ವಿಭಾಗಗಳು

ಸುದ್ದಿಪತ್ರ


 

ಬೆಂಕಿ ಹಚ್ಚಿ ಕಾವೇರಿಸುವುದಲ್ಲ, ಕಸ ತೆಗೆದು ತಂಪು ಮಾಡಬೇಕಿದೆ!

ಗ್ರಾಮದ ಅಷ್ಟೂ ಕೊಳಚೆ ನೀರು, ಗ್ಯಾರೇಜುಗಳಿಂದ ಹೊರಬರುವ ತೈಲ ಮಿಶ್ರಿತ ತ್ಯಾಜ್ಯ ಕಾವೇರಿಯಲ್ಲಿ ಸೇರುತ್ತದೆ. ಜೊತೆಗೆ ಗ್ರಾಮಸ್ಥರು ಹೇಳುವಂತೆ ಕಾಫಿ ಬೀಜವನ್ನು ತೊಳೆದ ಕಪ್ಪು ನೀರು ಕೂಡ ಇದೇ ನದಿಯನ್ನು ಸೇರುತ್ತದೆ. ಅಷ್ಟಲ್ಲದೇ ಮಾಂಸ ಉದ್ಯಮಕ್ಕೆ ಹೆಸರಾದ ಈ ಎರಡೂ ಹಳ್ಳಿಗಳಿಂದ ಉತ್ಪಾದನೆಗೊಳ್ಳುವ ಅಷ್ಟೂ ತ್ಯಾಜ್ಯ ನದಿಗೆ ಆಹಾರ. ಮೀನಿನಿಂದ ಹಿಡಿದು ದನದವರೆಗಿನ ಎಲ್ಲ ಮಾಂಸದ ಅವಶೇಷಗಳೂ ಈ ಭಾಗದ ಕಾವೇರಿಯಲ್ಲಿ ನಿಮಗೆ ಕಂಡರೆ ಅಚ್ಚರಿ ಪಡಬೇಕಿಲ್ಲ!

ಕಾವೇರಿಗಾಗಿ ಯಾವ ಕದನ ಶುರುವಾಗತ್ತೋ ಹೇಳಲು ಬರುವುದಿಲ್ಲ. ರಾಜಕೀಯದ ಪಡಸಾಲೆಯಲ್ಲಿ ಮತ ಬಾಚಬೇಕು ಎನಿಸಿದಾಗಲೆಲ್ಲ ಕಾವೇರಿಯೇ ಅಸ್ತ್ರ. ಈ ಬಾರಿ ಈ ಹೋರಾಟದಲ್ಲಿ ಕಮಲ್ಹಾಸನ್ ಮತ್ತು ರಜನೀಕಾಂತ್ ಭಾಗವಹಿಸಿರುವುದು ಅಪ್ಪಟ ರಾಜಕೀಯವಲ್ಲದೇ ಮತ್ತೇನೂ ಅಲ್ಲ. ಇಷ್ಟೂ ದಿನ ಈ ಪರಿಯ ಕದನಗಳಿಂದ ದೂರವೇ ಉಳಿದಿದ್ದ ರಜನೀಕಾಂತ್ಗೂ ಕಾವೇರಿಯ ಕುರಿತಂತೆ ಅನಿವಾರ್ಯದ ರಾಜಕಾರಣಕ್ಕೆ ತಲೆಬಾಗಬೇಕಾದ ಪರಿಸ್ಥಿತಿ ನಿಮರ್ಾಣವಾಗಿರುವುದು ದುರದೃಷ್ಟಕರ ಮತ್ತು ಸದ್ಯದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ! ಕಾವೇರಿ ನೀರು ತಮಿಳುನಾಡಿಗೆ ಎಷ್ಟು ಬಿಡಬೇಕು, ಕನರ್ಾಟಕಕ್ಕೆ ಎಷ್ಟು ಉಳಿಯಬೇಕು ಎನ್ನುವುದು ಬೇರೊಂದು ಪ್ರಶ್ನೆ. ಆದರೆ ಕಾವೇರಿಯ ನೀರನ್ನು ನಾವು ಹೇಗೆ ಬಳಸುತ್ತಿದ್ದೇವೆ, ಮುಂದಿನ ಪೀಳಿಗೆಗಾಗಿ ಹೇಗೆ ಉಳಿಸುತ್ತಿದ್ದೇವೆ ಎನ್ನುವುದೇ ಸದ್ಯದ ಮಟ್ಟಿಗೆ ಕಾಡುವ ಅಂಶ.

1

ತಲಕಾವೇರಿಯಲ್ಲಿ ಪುಟ್ಟದೊಂದು ಕಂಡಿಕೆಯಲ್ಲಿ ಹುಟ್ಟಿ, ಆನಂತರ ಹೆದ್ದೆರೆಯಾಗುತ್ತಾ ತಮಿಳುನಾಡನ್ನು ದಾಟಿ ಹೋಗುವ ಕಾವೇರಿ ದಾರಿಯುದ್ದಕ್ಕೂ ಅನೇಕ ನದಿಗಳನ್ನು ತನ್ನೊಡಲೊಳಗೆ ಸೇರಿಸಿಕೊಳ್ಳುತ್ತಾ ವಿಸ್ತಾರವಾಗಿ ಸಾಗುತ್ತಾಳೆ. ಕಾವೇರಿ ಕುಡಿಯುವ ನೀರಷ್ಟೇ ಅಲ್ಲ. ನಾವು ತೆಗೆಯುವ ಬೆಳೆಯ ದೃಷ್ಟಿಯಿಂದ ಆಕೆ ನಮ್ಮ ಪಾಲಿನ ಅನ್ನ ಬ್ರಹ್ಮವೂ ಹೌದು. ದಕ್ಷಿಣ ಕನರ್ಾಟಕವೆಂದು ನಾವು ಯಾವುದನ್ನು ಕರೆಯುತ್ತೇವೆಯೋ ಅದರ ಒಟ್ಟಾರೆ ಸಂಸ್ಕೃತಿ ಇರುವುದೇ ಕಾವೇರಿಯ ತಟದ ಮೇಲೆ. ಕಾವೇರಿಯನ್ನು ಮರೆತು ಕನರ್ಾಟಕವನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಹಾಗಂತ ಕಾವೇರಿಯನ್ನು ನೆನಪಿನಲ್ಲಿರಿಸಿಕೊಳ್ಳುವುದೆಂದರೆ ಬೆಂಗಳೂರಿನ ರಸ್ತೆಗಳಲ್ಲಿ ಟೈಯರುಗಳಿಗೆ ಬೆಂಕಿ ಹಚ್ಚಿ, ರಸ್ತೆ ತಡೆ ನಡೆಸಿ, ಕಾವೇರಿ ನಮ್ಮದೆಂದು ಘೋಷಣೆ ಕೂಗುವುದಲ್ಲ. ಈ ಗಲಾಟೆಯ ಲಾಭ ಪಡೆದುಕೊಂಡು ತಮಿಳಿಗರ ವಿರುದ್ಧ ಕೂಗಾಡಿ, ಫೇಸ್ಬುಕ್ಗಳಲ್ಲಿ ಕಾವೇರಿ ಪರವಾದ ಘೋಷಣೆ ಹಾಕಿ ಕನ್ನಡ ಪರ ಹೋರಾಟಗಾರರೆಂದು ಸಾಬೀತು ಪಡಿಸಿಕೊಳ್ಳುವುದಲ್ಲ. ಬದಲಿಗೆ ನಿಜವಾದ ಕಾವೇರಿ ಸ್ವಚ್ಛತೆಯಲ್ಲಿ ನಿರತವಾಗೋದು. ಉಸಿರು ಗಟ್ಟಿಸುವ ವಾತಾವರಣದಲ್ಲಿ ಹರಿಯಲಾಗದೇ ಹರಿಯುತ್ತಿರುವ ಕಾವೇರಿಯನ್ನು ಸರಾಗವಾಗಿ ಮೈದುಂಬಿ ಹರಿಯುವಂತೆ ಮಾಡುವುದು. ನಮ್ಮ ಪಾಪವನ್ನು ತೊಳೆಯಬೇಕಾದ ದೇವತುಲ್ಯ ಕಾವೇರಿಗೆ ನಮ್ಮೂರಿನ ಕೊಳಕು ರಾಡಿಯನ್ನು, ರಾಸಾಯನಿಕವನ್ನು ತುಂಬಿಸಿ ಹಾಳುಗೆಡವುತ್ತಿದ್ದೇವಲ್ಲ ಅದನ್ನು ತಡೆಯೋದು!

ಹಾಗೆಂದುಕೊಂಡೇ ಕಳೆದ ವರ್ಷ ನಾವು ಕಾವೇರಿ ಸ್ವಚ್ಛತೆಗೆ ಆಲೋಚನೆ ರೂಪಿಸಿದ್ದೆವು. ಅದರಂತೆಯೇ ಈ ವರ್ಷ ಮಳೆಗಾಲಕ್ಕೂ ಮುನ್ನ ತಲಕಾವೇರಿಯಿಂದ ಶ್ರೀರಂಗಪಟ್ಟಣದವರೆಗಿನ ಕಾವೇರಿಗೆ ಒಂದು ಸುತ್ತು ಬಂದು ಸ್ವಚ್ಛ ಮಾಡಬೇಕಿರುವ ಸ್ಥಳಗಳನ್ನು ಗುರುತಿಸಿದೆವು. ಕಾವೇರಿಯನ್ನು ನಾವು ಹಾಳುಗೆಡವಿರುವ ರೀತಿ ಕಂಡರೆ ಎಂಥವರಾದರೂ ಬೆಚ್ಚಿ ಬಿದ್ದಾರು! ತಲಕಾವೇರಿಯಲ್ಲಿ ಹುಟ್ಟುವ ಪರಿಶುದ್ಧ ಕಾವೇರಿ ಗುಡ್ಡ ಬಿಟ್ಟು ನೆಲಕ್ಕೆ ಬಂದೊಡನೆ ಕಲುಷಿತಗೊಳ್ಳುತ್ತಾ ಸಾಗುತ್ತಾಳೆ. ಎಲ್ಲೆಡೆ ಕಾವೇರಿಯ ನೀರನ್ನು ಮೋಟಾರು ಹಾಕಿ ಮನೆಗೆ ಸೆಳೆದುಕೊಳ್ಳುವ ನಾವು ನಮ್ಮ ಮನೆಯ ಕೊಳಕು ನೀರನ್ನು ಕಾವೇರಿಗೆ ತುಂಬಿ ತಾಯಿ ಕಾವೇರಿ, ದೇವಿ ಕಾವೇರಿ ಎಂದು ಸಂಭ್ರಮಿಸುತ್ತೇವೆ. ಪುಣ್ಯ! ಕೊಡಗಿನಲ್ಲಿ ದೊಡ್ಡ-ದೊಡ್ಡ ಕಾಖರ್ಾನೆಗಳಿಲ್ಲ. ಇಲ್ಲವಾದಲ್ಲಿ ಕಾಖರ್ಾನೆಯ ರಾಸಾಯನಿಕ ವಿಷಯುಕ್ತ ವಸ್ತುಗಳನ್ನು ಕಾವೇರಿಗೇ ತುಂಬಿಸಿ ಆಕೆ ಮಡಿಕೇರಿ ಬಿಡುವ ಮುನ್ನ ಹಾಳುಗೆಡವಿಬಿಡುತ್ತಿದ್ದೆವು!

FB_IMG_1523640687715

ಏಪ್ರಿಲ್ 11 ರಂದು ತಲಕಾವೇರಿಯಲ್ಲಿ ಪೂಜೆ ಮುಗಿಸಿ ಬಲಮುರಿ ಎಂಬಂಥ ಜಾಗವೊಂದರಲ್ಲಿ ಕಾವೇರಿಯ ಸ್ವಚ್ಛತೆ ಆರಂಭಿಸಿದ್ದೆವು. 8-10 ಟನ್ನುಗಳಾಗುವಷ್ಟು ಕಸ-ಕಡ್ಡಿ, ಬಟ್ಟೆ-ಬರೆ, ಪ್ಲಾಸ್ಟಿಕ್ಕು, ಮರಗಳನ್ನು ಹೊರತೆಗೆಯುವುದರಲ್ಲಿ ಹೈರಾಣಾಗಿಬಿಟ್ಟಿದ್ದೆವು. ಬಲಮುರಿಯೆಂಬುದು ಐತಿಹಾಸಿಕವಾಗಿ ಅತ್ಯಂತ ಪ್ರಸಿದ್ಧವಾದ ಜಾಗ. ಕೊಡಗಿನ ಸಂಸ್ಕೃತಿಯೊಂದಿಗೆ ಅದು ಹಾಸು ಹೊಕ್ಕಾಗಿ ಸೇರಿಕೊಂಡುಬಿಟ್ಟಿದೆ. ತಲಕಾವೇರಿಯಲ್ಲಿ ಹುಟ್ಟಿ ಕಾವೇರಿ ಹರಿಯುತ್ತಾ ಸಾಗುತ್ತಿರುವಾಗ ಕೊಡಗಿನ ಹೆಣ್ಣುಮಕ್ಕಳು ಅಡ್ಡಲಾಗಿ ನಿಂತು ‘ಕಾವೇರಿಯನ್ನು ಇಲ್ಲಿಂದ ಬಿಡುವುದಿಲ್ಲ’ ಎಂದು ಹಠ ಹಿಡಿದಿದ್ದರಂತೆ. ಅವರ ಬೇಡಿಕೆಗೆ ಮಣಿದು ಅಲ್ಲೇ ಸುಳಿಯಾಗಿ ಸುತ್ತುವ ಕಾವೇರಿ ಒಮ್ಮೆ ಸುತ್ತಿ ಮುಂದುವರೆಯುತ್ತಾಳೆ. ಹೀಗೆ ಬಲ ದಿಕ್ಕಿಗೆ ಒಮ್ಮೆ ತಿರುಗಿದ್ದರಿಂದಾಗಿ ಈ ಕ್ಷೇತ್ರ ಬಲಮುರಿ ಎಂದಾಯ್ತು. ಹಾಗೆಯೇ, ಹಾಗೆ ಕಾವೇರಿ ತಿರುಗುವಾಗ ಅಡ್ಡಲಾಗಿ ನಿಂತಿದ್ದ ಹೆಣ್ಣುಮಕ್ಕಳ ಸೆರಗು ಹಿಂದಕ್ಕೆ ಹೋಯ್ತು. ಹೀಗಾಗಿ ಕೊಡಗಿನಲ್ಲಿ ಹೆಣ್ಣುಮಕ್ಕಳು ಸೀರೆಯ ಸೆರಗನ್ನು ಹಿಂಬದಿಯಿಂದ ಧರಿಸುತ್ತಾರೆ ಎಂಬುದು ಪ್ರತೀತಿ. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಇಷ್ಟು ಪ್ರಾಮುಖ್ಯತೆಯಿರುವ ಬಲಮುರಿಯಲ್ಲಿ ಕಾವೇರಿಯ ಪಾವಿತ್ರ್ಯದ ಕುರಿತಂತೆಯೂ ಬಲುವಾದ ಶ್ರದ್ಧೆ ಇದೆ. ಕಾವೇರಿ ತಲಕಾವೇರಿಯಲ್ಲಿ ಉಗಮಗೊಳ್ಳುವ ದಿನ ಸಿರಿವಂತರು, ಗಣ್ಯರೇನೋ ಅಲ್ಲಿಗೆ ಹೋಗಿ ದರುಶನ ಪಡೆದುಕೊಂಡುಬಿಡುತ್ತಾರೆ. ಆದರೆ ಬಡವರು, ಸಾಮಾನ್ಯರ ಪಾಡೇನು? ಅದಕ್ಕೇ ಆಕೆಯ ಉಗಮದ ಮರು ದಿವಸವೇ ಆಕೆಯ ದರ್ಶನಕ್ಕೆಂದು ಬಲಮುರಿಗೆ ಜನಪ್ರವಾಹವೇ ಹರಿದು ಬರುತ್ತದೆ. ಇಲ್ಲಿನ ಕಾವೇರಿ ತಲಕಾವೇರಿಯಲ್ಲಿರುವಷ್ಟೇ ಪರಿಶುದ್ಧಳು ಎಂಬುದು ಇಲ್ಲಿನ ಜನರ ನಂಬಿಕೆ. ನಂಬಿಕೆಯೇನೋ ಸರಿ. ಆದರೆ ಆಕೆಯನ್ನು ಹಾಗೆಯೇ ಉಳಿಸಿದ್ದೇವೆಯೋ ಎಂಬುದರಲ್ಲಿ ಮಾತ್ರ ನಾವು ಖಂಡಿತ ಸೋತುಹೋಗಿದ್ದೇವೆ. ಬಟ್ಟೆ ಒಗೆಯುತ್ತಾ ರಾಸಾಯನಿಕವನ್ನು ನದಿಗೆ ತುಂಬುತ್ತೇವೆ. ಹಳೆಯ ನೈಲಾನ್ ಬಟ್ಟೆಯನ್ನು ನದಿಗೆ ತುಂಬಿಬಿಡುತ್ತೇವೆ. ಈ ಬಟ್ಟೆ ಕರಗದೇ ಅಲ್ಲಲ್ಲಿ ಕಲ್ಲಿಗೆ ಸಿಕ್ಕಿಹಾಕಿಕೊಂಡು ಕಾವೇರಿ ಸರಾಗವಾಗಿ ಹರಿಯದಂತೆ ಮಾಡುತ್ತವೆ. ಪ್ಲಾಸ್ಟಿಕ್ ಸೇರಿಕೊಂಡುಬಿಟ್ಟರಂತೂ ಅದೊಂದು ಭೂತ ನರ್ತನ. ಕಾವೇರಿ ಉಸಿರುಗಟ್ಟಿದ ಭಾವನೆಯನ್ನು ಅನುಭವಿಸದೇ ಬೇರೆ ದಾರಿಯೇ ಇಲ್ಲ. ನಾವು ಬಲಮುರಿಯಲ್ಲಿ ಕಾವೇರಿಯನ್ನು ಸ್ವಚ್ಛಗೊಳಿಸಿದ ನಂತರ ಆಕೆಯ ಹರಿವಿನಲ್ಲಿ ಆನಂದ ಉಕ್ಕೇರುವುದನ್ನು ಅನುಭವಿಸುತ್ತಿದ್ದೆವು. ಬಹುಶಃ ಅದು ನಮ್ಮ ಭಾವನೆಗಳೇ ಇರಬಹುದು. ಆದರೆ ಆ ಒಂದು ಭಾವನೆಯನ್ನು ಅನುಭವಿಸುವ ಆನಂದ ದಕ್ಕಿದ್ದು ನಮಗೆ ಮಾತ್ರ ಎಂಬುದು ಸಂತೋಷವೇ ಸರಿ.

ಅಲ್ಲಿಂದ ಮುಂದೆ ನೆಲ್ಲಿಹುದಿಕೇರಿ ಎಂಬ ಗ್ರಾಮ. ಕುಶಾಲನಗರಕ್ಕೆ 40 ಕಿ.ಮೀ ದೂರದಲ್ಲಿರುವ ನೆಲ್ಲಿಹುದಿಕೇರಿಯದ್ದು ಒಂದು ವಿಚಿತ್ರ ಕಥೆ. ಕಾವೇರಿಗೆ ಅಡ್ಡಲಾಗಿ ಈ ಗ್ರಾಮಕ್ಕೊಂದು ಸೇತುವೆ ಕಟ್ಟಲಾಗಿದೆ. ಆ ಸೇತುವೆಯ ಒಂದು ದಡ ನೆಲ್ಲಿಹುದಿಕೇರಿಗೆ ಸೇರಿದರೆ ಮತ್ತೊಂದು ದಡ ಸಿದ್ಧಾಪುರ ಎಂಬ ಮತ್ತೊಂದು ಪಂಚಾಯ್ತಿ ವ್ಯಾಪ್ತಿಯದ್ದು. ಕಾವೇರಿಯ ಮೇಲಿನ ಹಕ್ಕು ಚಲಾಯಿಸುವ ಸಂದರ್ಭ ಬಂದಾಗ ಎರಡೂ ಗ್ರಾಮಗಳು ಕದನಕ್ಕೆ ನಿಲ್ಲುತ್ತವೆ. ಆದರೆ ಕಾವೇರಿಯ ಕುರಿತು ಕರ್ತವ್ಯದ ಬಗ್ಗೆ ಮಾತನಾಡುವಾಗ ಎರಡೂ ಗ್ರಾಮಗಳು ನುಣುಚಿಕೊಳ್ಳುತ್ತವೆ. ಒಬ್ಬರು ಮತ್ತೊಬ್ಬರನ್ನು ದೂರುತ್ತಿರುತ್ತಾರೆ. ಈ ಗ್ರಾಮದ ಅಷ್ಟೂ ಕೊಳಚೆ ನೀರು, ಗ್ಯಾರೇಜುಗಳಿಂದ ಹೊರಬರುವ ತೈಲ ಮಿಶ್ರಿತ ತ್ಯಾಜ್ಯ ಕಾವೇರಿಯಲ್ಲಿ ಸೇರುತ್ತದೆ. ಜೊತೆಗೆ ಗ್ರಾಮಸ್ಥರು ಹೇಳುವಂತೆ ಕಾಫಿ ಬೀಜವನ್ನು ತೊಳೆದ ಕಪ್ಪು ನೀರು ಕೂಡ ಇದೇ ನದಿಯನ್ನು ಸೇರುತ್ತದೆ. ಅಷ್ಟಲ್ಲದೇ ಮಾಂಸ ಉದ್ಯಮಕ್ಕೆ ಹೆಸರಾದ ಈ ಎರಡೂ ಹಳ್ಳಿಗಳಿಂದ ಉತ್ಪಾದನೆಗೊಳ್ಳುವ ಅಷ್ಟೂ ತ್ಯಾಜ್ಯ ನದಿಗೆ ಆಹಾರ. ಮೀನಿನಿಂದ ಹಿಡಿದು ದನದವರೆಗಿನ ಎಲ್ಲ ಮಾಂಸದ ಅವಶೇಷಗಳೂ ಈ ಭಾಗದ ಕಾವೇರಿಯಲ್ಲಿ ನಿಮಗೆ ಕಂಡರೆ ಅಚ್ಚರಿ ಪಡಬೇಕಿಲ್ಲ! ನೀರಿನ ಬಣ್ಣ ಕಪ್ಪಷ್ಟೇ ಅಲ್ಲ; ನೀರು ಅದೆಷ್ಟು ಕೊಳಕೆಂದರೆ ಇಲ್ಲಿ ಸ್ನಾನ ಮಾಡಿ ಮೇಲೆ ಬಂದ ನಂತರ ನೀವು ಶುದ್ಧ ನೀರಿನಿಂದ ಮತ್ತೊಮ್ಮೆ ಮೈ ತೊಳೆದುಕೊಳ್ಳಲೇಬೇಕಾದ ಪರಿಸ್ಥಿತಿ ಇದೆ. ಬೆಳಿಗ್ಗೆ 7 ರಿಂದ ಸಂಜೆ 4 ರವರೆಗಿನ ನಿರಂತರ ಶ್ರಮದಿಂದ ಹತ್ತಾರು ಟ್ರಾಕ್ಟರ್ ತುಂಬಬಲ್ಲಷ್ಟು ಕಸವನ್ನು ನದಿಯಿಂದ ಮತ್ತು ಸುತ್ತ-ಮುತ್ತಲಿನ ಪ್ರದೇಶದಿಂದ ತೆಗೆದು ಮೇಲೆ ತಲುಪಿಸಿದರೆ ಗ್ರಾಮ ಪಂಚಾಯತ್ ಅಧಿಕಾರಿಗಳು ‘ಈ ಕಸವನ್ನು ಮಾಡುವುದಾದರೂ ಏನು?’ ಎಂದು ಪ್ರಶ್ನಾರ್ಥಕವಾಗಿ ನಮ್ಮನ್ನೇ ಪ್ರಶ್ನಿಸಿದ್ದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿತ್ತು. ಅದನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಯಾವ ಉಪಾಯವೂ ಅವರಿಗೆ ದಕ್ಕದೇ ಹೋದರೆ ಈ ಎರಡು ದಿನದೊಳಗಾಗಿ ಒಣಗುವ ತ್ಯಾಜ್ಯಕ್ಕೆ ನಾವೇ ಬೆಂಕಿಯಿಟ್ಟು ಸುಟ್ಟು ಬಿಡೋಣ ಎಂದುಕೊಂಡಿದ್ದೇವೆ. ಬೆಂಕಿ ಇಡಬೇಡಿರೆಂದು ಫೇಸ್ಬುಕ್ಕಲ್ಲಿ ಕಾಮೆಂಟ್ ಹೊಡೆಯುವಂತ ಭೂಪರುಗಳು ಇದನ್ನು ಓದುತ್ತಿದ್ದರೆ ಈ ಚಟುವಟಿಕೆಯಲ್ಲಿ ನಮ್ಮೊಂದಿಗೆ ಕೈ ಜೋಡಿಸಿ ಅಂತಹ ತ್ಯಾಜ್ಯಗಳಿಗೆ ಮುಕ್ತಿ ಕರುಣಿಸಲು ನಮಗೊಂದು ಉಪಾಯ ಸೂಚಿಸಿದರೆ ಒಳಿತು. ನೆಲ್ಲಿಹುದಿಕೇರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ‘ತ್ಯಾಜ್ಯ ವಿಲೇವಾರಿ ಮಾಡಿಕೊಳ್ಳಬೇಕಾದುದು ಜನರ ಕರ್ತವ್ಯ. ಪಂಚಾಯಿತಿ ಅವರಿಗೆ ಪ್ರೇರಣೆಯನ್ನಷ್ಟೇ ಕೊಡಬಲ್ಲುದು’ ಎಂದು ಉದ್ಧಟತನದಿಂದ ಮಾತನಾಡುವಾಗ ಹದಗೆಟ್ಟಿರುವ ವ್ಯವಸ್ಥೆಯ ಕುರಿತಂತೆ ಅಸಹ್ಯವೆನಿಸುತ್ತಿತ್ತು. ಇಡಿಯ ನೆಲ್ಲಿಹುದಿಕೇರಿ ಇಂದು ಡಸ್ಟ್ಬಿನ್ ಆಗಿ ಹೋಗಿದೆ!

FB_IMG_1523640768092

ಕಾವೇರಿಯ ಜಲಾನಯನದಲ್ಲಿರುವಂಥ ಒಂದೆರಡು ಗ್ರಾಮಗಳನ್ನಷ್ಟೇ ನಿಮ್ಮೆದುರು ಉದಾಹರಣೆಗೆಂದು ತೆರೆದಿಟ್ಟೆ. ನೀವು ಈ ಲೇಖನ ಓದುವ ವೇಳೆಗಾಗಲೇ ನಾವು ಈ ಭಾಗದ ದೊಡ್ಡ ಪಟ್ಟಣವಾದ ಕುಶಾಲನಗರದಲ್ಲಿ ಸ್ವಚ್ಛತೆಯನ್ನು ಮುಗಿಸಿ ಐತಿಹಾಸಿಕ ಮತ್ತು ಪೌರಾಣಿಕವಾಗಿ ಬಲು ಪ್ರಸಿದ್ಧವಾದ ರಾಮನಾಥಪುರದಲ್ಲಿ ಕೆಲಸ ಮಾಡುತ್ತಿರುತ್ತೇವೆ. ಹಾಗಂತ ಕಾವೇರಿಯನ್ನು ಸ್ವಚ್ಛಗೊಳಿಸಿಬಿಟ್ಟಿರುತ್ತೇವೆ ಎಂಬ ಧಿಮಾಕು ಖಂಡಿತ ನಮಗಿಲ್ಲ. ಬೆಂಗಳೂರಿನಲ್ಲಿ ಕಾವೇರಿಯ ಗಲಾಟೆ ಮಾಡುತ್ತ ಕಾವೇರಿ ಹುಟ್ಟಿದ್ದೆಲ್ಲಿ ಎಂದು ಗೊತ್ತೂ ಇರದೇ ಬೊಬ್ಬಿರಿಯುವವರ ಸಾಲಿಗೆ ನಾವು ಸೇರಿಲ್ಲ. ಬದಲಿಗೆ ಈ ಕಾವೇರಿಯನ್ನು ಮುಂದಿನ ಪೀಳಿಗೆಯವರೆಗೂ ಉಳಿಸಿ ಹೋಗುವ ಜವಾಬ್ದಾರಿಯುತ ಸ್ಥಾನದಲ್ಲಿ ನಾವಿದ್ದೇವೆ ಎಂಬ ಆನಂದ-ವಿಶ್ವಾಸಗಳಂತೂ ನಮಗಿವೆ. ಕಾವೇರಿ ಕುರಿತಂತೆ ಎಲ್ಲೆಡೆ ಪ್ರಾಂತೀಯವಾದದ ಗಲಾಟೆಗಳು ತೀವ್ರವಾಗಿರುವ ಹೊತ್ತಿನಲ್ಲೇ ಈ ಸ್ವಚ್ಛತೆಗೆ ನಾವು ಪೂರ್ಣ ಪ್ರಮಾಣದಲ್ಲಿ ಜೋಡಿಸಿಕೊಂಡಿರುವುದು ಖಂಡಿತ ಸಂತೋಷದಾಯಕವೇ. ಬೀದರ್ನಿಂದ ಹಿಡಿದು ಚಾಮರಾಜನಗರದವರೆಗೆ ಹರಡಿಕೊಂಡಿರುವ ಯುವಾಬ್ರಿಗೇಡ್ನ ಸ್ವಯಂಸೇವಕರು ಈ ಕಾರ್ಯಕ್ರಮದಲ್ಲಿ ಪೂರ್ಣ ಭಾಗಿಯಾಗಿರುವುದು ಹೆಮ್ಮೆಯ ಸಂಗತಿ. ಎಲ್ಲರಿಗೂ ಒಳಿತಾಗಬೇಕು. ಕಾವೇರಿ ಮೈ ದುಂಬಿ ಹರಿಯಬೇಕು ಅಷ್ಟೇ!

Comments are closed.