ವಿಭಾಗಗಳು

ಸುದ್ದಿಪತ್ರ


 

ಬದುಕೇ ಕತ್ತಲಾದವ ಕಪ್ಪು ರಂಧ್ರಗಳಿಗೆ ಬೆಳಕು ನೀಡಿದ!

ಮೊದಲ ಬಾರಿಗೆ ವೈಜ್ಞಾನಿಕ ಲೋಕ ಅಚ್ಚರಿಯ ಮಡುವಿಗೆ ಬಿತ್ತು. ಸ್ಟೀಫನ್ ಪ್ರಸ್ತುತ ಪಡಿಸಿದ ಸಿದ್ಧಾಂತವನ್ನು ಬೆರಗು ಕಂಗಳಿಂದ ನೋಡಿತು. ಕೊನೆಗೆ ಕಪ್ಪು ರಂಧ್ರಗಳು ಹೊರಸೂಸುವ ಕಿರಣಗಳಿಗೆ ‘ಹಾಕಿಂಗ್ ಕಿರಣಗಳು’ ಎಂಬ ಹೆಸರನ್ನೇ ನೀಡಿತು. ಅಲ್ಲಿಯವರೆಗೂ ಅಂದುಕೊಂಡಿದ್ದ ಸಿದ್ಧಾಂತಗಳೆಲ್ಲ ತಲೆಕೆಳಗಾದವು.

1960 ರ ಕೊನೆಯ ಭಾಗದ ವೇಳೆಗೆ ಸ್ಟೀಫನ್ ಹಾಕಿಂಗ್ನ ಆರೋಗ್ಯ ಹದಗೆಡುತ್ತಾ ಹೋಯಿತು. ಹಾಗಂತ ಆತ ಎಲ್ಲರ ಮುಂದೆ ಮಂಡಿಯೂರಿ ಕುಳಿತುಬಿಡುತ್ತಿದ್ದ ಎಂದಲ್ಲ. ತನ್ನನ್ನು ಹಿಡಿಯಲು ಬಂದವರ, ಆಸರೆ ನೀಡಲು ಹೊರಟವರ ದೂರ ತಳ್ಳುತ್ತಿದ್ದ. ‘ನನ್ನನ್ನು ನಾನೇ ನೋಡಿಕೊಳ್ಳುತ್ತೇನೆ’ ಎನ್ನುತ್ತಿದ್ದ. ಇದನ್ನು ಏನೆನ್ನಬಹುದು ಹೇಳಿ. ಆತ್ಮಶಕ್ತಿಯೋ ಅಥವಾ ದುರಹಂಕಾರವೋ? ಸ್ಟೀಫನ್ನ ಹೆಂಡತಿ ಜೇನ್ ಅದನ್ನು ‘ಎರಡೂ’ ಎಂತ ಹೇಳುತ್ತಿದ್ದಳು. ಅದರಿಂದಾಗಿಯೇ ಆತ ಅಷ್ಟು ಔನ್ನತ್ಯಕ್ಕೇರಿದ್ದೆಂದು ಬೀಗುತ್ತಿದ್ದಳು.

ಸ್ಟೀಫನ್ನ ಕರ್ಮ ಕಠೋರತೆ ಎಷ್ಟಿರುತ್ತಿತ್ತೆಂದರೆ ನೆಗಡಿಯಾಗಿ ಜ್ವರ ಬಂದಾಗಲೂ ಆತ ತನ್ನ ಕೆಲಸ ಬಿಡುತ್ತಿರಲಿಲ್ಲ. ಫಿಸಿಕ್ಸ್ ಅಧ್ಯಯನಕ್ಕೆ ವಿರಾಮ ಕೊಡುತ್ತಿರಲಿಲ್ಲ. ಅದರಲ್ಲಿ ಸ್ಟೀಫನ್ಗಿಂತ ಜೇನ್ಳ ಕೈವಾಡವೇ ಹೆಚ್ಚು. ಆಕೆ ಎಂದಿಗೂ ಅವನಿಗೆ ಶಾರೀರಿಕ ದೌರ್ಬಲ್ಯ ಹೊರೆಯಾಗಲು ಬಿಡಲಿಲ್ಲ. ಆತನ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಸುತ್ತಿದ್ದಳು. ಅಧ್ಯಯನಕ್ಕೆ ಹೆಚ್ಚು-ಹೆಚ್ಚು ವೇಳೆ ನೀಡಲು ಪ್ರೇರೇಪಿಸುತ್ತಿದ್ದಳು. ಯಶಸ್ವಿ ಪುರುಷನ ಹಿಂದೆ ಹೆಣ್ಣಿನ ಶಕ್ತಿ ಇರುವುದಕ್ಕೆ ಸ್ಟೀಫನ್-ಜೇನ್ರೇ ಸಾಕ್ಷಿ.

ಸ್ಟೀಫನ್ ಹಗಲು-ರಾತ್ರಿಗಳನ್ನು ಮೀರಿ ಓದುತ್ತಿದ್ದ. ಹಜಾರಕ್ಕೆ ಬಂದು ಆಕಾಶವನ್ನೇ ದಿಟ್ಟಿಸುತ್ತಾ ಕುಳಿತುಬಿಡುತ್ತಿದ್ದ. ಎಡ್ವಿನ್ ಹಬಲ್ನಂತಹವರು ಅದೇ ಆಕಾಶವನ್ನು ದಿಟ್ಟಿಸಿಯೇ ಅಲ್ಲವೇ ಖಗೋಳಶಾಸ್ತ್ರದ ಬಹುಮೂಲ್ಯ ಚಿಂತನೆಗಳನ್ನು ಹೊರಗೆಡವಿದ್ದು. ಐನ್ಸ್ಟೀನ್ನ ಆಲೋಚನೆಗಳೆಲ್ಲ ತಪ್ಪು-ಸರಿಗಳ ತೂಕವಳೆಯಲ್ಪಡುತ್ತಿದ್ದುದು ಆಗಸದ ಸ್ಲೇಟಿನ ಮೇಲೆಯೇ!

1

ಆಕಾಶ ನಾವಂದುಕೊಂಡಷ್ಟು ಸರಳವಲ್ಲ. ನಮಗೆ ಕಾಣುವುದಷ್ಟೇ ಸತ್ಯವಲ್ಲ. ಅಲ್ಲಿ ಕಾಣಲಾಗದ ಸತ್ಯಗಳಿವೆ. ಸೂರ್ಯನನ್ನೊಳಗೊಂಡ ನಮ್ಮ ಗೆಲಾಕ್ಸಿಯೊಂದಷ್ಟೇ ಅಲ್ಲ. ಅಲ್ಲಿ ಹತ್ತಾರು ಗೆಲಾಕ್ಸಿಗಳಿವೆ. ಸೂರ್ಯನಿಗಿಂತ ಪ್ರಬಲ ನಕ್ಷತ್ರಗಳಿವೆ. ಅವುಗಳಿಗೆ ಸುತ್ತುಹಾಕುವ ಗ್ರಹಗಳೂ ಇವೆ. ಇವುಗಳ ಸಂಶೋಧನೆ ನಡೆಸಿದ ವಿಜ್ಞಾನಿ ಹಬಲ್ ಒಂದೊಂದು ಗೆಲಾಕ್ಸಿಯೂ ವರ್ಷದಿಂದ ವರ್ಷಕ್ಕೆ ದೂರ ಸರಿಯುತ್ತಿದೆ ಎಂದ. ಕೊನೆಗೊಂದು ದಿನ ಈ ಎಲ್ಲ ಗೆಲಾಕ್ಸಿಗಳ ಸಮೂಹವಾದ ವಿಶ್ವ ಸಿಡಿದೀತೆಂದು ಊಹಿಸಿದ. ಇದರ ಅಧ್ಯಯನ ಮಾಡಿದ ಸ್ಟೀಫನ್ ಕೊನೆಗೇನೋ ವಿಶ್ವ ಸಿಡಿಯುತ್ತದೆ ಸರಿ, ಆದರೆ ಈ ವಿಶ್ವದ ಆರಂಭ ಹೇಗೆ? ಎಂಬ ಪ್ರಶ್ನೆ ಕೇಳಿಕೊಂಡ.

ಪದೇ ಪದೇ ಅದರ ಬಗ್ಗೆ ತಲೆ ಕೆಡಿಸಿಕೊಂಡ. ಕೆಲವೇ ವರ್ಷಗಳ ಹಿಂದೆ ಜಾನ್ ಆಕರ್ಿಬಾಲ್ ಇದರ ಬಗ್ಗೆಯೇ ‘ಬ್ಲಾಕ್ ಹೋಲ್’ ಎಂಬ ವಿಶಿಷ್ಟ ಕಾಯಗಳ ಪರಿಚಯ ನೀಡಿ ವಿವರಿಸಲು ಯತ್ನಿಸಿದ್ದು.

ವಾಸ್ತವವಾಗಿ ಬ್ಲಾಕ್ ಹೋಲ್ಗಳು ಯಾರಿಗೂ ಕಾಣದ ಕಾಯಗಳು. ಅದು ತನ್ನ ಬಳಿಗೆ ಬಂದ ಬೆಳಕಿನ ಕಿರಣಗಳನ್ನು ಹೀರಿಕೊಂಡು ಬಿಡುತ್ತವೆ. ಒಂದೇ ಒಂದು ಬೆಳಕಿನ ರೇಖೆಯೂ ಪ್ರತಿಫಲಿತವಾಗುವುದಿಲ್ಲ. ಹೀಗಾಗಿ ಬ್ಲಾಕ್ ಹೋಲ್ಗಳು ಯಾರ ಕಣ್ಣಿಗೂ ಕಾಣದ ಕಪ್ಪು-ಕಡುಗಪ್ಪು ರಂಧ್ರಗಳು!

ಈ ವಿವರಣೆಗಳು ಎಂಥವನನ್ನೂ ರೋಮಾಂಚಿತಗೊಳಿಸುವಂಥವೇ. ದೊಡ್ಡ ಆಕಾಶದಲ್ಲಿ ದೊಡ್ಡ ದೊಡ್ಡ ಕಾಯಗಳ ನಡುವೆಯೇ ಕಣ್ಣಿಗೆ ಕಾಣದ ರಂಧ್ರಗಳೂ ಇವೆಯೆಂದರೆ ಯಾರಿಗೆ ಆಸಕ್ತಿ ಹುಟ್ಟುವುದಿಲ್ಲ. ಸ್ಟೀಫನ್ ಕೂಡ ಕಪ್ಪು ರಂಧ್ರಗಳ ಹಿಂದೆ ಬಿದ್ದ! ಓದುತ್ತಾ ಹೋದಂತೆ ಆಸಕ್ತಿ ಕುದುರಿತು. ಅವನ ಚುರುಕು ಬುದ್ಧಿ ಗಣಿತದ ಮೂಲಕ ಕಪ್ಪು ರಂಧ್ರಗಳಿಗೆ ಹೊಸ ಹೊಸ ಆಯಾಮ ನೀಡಿತು.

ಗುರುತ್ವಾಕರ್ಷಕ ಶಕ್ತಿ ವಸ್ತುವಿನ ಸಾಂದ್ರತೆಯನ್ನು ಅವಲಂಬಿಸಿದೆ. ವಸ್ತುವಿನ ಸಾಂದ್ರತೆ ಹೆಚ್ಚುತ್ತಾ ಹೋದಂತೆ ಗುರುತ್ವಾಕರ್ಷಣ ಬಲವೂ ಹಿಗ್ಗುತ್ತದೆ. ಭಾರೀ ಭಾರಿಯಾದ ನಕ್ಷತ್ರಗಳು ಕುಗ್ಗುತ್ತ ಹೋದಂತೆ, ಅವುಗಳ ಗುರುತ್ವ ಶಕ್ತಿ ಹಿಗ್ಗುತ್ತದೆ. ಒಂದು ಹಂತ ತಲುಪುವ ವೇಳೆಗೆ ಅವುಗಳ ಗುರುತ್ವಶಕ್ತಿ ಯಾವ ಮಟ್ಟ ಮುಟ್ಟಿರುತ್ತದೆಂದರೆ, ಆ ಅತಿ ಸಾಂದ್ರ ನಕ್ಷತ್ರ ಬೆಳಕನ್ನು ಕೂಡ ತಪ್ಪಿಸಿಕೊಂಡು ಹೋಗಲು ಬಿಡುವುದಿಲ್ಲ ಎಂಬ ವಿವರಣೆ ಎಲ್ಲರಿಗೂ ಸಮಾಧಾನ ನೀಡಿತು.

ಬೆಳಕೇ ಹೊರಬರಲಾರದು ಎಂದ ಮೇಲೆ ಇನ್ನು ತಾಪದ ಕಿರಣಗಳೂ ಹೊರ ಬರಬಾರದಲ್ಲ. ಆದರೆ ಸ್ಟೀಫನ್ ತನ್ನ ಸಂಶೋಧನೆಗಳಿಂದ, ಲೆಕ್ಕಾಚಾರಗಳಿಂದ ಕಪ್ಪು ರಂಧ್ರಗಳು ಹೊರಸೂಸುವ ಕಿರಣಗಳ ಬಗ್ಗೆ ಅಧ್ಯಯನ ನಡೆಸಿದ. ಆ ಕಿರಣಗಳ ಬಗ್ಗೆ ಸ್ಫುಟವಾದ ವಿವರಣೆ ನೀಡಿದ.

ಮೊದಲ ಬಾರಿಗೆ ವೈಜ್ಞಾನಿಕ ಲೋಕ ಅಚ್ಚರಿಯ ಮಡುವಿಗೆ ಬಿತ್ತು. ಸ್ಟೀಫನ್ ಪ್ರಸ್ತುತ ಪಡಿಸಿದ ಸಿದ್ಧಾಂತವನ್ನು ಬೆರಗು ಕಂಗಳಿಂದ ನೋಡಿತು. ಕೊನೆಗೆ ಕಪ್ಪು ರಂಧ್ರಗಳು ಹೊರಸೂಸುವ ಕಿರಣಗಳಿಗೆ ‘ಹಾಕಿಂಗ್ ಕಿರಣಗಳು’ ಎಂಬ ಹೆಸರನ್ನೇ ನೀಡಿತು. ಅಲ್ಲಿಯವರೆಗೂ ಅಂದುಕೊಂಡಿದ್ದ ಸಿದ್ಧಾಂತಗಳೆಲ್ಲ ತಲೆಕೆಳಗಾದವು. ಕಪ್ಪು ರಂಧ್ರಗಳಲ್ಲಿ ಹಲವು ಕಪ್ಪಲ್ಲ, ಬಿಸಿಯಾದ ಕಿರಣಗಳನ್ನು ಹೊರಸೂಸುವ ಅಚ್ಚ ಬಿಳಿ ರಂಧ್ರಗಳು ಎಂಬುದು ಅರಿವಿಗೆ ಬಂತು. ಸ್ಟೀಫನ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಈ ಕಪ್ಪುರಂಧ್ರಗಳ ಭವಿಷ್ಯವನ್ನೂ ಅಧ್ಯಯನದ ಮೂಲಕ ದೃಢಪಡಿಸಿದ. ತನ್ನ ಜೀವಿತಾವಧಿಯಲ್ಲಿ ಚಿಕ್ಕದಾಗುತ್ತ ಸಾಗುವ ಈ ಕಪ್ಪು ರಂಧ್ರಗಳು ಕೊನೆಗೆ ಸಿಡಿದು ಚೂರು ಚೂರಾಗಿಬಿಡುತ್ತವೆ. ಸಾವಿರಾರು ಹೈಡ್ರೋಜನ್ ಬಾಂಬುಗಳು ಸಿಡಿಯುವಂತಹ ಭೀಕರ ಪರಿಣಾಮ ಅದು. ಇದು ಸ್ಟೀಫನ್ನ ಅರಿವಿಗೆ ಬರುತ್ತಲೇ ಇದೊಂದು ಅದ್ಭುತ ಸಂಶೋಧನೆ ಎಂಬುದು ಅವನಿಗೆ ಗೊತ್ತಾಗಿಹೋಗಿತ್ತು. ವಿಜ್ಞಾನಿಗಳ ಚಿಂತನೆಯ ದಿಕ್ಕನ್ನೇ ವಿರುದ್ಧವಾದ ಹಾದಿಗೊಯ್ಯುವಂಥದು ಎಂಬುದು ತಿಳಿದುಬಂದಿತ್ತು.

ಆದರೆ ಧೈರ್ಯ ಸಾಕಾಗಲಿಲ್ಲ. ಇಂಥದೊಂದು ವಿರೋಧಾತ್ಮಕ ಚಿಂತನೆ ಮುಂದಿಟ್ಟರೆ ಸಮಕಾಲೀನ ವಿಜ್ಞಾನಿಗಳು ಅದನ್ನು ಹೇಗೆ ಸ್ವೀಕರಿಸುವರೆಂಬ ಹೆದರಿಕೆ ಸ್ಟೀಫನ್ನನ್ನು ಕಾಡುತ್ತಿತ್ತು. ಆತ ಸಂಶೋಧನೆಯ ವಿವರಣೆಗಳನ್ನು ಹೊರಹಾಕದೇ ಗುಪ್ತವಾಗುಳಿಸಿಕೊಂಡಿದ್ದ.

ಸ್ಟೀಫನ್ ಕಾಲೇಜಿನಲ್ಲಿ ಅಧ್ಯಯನ ನಡೆಸುತ್ತಿದ್ದಾಗ ಗುರುಗಳಾಗಿದ್ದ ಸಿಮಿಯಾ ಈ ವಿವರಣೆಗಳನ್ನು ಕೇಳಿ ಬೆರಗಾಗಿಬಿಟ್ಟರು. ಆಪ್ತ ವಲಯದಲ್ಲಿ ‘ನೋಡಿದ್ರಾ? ಸ್ಟೀಫನ್ ಎಲ್ಲ ಸಿದ್ಧಾಂತಗಳನ್ನು ತಲೆಕೆಳಗು ಮಾಡಿಬಿಟ್ಟ’ ಎನ್ನುತ್ತಾ ತಿರುಗಾಡಿದರು. ಸ್ಟೀಫನ್ಗೆ ಧೈರ್ಯ ತುಂಬಿದರು. ಈ ಸಂಶೋಧನೆಯನ್ನು ಬೆಳಕಿಗೆ ತರಲೇಬೇಕೆಂದು ಒತ್ತಾಯಿಸಿದರು.

ಸ್ಟೀಫನ್ಗೆ ತಾಕತ್ತು ಬಂತು. ವಿಜ್ಞಾನಿಗಳು ಸೇರಿದ್ದ ಸಭೆಯಲ್ಲಿ ‘ಕಪ್ಪು ರಂಧ್ರಗಳ ಸ್ಫೋಟ?’ ಎಂಬ ವಿಚಾರದ ಬಗ್ಗೆ ಉಪನ್ಯಾಸದ ಘೋಷಣೆ ಮಾಡಿದ. ಪ್ರಶ್ನಾರ್ಥಕ ಚಿಹ್ನೆ ನೋಡಿದವರೆಲ್ಲ ಇದೊಂದು ವ್ಯರ್ಥ ಉಪನ್ಯಾಸ ಎಂದು ಮೂಗು ಮುರಿದರು.

ಆದರೆ.. ಆದದ್ದೇ ಬೇರೆ!

Comments are closed.