾರ್ಯಕರ್ತರಾದ ಗುರು, ವಿಕಾಸ್, ಅಭಿರಾಮ್, ಶ್ರೀಮತಿ ಗಿರಿಜಾ, ಖತಾರ್ ನಿಂದ ಬಂದಿದ್ದ ಮಧು ಅವರನ್ನು ಈ ಸಂದರ್ಭಗಳಲ್ಲಿ ನೆನಪಿಸಿಕೊಳ್ಳಲೇಬೇಕು. ಚುನಾವಣೆಗಳು ಘೋಷಣೆಯಾಗುತ್ತಿದ್ದಂತೆ ಕಾಲ್‌ಸೆಂಟರ್ ಅನ್ನು ಮುಚ್ಚಬೇಕಾಯ್ತು! ಆದರೆ ಆ ವೇಳೆಗಾಗಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಟೀಮ್‌ಮೋದಿ ಕಛೇರಿ ಆರಂಭವಾಗಿದ್ದರಿಂದ ನಾವು ತುಂಬಾ ತಲೆಕೆಡಿಸಿಕೊಳ್ಳಬೇಕಾಗಿ ಬರಲಿಲ್ಲ.

9

ಈ ನಡುವೆ ಟೀಮ್‌ಮೋದಿ ಸಂಕ್ರಾಂತಿ ಹಬ್ಬವನ್ನು ಬಳಸಿಕೊಂಡು ಎಳ್ಳು-ಬೆಲ್ಲವನ್ನು ಜನರಿಗೆ ಹಂಚುತ್ತಾ ತಿನ್ನಲು ಕಹಿ ಎನಿಸಿದರೂ ಹೇಗೆ ಎಳ್ಳು ದೇಹಾರೋಗ್ಯಕ್ಕೆ ಒಳ್ಳೆಯದೋ ಹಾಗೆಯೇ ಮೋದಿಯ ನಿರ್ಣಯಗಳು ಕಠಿಣವೆನಿಸಿದರೂ ದೇಶಾರೋಗ್ಯಕ್ಕೆ ಒಳ್ಳೆಯದೆಂಬ ಸಂದೇಶ ಕೊಡುತ್ತಾ ಎಳ್ಳುಬೆಲ್ಲದೊಂದಿಗೆ ಇದೇ ವಿಚಾರಗಳ ಕರಪತ್ರವನ್ನು ಕಾರ್ಯಕರ್ತರು ಎಲ್ಲೆಡೆ ಹಂಚಿದ್ದರು.

10

ಈ ನಾಲ್ಕು ತಿಂಗಳಲ್ಲೇ ನಾವು ಟ್ವಿಟರ್ ನಲ್ಲಿ ಅನೇಕ ಟ್ರೆಂಡ್‌ಗಳನ್ನೂ ಮಾಡಿದ್ದೆವು. ಕೇರಳದಲ್ಲಿ ಗೋಬ್ಯಾಕ್ ಮೋದಿ ಎಂದು ಪಾಕಿಸ್ತಾನದ ಸಹಕಾರ ಪಡೆದು ಕಾಂಗ್ರೆಸ್ಸಿಗರು ಟ್ರೆಂಡ್ ಮಾಡುವಾಗ ಮೋದಿಜಿಯವರು ಕರ್ನಾಟಕಕ್ಕೆ ಬರುವ ದಿನ #ಕಮ್_ಅಗೈನ್_ಮೋದಿಜೀ ಎಂದು, ರಾಹುಲ್‌ನನ್ನು ಕರ್ನಾಟಕ ಕಾಂಗ್ರೆಸ್ಸು ಇಲ್ಲಿಯೇ ಸ್ಪರ್ಧಿಸುವಂತೆ ಕೇಳಿಕೊಂಡಾಗ ಪಂಥಾಹ್ವಾನವನ್ನು ಸ್ವೀಕರಿಸಿ ಇಲ್ಲಿ ಬಂದರೆ #ಒಂದ್‌_ಕೈ‌_ನೋಡ್ತೀವಿ ಎಂಬ ಟ್ರೆಂಡ್ ಮಾಡಿದ್ದು ನಾವೇ. ಪ್ರಧಾನಮಂತ್ರಿ ನರೇಂದ್ರಮೋದಿಯವರು ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡಲು ಪ್ರಾರಂಭಿಸಿದಾಗ, ಟೀಮ್ ಮೋದಿ ಅವರಿಗೆ ಸ್ವಾಗತ ಕೋರಿ #ನೀವ್_ಬಂದ್ರೆ_28ಕ್ಕೆ_28 ಎಂಬ ಟ್ರೆಂಡ್ ಮಾಡಿತು. ನಂತರ ರಾಹುಲ್ ಕರ್ನಾಟಕದಿಂದ ಸ್ಪರ್ಧಿಸದೇ ಸೋಲುವ ಭೀತಿಯಿಂದ ಕೇರಳದ ವಯನಾಡಿನಿಂದ ಸ್ಪರ್ಧಿಸಲು ಮುಂದಾದಾಗ #ಓಡಿ_ಹೋದ_ಪಪ್ಪು ಎಂಬ ಟ್ರೆಂಡನ್ನೂ ಮಾಡಿದ್ದೆವು.



ಇನ್ನು ಸಾರ್ವಜನಿಕ ಸಭೆಗಳದ್ದು ಮತ್ತೊಂದು ವೈಭವ. ಬೀದರ್‌ನಿಂದ ಹಿಡಿದು ಚಾಮರಾಜನಗರದವರೆಗೆ, ಕೋಲಾರದಿಂದ ಉಡುಪಿಯವರೆಗೆ ರಾಜ್ಯದ ಮೂಲೆ-ಮೂಲೆಗಳಲ್ಲಿ ಬಹಿರಂಗ ಸಭೆಗಳು ಭರ್ಜಿರಿಯಾಗಿಯೇ ನಡೆದವು. ಈ ಸಭೆಗಳು ಎರಡು ಹಂತದಲ್ಲಿ ನಡೆದಿದ್ದು ಚುನಾವಣೆ ಘೋಷಣೆಗೆ ಮುನ್ನ ನಡೆದ ಮೊದಲ ಹಂತದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಟೀಮ್‌ಮೋದಿ ಕಾರ್ಯಕರ್ತರೇ ಇಡಿಯ ಕಾರ್ಯಕ್ರಮವನ್ನು ಆಯೋಜಿಸಿದ್ದರು‌. ಚುನಾವಣೆಗೆ ಅಭ್ಯರ್ಥಿ ಘೋಷಣೆಯಾಗುವುದಿರಲಿ ಚುನಾವಣಾ ಆಯೋಗ ಚುನಾವಣಾ ದಿನಾಂಕಗಳನ್ನು ಘೋಷಿಸುವ ಸಾಕಷ್ಟು ಮುನ್ನವೇ ಟೀಮ್‌ಮೋದಿ ಭೂಮಿಯನ್ನು ಉತ್ತು ಹಸನು ಮಾಡಿಕೊಂಡಿತು. ಮೋದಿ ಮಂತ್ರದ ಬೀಜವನ್ನು ಬಿತ್ತಿಯಾಗಿತ್ತು. ಇನ್ನು ನೀರುಣಿಸಿ ಬೆಳೆ ತೆಗೆಯುವುದಷ್ಟೇ ಬಾಕಿ ಇತ್ತು. ಚುನಾವಣೆಯ ಘೋಷಣೆಯಾದೊಡನೆ ಟೀಮ್‌ಮೋದಿ ತಂಡ ಸ್ಥಳೀಯ ಬಿಜೆಪಿಗರ ಸಹಕಾರವನ್ನು ಪಡೆದುಕೊಂಡು ಕಾರ್ಯಕ್ರಮವನ್ನು ಮಾಡಲಾರಂಭಿಸಿತು. ಗೆದ್ದೇ ಗೆಲ್ಲುವ ವಿಶ್ವಾಸವಿರುವ ಸ್ಥಳಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಎಲ್ಲೆಲ್ಲಿ ಹಿನ್ನಡೆಯಾಗಬಹುದೆಂಬ ಅನುಮಾನವಿದೆಯೋ ಅಂತಹ ಜಾಗಗಳನ್ನೇ ಆರಿಸಿಕೊಂಡು ವಿಶೇಷವಾದ ರ್ಯಾಲಿಗಳನ್ನು ಮಾಡಿ ತರುಣರಿಗೆ ಉತ್ಸಾಹ ತುಂಬಲಾಯ್ತು. ಈ ರ್ಯಾಲಿಗಳಿಗೆ ಸೇರುತ್ತಿದ್ದ ಸಂಖ್ಯೆ ಎಲ್ಲ ಪಕ್ಷಗಳಲ್ಲೂ ಆತಂಕದ ಗೆರೆಯನ್ನು ಮೂಡಿಸಿದ್ದಂತೂ ನಿಜ. ಒಟ್ಟಾರೆ 57 ದಿನಗಳಲ್ಲಿ 116 ರ್ಯಾಲಿಗಳ ಮೂಲಕ ಮೂರುಕಾಲು ಲಕ್ಷ ಜನರನ್ನು ನೇರವಾಗಿ ಸಂಪರ್ಕಿಸಿದರೆ, ಫೇಸ್‌ಬುಕ್-ಯೂಟ್ಯೂಬ್ ಮುಂತಾದವುಗಳ ಮೂಲಕ ಒಂದು ಕೋಟಿಗೂ ಹೆಚ್ಚು ನೋಡುಗರನ್ನು ಸೆಳೆಯಲಾಯ್ತು. ಒಟ್ಟಾರೆ 18,000 ಕಿ.ಮೀ ಓಡಾಟ ನಡೆಯಿತಲ್ಲದೇ 28 ಲೋಕಸಭಾ ಕ್ಷೇತ್ರಗಳನ್ನೂ ಈ ಸಂದರ್ಭದಲ್ಲಿ ಮುಟ್ಟಲಾಯ್ತು. ಇದಲ್ಲದೇ ಪ್ರಮುಖ ಜಿಲ್ಲೆಗಳಲ್ಲಿ ಪತ್ರಿಕಾಗೋಷ್ಠಿಗಳು, ವಿಶೇಷ ಸಂವಾದಗಳನ್ನು ಏರ್ಪಡಿಸಿ ಸಮಾಜವನ್ನು ದೊಡ್ಡ ಪ್ರಮಾಣದಲ್ಲಿ ಮುಟ್ಟುವ ಪ್ರಯತ್ನವಂತೂ ಜರುಗುತ್ತಲೇ ಇತ್ತು.

14

ಟೀಮ್‌ಮೋದಿಯ ಚಟುವಟಿಕೆಗೆಂದು ಸಿಂಗಪುರದಿಂದ ಬಂದ ಭಾವನಾ, ಬಹ್ರೈನ್‌ನಿಂದ ಜೊತೆಯಾದ ಕಿರಣ್ ಉಪಾಧ್ಯಾಯ, ಮನೆ-ಮನೆಗೂ ತೆರಳಿ ಪ್ರಚಾರ ಮಾಡುವ ಮೂಲಕ ಸ್ಥಳೀಯ ಕಾರ್ಯಕರ್ತರ ಶಕ್ತಿಯನ್ನು ನೂರ್ಪಟ್ಟು ವೃದ್ಧಿಸಿದ್ದರು. ಟೀಮ್‌ಮೋದಿಯ ಸಹಕಾರದೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ 3600 ಕಿ.ಮೀಗಳ ಓಟವನ್ನು ಕೈಗೊಂಡ ಕುಮಾರ್ ದಂಪತಿಗಳು ಟೀಮ್‌ಮೋದಿಯ ಗೌರವವನ್ನು ಹೆಚ್ಚಿಸಿದ್ದರು.

ಒಟ್ಟಾರೆ ಡಿಸೆಂಬರ್ 16ಕ್ಕೆ ಜನಿಸಿದ ಟೀಮ್‌ಮೋದಿ ಎಂಬ ಕೂಸು ಏಪ್ರಿಲ್ 23ರ ವೇಳೆಗೆ ತನ್ನ ನಿರ್ಧಿಷ್ಟ ಕಾರ್ಯವನ್ನು ಮುಗಿಸಿ ಸಮಾಪ್ತಿಗೆ ಸಿದ್ಧವಾಗಿದೆ. ಬಹಳ ಹೆಮ್ಮೆಯೆನಿಸುತ್ತಿದೆ. ಸಹಸ್ರಾರು ಕಾರ್ಯಕರ್ತರು ವಿಶ್ವಾಸವಿಟ್ಟು ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ನೂರಾರು ಜನ ಧನಸಹಾಯ ಮಾಡಿದ್ದಾರೆ. ಮತ್ತು ಲಕ್ಷಾಂತರ ಜನ ಮನೆಯಲ್ಲೇ ಕುಳಿತು ನಮಗೆ ಹಾರೈಸಿದ್ದಾರೆ. ನಮಗಾಗಿ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ. ಇವರೆಲ್ಲರಿಗೂ ಹೃದಯಾಂತರಾಳದ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. 23 ಸಂಜೆ 6 ಗಂಟೆಯ ನಂತರ ಟೀಮ್‌ಮೋದಿ ಇರುವುದಿಲ್ಲ. ನ್ಯಾವ್ಯಾರೂ ಅಂದಿನಿಂದ ಟೀಮ್‌ಮೋದಿಯ ಕಾರ್ಯಕರ್ತರೂ ಅಲ್ಲ. ಇದನ್ನೇಕೆ ಸ್ಪಷ್ಟಪಡಿಸುತ್ತಿದ್ದೇನೆಂದರೆ ಈ ಹೆಸರಿನಲ್ಲಿ ಯಾರೂ ಯಾರಿಗೂ ಹಣ ಕೊಡುವುದಾಗಲೀ ಅಥವಾ ಚಂದಾ ಎತ್ತುವುದಾಗಲೀ ಮಾಡಬಾರದೆಂಬ ಸೂಕ್ಷ್ಮ ಮಾಹಿತಿಗಾಗಿ ಮಾತ್ರ. ಮೋದಿಯವರು ರಾಷ್ಟ್ರಕ್ಕಾಗಿ ಮಾಡುತ್ತಿರುವ ಅವಿರತ ಸೇವೆಗೆ ಟೀಮ್‌ಮೋದಿ ಅಳಿಲು ಸೇವೆಯಷ್ಟೇ. ಎಲ್ಲರಿಗೂ ಶತ-ಶತ ನಮನ.

ವಂದೇ,

ಚಕ್ರವರ್ತಿ

 

Comments are closed.