ವಿಭಾಗಗಳು

ಸುದ್ದಿಪತ್ರ


 

ನಾಶದೊಳಗೇ ಮರುಹುಟ್ಟಿನ ಬೀಜ ಅಡಗಿದೆ!

ಕೊಲ್ಲುವವನಿಗೆ ಅದೊಂದು ಚಟ. ಮೊದಮೊದಲು ಶತ್ರುಗಳನ್ನು ಹುಡುಹುಡುಕಿ ಕೊಲ್ಲುತ್ತಾನೆ. ಹಾಗೆ ಗುರುತಿಸಬಲ್ಲವರು ಖಾಲಿಯಾದ ಮೇಲೆ ಎದುರಿಗಿರುವವರನ್ನೆ ಶತ್ರುಗಳೆಂದು ಭಾವಿಸುತ್ತಾನೆ. ಈಗ ಅವರ ಮಾರಣ ಹೋಮ. ತಾನು ಮಾಡುವ ಕೊಲೆಗೆ ಕಾರಣ ಹೇಳಿದರಾಯ್ತು. ಹೌದು. ನೀವು ಸರಿಯಾಗಿಯೇ ಊಹಿಸಿದಿರಿ. ಜಾಗತಿಕವಾಗಿ ಇಸ್ಲಾಮ್ ಈಗ ಎರಡನೆ ಹಂತ ತಲುಪಿಬಿಟ್ಟಿದೆ. ಮೊದಲೆಲ್ಲ ಅವರಿಗೆ ಸಂಖ್ಯೆ ವೃದ್ಧಿಸಿಕೊಳ್ಳುವ ಹಠವಿತ್ತು. ಅದಕ್ಕಾಗಿ ತಮ್ಮೊಡನೆ ಸೇರದವರನ್ನು ಕೊಂದರು. ಕೊಲ್ಲುವುದು ಚಟವಾದ ಮೇಲೆ ಈಗ ತಮ್ಮವರದೇ ಸಾವಿನ ದಾಹ ಶುರುವಾಯ್ತು.

Taliban-620x441
ಅಲ್ ಕೈದಾ, ಒಸಾಮ ಬಿನ್ ಲಾದೆನ್‍ನ ಕಲ್ಪನೆಯ ಕೂಸು. ಜಗಿತ್ತಿನಾದ್ಯಂತ ದ್ವೇಷದ ಕಿಚ್ಚು ಹತ್ತಿಸಿ ಮೆರೆದಾಡಿತು. ಮುಗ್ಧ ತರುಣರಿಗೆ ಕೆಲಸಕ್ಕೆ ಬಾರದ ಸಿದ್ಧಾಂತದ ಅಫೀಮು ನುಂಗಿಸಿ ಕೈಗೆ ಬಂದೂಕು ಕೊಟ್ಟು ಅವರ ಬದುಕನ್ನು ಹಾಳು ಮಾಡಿತು. ಅದರ ಕಣ್ಣೆದುರಿಗೆ ಹುಟ್ಟಿದ ಐಸಿಸ್, ಬೋಕೋ ಹರಾಮ್‍ಗಳು ಕ್ರೌರ್ಯದಲ್ಲಿ ಅಲ್‍ಕೈದಾವನ್ನೂ ಮೀರಿಸುತ್ತಿದ್ದಂತೆ ಉನ್ಮತ್ತ ತರುಣರು ಅತ್ತ ತೆರಳಲಾರಂಭಿಸಿದರು; ಹಣ ಹರಿಯಲಾರಂಭಿಸಿತು. ಈಗ ಅಲ್‍ಕೈದಾ ಅನಾಥ. ಇಸ್ಲಾಮ್‍ನ ರಕ್ಷಣೆಯ ಭಾರ ಹೊತ್ತ ಏಕೈಕ ಸಂಘಟನೆ ಎಂಬ ಹಣೆಪಟ್ಟಿ ಕಳಚಿ ಬೀಳುವುದನ್ನು ಸಹಿಸೋದು ಹೇಗೆ? ಈಗ ಅಲ್‍ಕೈದಾಗೆ ಶತ್ರು ಕ್ರಿಶ್ಚಿಯನ್ನರಲ್ಲ, ಅಮೆರಿಕನ್ನರಲ್ಲ, ಹಿಂದೂಗಳಲ್ಲ, ಭಾರತವೂ ಅಲ್ಲ. ಅದರ ಕೋಪವೀಗ ಸ್ವತಃ ಐಸಿಸ್ ಮೇಲೆ. ತಾನೇ ಹುಟ್ಟುಹಾಕಿದ ಐಸಿಸ್‍ನ ವಿರುದ್ಧ ಅಲ್‍ಕೈದಾ ತೊಡೆ ತಟ್ಟುತ್ತಿದೆ. Áಕ್ಷಸರಿಬ್ಬರ ಮಹಾ ಸಮರಕ್ಕೆ ಜಗತ್ತು ಸಜ್ಜಾಗಿದೆ.
ಇಸ್ಲಾಮಿಕ್ ಸ್ಟೇಟ್ಸ್ ಆಫ್ ಇರಾಕ್ ಅಂಡ್ ಅಲ್ ಶಾಮ್ ಅಲ್‍ಕೈದಾದ ಕೂಸಾಗಿಯೇ ಹುಟ್ಟಿದ್ದು. ಇವುಗಳ ಬೀಜ ಇರೋದು ಸೋವಿಯತ್ ರಷ್ಯಾ ವಿರುದ್ಧದ ಅಫ್ಘನ್ನರ ಜಿಹಾದಿನಲ್ಲಿ. 1980ರ ಅವಧಿಯಲ್ಲಿ ನಡೆದ ಛದ್ಮ ಯುದ್ಧಕ್ಕೆ ಜಿಹಾದಿ ಉನ್ಮತ್ತರಿಗೆ ಪೂರಕ ಸಾಮಗ್ರಿಗಳನ್ನು, ತರಬೇತಿಯನ್ನು ಒದಗಿಸಿಕೊಟ್ಟಿದ್ದು ಅಮೆರಿಕವೇ. ಈ ಪ್ರೇರಣೆಯಿಂದಲೇ ಅಬು ಮುಸಬ್ ಅಲ್ ಜರ್ಕಾವಿ 1999ರಲ್ಲಿ ಜಮಾತ್ ಅಲ್ ತವಾಹಿದ್ ಜಿಹಾದ್ ಎಂಬ ಸಂಘಟನೆ ಕಟ್ಟಿದ. ಈತನಿಗೂ ಲಾದೆನ್‍ಗೂ ಸಾಕಷ್ಟು ವ್ಯತ್ಯಾಸವಿತ್ತು. ಲಾದೆನ್ ಜೊತೆಗಿದ್ದವರು ಮಧ್ಯಮ ವರ್ಗದವರು, ಉನ್ನತ ಶಿಕ್ಷಣ ಪಡೆದವರೂ ಆಗಿದ್ದರೆ, ಜರ್ಕಾವಿ ಮತ್ತು ಅವನ ಜೊತೆಗಾರರೆಲ್ಲ ಬಡವರು ಮತ್ತು ಅನಕ್ಷರಸ್ಥರೇ ಆಗಿದ್ದರು. ಜರ್ಕಾವಿಯಂತೂ ಮುಸಲ್ಮಾನರನ್ನೆ ಕೊಂದು ತನ್ನ ಕೊಲೆಯನ್ನು ಸಮರ್ಥಿಸಿಕೊಳ್ಳುವುದರಲ್ಲಿ ನಿಸ್ಸೀಮನಾಗಿಬಿಟ್ಟಿದ್ದ. ಈ ಕಾರಣಕ್ಕೇ ಲಾದೆನ್ – ಜರ್ಕಾವಿ ಯಾವಾಗಲೂ ಕಿತ್ತಾಡುತ್ತಿದ್ದರು. 2004ರಲ್ಲಿ ಇಬ್ಬರ ನಡುವೆ ಸಂಧಾನವಾಗಿ ಜರ್ಕಾವಿ ತನ್ನ ಸಂಘಟನೆಯನ್ನು ಅಲ್‍ಕೈದಾ ಎಂದು ಹೆಸರಿಸಲು ಒಪ್ಪಿದ. ಆದರೆ ಅಲ್ಲಿಯೂ ತನ್ನತನವನ್ನು ಬಿಡಲೊಪ್ಪದೆ ಇರಾಕ್‍ನ ಅಲ್‍ಕೈದಾ (ಎಕ್ಯೂಐ) ಎಂದು ಹೆಸರಿಸಿಕೊಂಡ.
ಅದು ಲಾದೆನ್ ಕಾಲ. ಅಮೆರಿಕದ ಎರಡು ಬೃಹತ್ ಕಟ್ಟಡಗಳನ್ನು ಉರುಳಿಸಿ ಆತ ಇಸ್ಲಾಮಿನ ಏಕೈಕ ರಕ್ಷಕನೆಂಬ ಹೆಸರು ಗಳಿಸಿಬಿಟ್ಟಿದ್ದ. ಆತನನ್ನು ಹಾಗೆ ಮಾಡುವಲ್ಲಿ ಅಮೆರಿಕದ ಕೈವಾಡವೂ ಸಾಕಷ್ಟಿತ್ತು. ಕನ್ನಡದ ಸಿನೆಮಾಗಳನ್ನು ನೋಡಿಲ್ಲವೆ? ತಮಗೆ ಬೇಕಾದವರನ್ನು ರೌಡಿಗಳನ್ನಾಗಿ ಬೆಳೆಸಿ ಅವರು ಬೇಡವೆನ್ನಿಸಿದಾಗ ಎನ್‍ಕೌಂಟರ್ ಮಾಡಿ ಬಿಸಾಕುವ ಪೊಲೀಸರ ಪಾತ್ರ ಅಮೆರಿಕದ್ದು! ಪೊಲೀಸರು ಮನಸು ಮಾಡಿದರೆ ರೌಡಿಗಳನ್ನು ಗುಗಿಸುವುದು ಯಾವ ಲೆಕ್ಕ ಅಂತೀವಲ್ಲ, ಯಾಕೆಂದರೆ ಬೆಳೆಸಿದವರಿಗೆ ಅದು ಚೆನ್ನಾಗಿ ಗೊತ್ತು ಅನ್ನೋ ಕಾರಣಕ್ಕಾಗಿ ಅಷ್ಟೇ!
ತನ್ನ ಕಟ್ಟಡ ಉರುಳಿಸಿದ ನೆಪದಲ್ಲಿ ಅಮೆರಿಕ ಆಫ್ಘಾನಿಸ್ತಾನದ ಮೇಲೆ ದಾಳಿ ಮಾಡಿತು, ಧ್ವಂಸಗೈದಿತು. ಎಲ್ಲ ಮುಸ್ಲಿಮ್ ರಾಷ್ಟ್ರಗಳು ಥರಥರ ನಡುಗಿದವು. ಅಮೆರಿಕದ ಸಾಮಥ್ರ್ಯಕ್ಕೆ ಜಗತ್ತೂ ಮಾತನಾಡದೆ ಸುಮ್ಮನಾಯಿತು. ಮಾಯನ್‍ಮಾರ್‍ಗೆ ನುಗ್ಗಿ ಭಾರತ ಉಗ್ರರನ್ನು ಕೊಂದು ಬಂದಮೇಲೆ ಸಣ್ಣಪುಟ್ಟ ರಾಷ್ಟ್ರಗಳು ಬಿಡಿ, ಚೀನಾ ಕುಡ ಥಂಡಾ ಹೊಡೆದಿಲ್ಲವೆ? ಹಾಗೆ!
ಅಮೆರಿಕ್ಕೂ ಅದೇ ಬೇಕಾಗಿತ್ತು. ಪೆಟ್ರೋಲ್ ವ್ಯವಹಾರ ಈಗ ನಿರಾತಂಕವಾಗಿ ಸಾಗಿತು. ಜಾಗತಿಕವಾಗಿ ಅಮೆರಿಕ ಮತ್ತೆ ದೊಡ್ಡಣ್ಣನ ಸ್ಥಾನದಲ್ಲಿ ನಿಂತಿತು.
ಎಲ್ಲ ಪುಡಿ ರೌಡಿಗಳಿಗೂ ಆಗುವಂತೆ ಲಾದೆನ್‍ಗೂ ವಯಸ್ಸಾಯ್ತು. ಆತ ಹೆಂಡತಿ ಮಕ್ಕಳೊಡನೆ ನೆಮ್ಮದಿಯ ಬದುಕು ಕಳೆಯಬೇಕೆಂದು ಪಾಕಿಸ್ತಾನದಲ್ಲಿ ಅಡಗಿ ಕುಳಿತ. ಈಗ ಅದು ಅಕ್ಷರಶಃ ಮುದಿ ಸಿಂಹ. ಇಸ್ಲಾಮ್ ರಾಷ್ಟ್ರಗಳಿಗಿದ್ದ ಭೀತಿ ಕಡಿಮೆಯಾಗಲಾರಂಭಿಸಿತು. ಜಗತ್ತಿಗೆ ಮೆಟ್ಟಿದ ಆತಂಕದ ಛಾಯೆ ನಿವಾರಣೆಯಾಗಿಬಿಟ್ಟರೆ ಅಮೆರಿಕಕ್ಕೆ ನಯಾಪೈಸೆ ಕಿಮ್ಮತ್ತು ಇಲ್ಲವೆಂದೇ ಅಮೆರಿಕ ಲಾದೆನ್ ಅನ್ನು ಚುರುಕುಗೊಳಿಸುವ ಪ್ರಯತ್ನವನ್ನೂ ಮಾಡಿತು. ಆಫ್ಘಾನಿಸ್ತಾನದಿಂದ ಸೇನೆ ಹಿಂದೆ ಕರೆದುಕೊಂಡಿತು. ಗಡಿಯಲ್ಲಿ ಬಾಂಬ್ ಎಸೆದು ತಾಲಿಬಾನಿಗಳನ್ನು ಕೆಣಕಿತು. ಊಹೂಂ.. ಹೆದರಿ ಅವಿತ ಲಾದೆನ್ ಟಿವಿಗಳಿಗೆ ಸಂದರ್ಶನ ಕೊಡುವುದನ್ನೂ ಬಿಟ್ಟುಬಿಟ್ಟಿದ್ದ. ಉಪಾಯಗಾಣದೆ ಅಮೆರಿಕ ಅವನನ್ನು ಅವನ ಮನೆಯೊಳಕ್ಕೇ ಕೊಂದು ಬಿಸಾಡಿತು. ನಾವು ಅಮೆರಿಕದ ಸಾಹಸಕ್ಕೆ ಬೆಕ್ಕಸ ಬೆರಗಾದೆವು.
ಆ ವೇಳೆಗಾಗಲೇ ಜರ್ಕಾವಿ ಇರಾಕಿನಲ್ಲಿ ತನ್ನ ಪ್ರಭಾವ ವಿಸ್ತರಿಸಿಕೊಂಡಿದ್ದ. ಆತನ ಕತ್ತು ಕಡಿಯುವ ಕ್ರೌರ್ಯ ಅನೇಖ ಜಿಹಾದಿಗಳಿಗೆ ಉನ್ಮತ್ತತೆ ತಂದುಕೊಡುತ್ತಿತ್ತು. ಆತ ಲಾದೆನ್‍ನ ಜೊತೆಗಿದ್ದು, ಆತನಿಂದ ಬೇಕಾದ ಸಹಕಾರ ಪಡೆದುಕೊಂಡೇ ತನ್ನ ಪಡೆಗೆ ತರಬೇತಿ ಕೊಡಿಸಿದ್ದ. ಜರ್ಕಾವಿಗೂ ಲಾದೆನ್ ಬಂಟ ಜವಾಹಿರಿಗೂ ಕದನ ನಡೆದೇ ಇತ್ತು. 2006ರಲ್ಲಿ ಜರ್ಕಾವಿ ಅಲ್‍ಕೈದಾ ಇರಾಕ್‍ನ ಅಡಿಯಲ್ಲೇ ಮಬ್ಲಿಸ್ ಶುರಾ ಅಲ್ ಮುಜಾಹಿದೀನ್ ಕಟ್ಟಿದ. ಮುಂದೆ ಆತ ತಿರಿಕೊಂಡ ನಂತರ ಇದೇ ‘ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್’ ಆಗಿ ನಿರ್ಮಾಣಗೊಂಡಿತು. ಅಬು ಒಮರ್ ಅಲ್ ಬಗ್ದಾದಿ ನೇತೃತ್ವ ವಹಿಸಿದ. ಲಾದೆನ್‍ಗೆ ಜರ್ಕಾವಿ ಕೊಟ್ಟ ಮಾತು, ಜರ್ಕಾವಿಯೊಂದಿಗೇ ಸಮಾಧಿಯಾಯ್ತು ಎಂದು. ಅಷ್ಟೇ ಅಲ್ಲ, ಇನ್ನು ಮುಂದೆ ಅಲ್‍ಕೈದಾಗೂ ಐಸಿಸ್‍ಗೂ ಸಂಬಂಧವಿಲ್ಲವೆಂದು ಬಹಿರಂಗವಾಗಿಯೇ ಸಾರಿದ.
ಅಲ್‍ಕೈದಾ ಈಗ ಅಕ್ಷರಶಃ ದಾರಿ ಕಾಣದಾಗಿತ್ತು. ಅದಕ್ಕೀಗ ಗೊಂದಲ. ಹರಿದು ಬರುತ್ತಿದ್ದ ಹಣ ನಿಂತಿದ್ದಂತೂ ಸಹಿಸಲು ಸಾಧ್ಯವಿಲ್ಲದಂತಾಗಿತ್ತು. ಇಸಲಾಮನ್ನು ಜಗತ್ತಿನ ಮತವಾಗಿ ಪರಿವರ್ತಿಸಲು ಬಯಸುತ್ತಿದ್ದ ಮೌಲ್ವಿಗಳೂ ಇದನ್ನು ತೊರೆದು ಐಸಿಸ್‍ಗೆ ಬೆಂಬಲ ಕೊಡಲಾರಂಭಿಸಿದ್ದು ಪರಿಸ್ಥಿತಿಯನ್ನು ಒನ್ನಷ್ಟು ಬಿಗಡಾಯಿಸಿತ್ತು. ಐಸಿಸ್‍ನ ಕೆಟ್ಟದಾಗಿ ಕೊಲ್ಲುವ ಮಾರ್ಗವೇ ಇವರೆಲ್ಲರಿಗೂ ವಾಸ್ತವವಾಗಿ ಖುಷಿ ಕೊಟ್ಟಿದ್ದು. ಜಗತ್ತನ್ನು ತಾವು ತೆರಳುವ ಮುನ್ನವೇ ಅಲ್ಲಾಹನ ಸಾಮ್ರಾಜ್ಯ ಮಾಡಿಬಿಡಬೇಕೆಂಬ ಹುಚ್ಚು ಆವೇಶ ಅವರಿಗಿತ್ತು.
ಆದರೆ ಐಸಿಸ್‍ನ ರಕ್ತದಾಹ ನಿಲ್ಲಲಿಲ್ಲ. ಅದು ಕ್ರಿಶ್ಚಿಯನ್ ಪತ್ರಕರ್ತರನ್ನು ಕೊಂದಂತೆ ಶಿಯಾ – ಸುನ್ನಿ ಕದನದಲ್ಲೂ ರಕ್ತದೋಕುಳಿಯಾಡಿಬಿಟ್ಟಿತು. ಪಾಕಿಸ್ತಾನದ ಉಗ್ರ ಸಂಘಟನೆಗಳೂ ಇವರಿಂದ ಪ್ರೇರಿತರಾಗಿ ತಮ್ಮವರನ್ನೆ ಕೊಲ್ಲಲು ಶುರು ಮಾಡಿದವು. ಈಗ ಅನೇಕರು ಎಚ್ಚೆತ್ತುಕೊಂಡರು. ಆರಂಭದಲ್ಲಿ ಐಸಿಸ್‍ಗೆ ಬೆಂಬಲ ಕೊಟ್ಟ ಅಲ್ ಮಕ್ದೀಸಿ ಅದೊಮ್ಮೆ “ಐಸಿಸ್ ದಾರಿ ತಪ್ಪಿಬಿಟ್ಟಿದೆ. ಹೀಗಾಗಿ ಅದನ್ನು ಬಿಟ್ಟ ಎಲ್ಲ ಧರ್ಮಯೋದ್ಧಾಗಳೂ ಜಭಾತ್ ಅಲ್ ನುಸ್ರಾ (ಜೆಎನ್)ಗೆ ಸೇರಿಕೊಳ್ಳಿ” ಎಂದುಬಿಟ್ಟ. ಅತ್ತ ಇರಾಕ್‍ನಿಂದ ತಮ್ಮ ಹೋರಾಟವನ್ನು ಸಿರಿಯಾಕ್ಕೂ ವಿಸ್ತರಿಸಿದ ಐಸಿಸ್‍ನ ಅಬುಬಕ್ರ್ ಅಲ್ ಬಗ್ದಾದಿ “ನಾವು ಮತ್ತು ಜಭಾತ್ ಅಲ್ ನುಸ್ರಾ ಒಂದೇ ಸಂಘಟನೆ: ಎಂದುಬಿಟ್ಟ. ಜೆಎನ್‍ನ ಮುಖ್ಯಸ್ಥ ಜವ್ಲಾನಿಯ ಪಿತ್ಥ ನೆತ್ತಿಗೇರಿತು. ಆತ ಐಸಿಸ್‍ನ ವಿರುದ್ಧ ಗಲಾಟೆ ಶುರು ಮಾಡಿದ. ಅತ್ತ ಅಲ್‍ಕೈದಾ ಐಸಿಸ್ ಲಾದೆನ್‍ಗೆ ಕೊಟ್ಟ ಮಾತನ್ನು ಮುರಿದಿರುವುದರಿಂದ ಅದು ಧರ್ಮದ್ರೋಹಿ ಸಂಘಟನೆ ಎಂದು ಕೂಗೆಬ್ಬಿಸಿದೆ. ಸಿರಿಯಾದ ವ್ಯಾಪ್ತಿಯೊಳಗೆ ಐಸಿಸ್ ಅನ್ನು ಮಟ್ಟ ಹಾಕಲು ತಯಾರಿ ಶುರು ಮಾಡಿದೆ.
ಅರೆ. ಈ ಎಲ್ಲ ಗೊಂದಲಗಳ ನಡುವೆ ಅಮೆರಿಕ ಮಾಯವಾಗಿಬಿಟ್ಟಿದೆಯಲ್ಲ! ಖಂಡಿತ ಇಲ್ಲ. ಅದು ಅಲ್‍ಕೈದಾ ನಂತರ ಐಸಿಸ್‍ಗೆ ಬೇಕಾದ ಪುರಕ ವಾತಾವರಣ ನಿರ್ಮಿಸಿಕೊಟ್ಟಿದೆ. ಐಸಿಸ್ ಜಾಗತಿಕವಾಗಿ ಸಹಿಸಲು ಸಾಧ್ಯವಿಲ್ಲದಷ್ಟು ಆತಂಕವೆಬ್ಬಿಸಿದಾಗ ಗತ್ತಿನ ರಕ್ಷಕನಂತೆ ಅಮೆರಿಕಾ ಅಖಾಡಕ್ಕೆ ಧುಮುಕುತ್ತದೆ. ಒಂದಷ್ಟು ಏರ್‍ಸ್ಟ್ರೈಕ್ ಮಾಡಿ ಸಾವಿರಾರು ಜನರ ಮಾರಣ ಹೋಮ ನಡೆಸಿ ತಾನು ಬೀಗುತ್ತದೆ. ಅಷ್ಟರೊಳಗೆ ಜಗತ್ತಿನ ಕಟ್ಟರ್‍ಪಂಥಿ ಮುಸಲ್ಮಾನರನೇಕರು ತಮಗಮೊಳಗೆ ಕಾದಾಡಿಕೊಂಡು ಪ್ರಾಣ ಬಿಟ್ಟಿರುತ್ತಾರೆ. ಆದರೆ ಅವರ ಭಾಷಣಗಳನ್ನು ಕೇಳಿ ಉನ್ಮತ್ತಗೊಂಡ ಬೀಜಗಳು ಇನ್ನೊಂದಷ್ಟು ಕಡೆ ಮೊಳೆತು, ಸಸಿಯಾಗಿ, ಹೆಮ್ಮರವಾಗಲು ಹಪಹಪಿಸುತ್ತಿರುತ್ತವೆ. ಕ್ರೌರ್ಯದ ಮತ್ತೊಂದು ಚಕ್ರದ ತಯಾರಿ ಶುರುವಾಗಿರುತ್ತದೆ.

1 Response to ನಾಶದೊಳಗೇ ಮರುಹುಟ್ಟಿನ ಬೀಜ ಅಡಗಿದೆ!

  1. ShwethaBG

    Realy need more discussion on these kind of topics…