ವಿಭಾಗಗಳು

ಸುದ್ದಿಪತ್ರ


 

ಬೆವರಿಳಿಸಿತು ಉಕ್ಕೇರಿದ ನೀರು!

ಈ ಬಾರಿ ಸುಧಾರಣೆ ಕಂಡಿದೆ ಅದೇನೆಂದರೆ ದಾನಿಗಳ್ಯಾರೂ ಹಣ ಕೊಡುತ್ತಿಲ್ಲ ಬದಲಿಗೆ ತಾವೇ ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸಿ ತಲುಪಿಸಲೆತ್ನಿಸಿದ್ದಾರೆ. ಆದರೆ ಹೀಗೆ ಎಲ್ಲರೂ ತಾವೇ ಕೊಡುವ ಧಾವಂತಕ್ಕೆ ಬಿದ್ದಾಗಲೇ ಸಮಸ್ಯೆ ಭೂತಾಕಾರವಾಗಿ ಬೆಳೆಯೋದು. ಎಲ್ಲಿಗೆ ಹೋಗಬೇಕೆಂಬುದು ಗೊತ್ತಾಗದೇ ಜನ ಕಂಡಲ್ಲೆಲ್ಲಾ ಹಂಚಿ ಮರಳಿ ಊರಿಗೆ ಹೋಗಿಬಿಡುವ ಆತುರ ಅವರಿಗೆ.

ಪ್ರವಾಹ ಕಳೆದು ನೀರು ಇಳಿಯಲಾರಂಭಿಸಿದೆ. ನಿಜವಾದ ಸಮಸ್ಯೆ ಈಗ ಶುರುವಾಗಿದೆ. ಅನೇಕರು ತಮ್ಮ ತಮ್ಮ ಮನೆಗಳಿಗೆ ಮರಳುತ್ತಿದ್ದಂತೆ ಅವರಿಗೆ ಸಮಸ್ಯೆಯ ಆಳ ಅರಿವಾಗುತ್ತದೆ. ಮನೆ ಬಿದ್ದಿರುವುದು ಬಿಡಿ, ಮಲಪ್ರಭೆಯ ವೇಗಕ್ಕೆ ಹೊಡೆತ ತಿಂದಿರುವ ಮನೆಗಳಲ್ಲಿ ವಾಸ ಮಾಡುವುದೂ ಸುಲಭವಿಲ್ಲ. ಒಂದು ತಿಂಗಳ ಕಾಲ ಈ ಮನೆಗಳಿಗೆ ಹೋಗುವುದೂ ನಿಷಿದ್ಧವೆಂಬಂತಾಗಿದೆ. ಅನೇಕ ಕಡೆಗಳಲ್ಲಿ ಆಗಿರುವ ನಷ್ಟಗಳನ್ನು ಊಹಿಸುವುದೂ ಅಸಾಧ್ಯ. ರೈತರದ್ದಾದರೆ ಹೊಲಗಳು ನಾಶವಾಗಿವೆ. ಆ ಕಾರಣಕ್ಕಾಗಿ ಕೂಲಿ ಕಾಮರ್ಿಕರ ಬದುಕು ಉದ್ವಸ್ತಗೊಂಡಿದೆ. ಇನ್ನು ಸೀರೆ ನೇಯುವವರ ಮಗ್ಗಗಳು ನೀರಿನಲ್ಲಿ ಮುಳುಗಿ ರಿಪೇರಿ ಮಾಡಿಸುವುದೂ ಅಸಾಧ್ಯವೆನಿಸಿದೆ. ತುಕ್ಕು ಹಿಡಿದ ಕಬ್ಬಿಣ, ಹಾಳಾದ ಮೋಟಾರುಗಳು, ನಾಶವಾಗಿ ಹೋದ ಹತ್ತಿಯ ದಾರ ಮತ್ತೆ ಸರಿ ಹೋಗುವುದು ಯಾವಾಗ? ಅದನ್ನು ರಿಪೇರಿ ಮಾಡುವವನಿದ್ದರೂ ಅವನಾದರೂ ಎಷ್ಟೂಂತ ಮಾಡಿಯಾನು? ಕುಂಬಾರನ ಮಡಿಕೆ ಬೇಯಿಸುವ ಭಟ್ಟಿಗಳು ನಷ್ಟವಾಗಿವೆ. ರೂಪುಗೊಂಡಿದ್ದ ಗಣೇಶ ಮತ್ತೆ ಮಣ್ಣಿನ ಮುದ್ದೆಯಾಗಿದ್ದಾನೆ. ವರ್ಷಕ್ಕೊಮ್ಮೆ ಬರುವ ಚೌತಿ ಅವನಿಗೆ ಜೀವನಾಧಾರ. ಈಗ ಅದೇ ಅವನ ಪಾಲಿಗಿಲ್ಲವಾಯ್ತು. ಕರಕುಶಲ ಕಲೆಯ ಭಿನ್ನ ಭಿನ್ನ ಕಾರ್ಯಗಳಲ್ಲಿ ನಿರತರಾದವರು ಈಗ ಅಕ್ಷರಶಃ ಬೀದಿಗೇ. ರಾಮದುರ್ಗದ ಓಣಿಯೊಂದರಲ್ಲಿ ಸುತ್ತಾಡುವಾಗ ಮರದ ಕೆಲಸ ಮಾಡುವವನ ಕಥೆ ನನ್ನೆದುರಿಗೆ ಬಂದಿತ್ತು. ಆತ ತಯಾರು ಮಾಡಿಟ್ಟಿದ್ದ ಸೋಫಾ, ಕುಚರ್ಿಗಳೆಲ್ಲ ನೀರನಲ್ಲಿ ತೇಲಿ ಹೋಗಿದ್ದವು. ಮಳೆಯ ಅಬ್ಬರದ ಪರಿಣಾಮವೇನೆಂಬುದು ಈಗ ಪೂರ್ಣವಾಗಿ ಅನಾವರಣಗೊಳ್ಳುತ್ತಿದೆ.

2

ಬೆಳಗಾವಿಯ ಹೊಸೂರಿನಲ್ಲಿ ಜೊತೆಯಲ್ಲೇ ಇದ್ದ ಮೂರು ಮನೆಗಳು ಧರಾಶಾಯಿಯಾಗಿದ್ದವು. ಯಾರದ್ದೆಂದು ಕೇಳಿದರೆ ಒಬ್ಬ ಅಜ್ಜಿಯದ್ದೆಂದರು ಸುತ್ತಲಿನವರು. ಆಕೆ ಗಂಜಿ ಕೇಂದ್ರದಲ್ಲಿದ್ದರು. ಕಷ್ಟವಾದರೂ ಪರವಾಗಿಲ್ಲ ಆಕೆಯನ್ನು ಕರೆಸಿ ಎಂದೆ. ಆಕೆಯನ್ನು ನೋಡಿ ಒಮ್ಮೆ ಕಣ್ಣು ತುಂಬಿ ಬಂತು. ಮಕ್ಕಳು ಮರಿಗಳ್ಯಾರೂ ಜೊತೆಗಿಲ್ಲ. ತರಕಾರಿ-ಹಣ್ಣು ಮಾರಿ ಬದುಕು ನಡೆಸುತ್ತಾಳೆ. ನಮ್ಮಲ್ಲಿರುವ ರಗ್ಗು, ಸೀರೆ ಬೇಕಾ ಎಂದು ಕೇಳಿದ್ದಕ್ಕೆ ಅಜ್ಜಿ ‘ಗಂಜಿ ಕೇಂದ್ರದಲ್ಲಿ ಕೊಟ್ಟರು, ಅಷ್ಟೇ ಸಾಕು’ ಎಂದರು. ಒಮ್ಮೆ ರೋಮಾಂಚನವೆನಿಸಿತು. ಸ್ವಾಭಿಮಾನವೇ ಬದುಕಿನ ಮೂಲ ದ್ರವ್ಯ. ಅದೊಂದಿದ್ದರೆ ಪ್ರವಾಹವೇನು, ಮೃತ್ಯವನ್ನೂ ಬೇಕಿದ್ದರೂ ಎದುರಿಸಬಹುದು. ಕದ್ರಾದಲ್ಲಿ ಪರಿಹಾರ ಸಾಮಗ್ರಿ ವಿತರಿಸುವಾಗ ನನ್ನ ಪರಿವಾರದವರೇ ಅಲ್ಲಿರುವುದನ್ನು ನೋಡಿ ಒಮ್ಮೆ ಮೈಜುಮ್ ಎಂದಿತ್ತು. ಅತ್ತೆಯ ಮಗನನ್ನು ‘ಅಕ್ಕಿ ಬೇಕಿತ್ತಾ ಎಂದು ಕೇಳಿದ್ದಕ್ಕೆ, ‘ಕಳೆದುಕೊಂಡದ್ದು ಮನೆ ಮಾತ್ರ, ಉಳಿದಿದ್ದೆಲ್ಲವೂ ಹಾಗೆಯೇ ಇದೆ’ ಎಂದಿದ್ದ ಆತ. ಆತನ ಮಾತುಗಳು ಈಗಲೂ ನನ್ನ ಕಿವಿಯನ್ನು ಕೊರೆಯುತ್ತಿವೆ. ಎಲ್ಲವೂ ಕಳೆದುಹೋಯ್ತೆಂದು ಕಣ್ಣಿರಿಡುವುದರಲ್ಲಿ ಅರ್ಥವೇನೂ ಇಲ್ಲ. ಇಷ್ಟಕ್ಕೂ ಈ ಪ್ರವಾಹವನ್ನು ಆಗುವಂತೆ ಮಾಡಿದ್ದು ಮೋದಿಯಾ ಅಥವಾ ಯಡಿಯೂರಪ್ಪನಾ? ಇದು ಪ್ರಕೃತಿಯ ಅಟ್ಟಹಾಸದ ಪರಿಣಾಮ. ನಾವೇ ಮಾಡಿದ ತಪ್ಪು ಹೀಗೆ ಕಾಡುತ್ತಿದೆ. ನದಿಯ ಮರಳನ್ನು ಹಿಂಡಿ ತೆಗೆದು, ನದಿ ಹರಿಯ ಬೇಕಿದ್ದ ಪಾತ್ರಗಳಲ್ಲೆಲ್ಲ ಕಟ್ಟಡಗಳನ್ನು ನಿಮರ್ಿಸಿ, ಹೊಲ ಗದ್ದೆಗಳಿಗಾಗಿ ನದಿ ಪಾತ್ರವನ್ನು ಅತಿಕ್ರಮಿಸಿ ಈಗ ಎಲ್ಲವೂ ಹೋಯಿತೆಂದು ಕಣ್ಣೀರಿಟ್ಟರೆ ಹೇಗೆ? ಇದು ಗೊತ್ತಿದ್ದೇ ಅನೇಕರು ಮಾತು ನಿಲ್ಲಿಸಿ ಪಾಲಿಗೆ ಬಂದದ್ದನ್ನು ಮೌನವಾಗಿ ಸ್ವೀಕರಿಸಿದ್ದಾರೆ. ಅಂಥವರು ಅದಾಗಲೇ ಹೊಸ ಬದುಕನ್ನು ಕಟ್ಟುವ ತಯಾರಿ ಆರಂಭಿಸಿಬಿಟ್ಟಿದ್ದಾರೆ. ಕೆಲವರಂತೂ ತಮ್ಮ ಮನೆಯೇ ನೀರಿನಲ್ಲಿ ಮುಳುಗಿದ್ದಾಗ ಇತರರ ಬದುಕು ಕಟ್ಟಿಕೊಡುವ ಕಾಯಕದಲ್ಲಿ ನಿರತವಾಗಿದ್ದನ್ನು ನಾನು ನೋಡಿದ್ದೇನೆ. ಹಾಗೆ ಒಂದಿಬ್ಬರಲ್ಲ; ಹತ್ತಾರು ಜನ!

ಹಾಗಂತ ಎಲ್ಲರೂ ಹೀಗೆಯೇ ಅಂದುಕೊಳ್ಳಬೇಡಿ. ಸಂಕೇಶ್ವರದಲ್ಲಿ ಮನೆ ಕಳೆದುಕೊಂಡವರೊಬ್ಬರಿಗೆ ಪರಿಹಾರ ಸಾಮಗ್ರಿ ನೀಡುವಾಗ ತಾಯಿಯೊಬ್ಬರು ಓಡಿ ಬಂದು ‘ಪ್ರವಾಹ ಬಂದಾಗ ನಾನು ಊರಿನಲ್ಲಿರಲಿಲ್ಲ, ನನಗೇನೂ ಸಿಗಲಿಲ್ಲ’ ಎಂದರು. ನಾವೆಲ್ಲ ಯಾವ ಮಾತೂ ಆಡದೇ ಆಕೆಗೆ ಎಲ್ಲವನ್ನೂ ಒದಗಿಸಿ ಕೊಟ್ಟರೆ, ‘ಕ್ಯಾರಿ ಬ್ಯಾಗ್ ಇದ್ಯೆನ್ರೀ’ ಎಂದುಬಿಟ್ಟಳು ಆಕೆ. ಪರಿಹಾರ ವಿತರಣೆ ಮಾಡುತ್ತಿದ್ದವರು ಒಬ್ಬರ ಮುಖ ಮತ್ತೊಬ್ಬರು ನೋಡಿಕೊಂಡು ನಗುತ್ತ ಟವೆಲ್ನ್ನು ಅಗಲ ಮಾಡಿ ಅದಕ್ಕೇ ಎಲ್ಲ ತುಂಬಿಸಿ ಗಂಟು ಕಟ್ಟಿದರು. ಗಂಜಿ ಕೇಂದ್ರಗಳಲ್ಲಿ ವಿತರಣೆಗೆಂದು ಹೋಗುತ್ತಿದ್ದರಲ್ಲ ಅಲ್ಲಿ ನೂಕು ನುಗ್ಗಲಾಗುತ್ತಿತ್ತು. ಬಹುತೇಕ ಕಡೆ ಹೀಗೆ ನುಗ್ಗಾಡುತ್ತಿದ್ದವರು ನಿರಾಶ್ರಿತರಾಗಿರುತ್ತಿರಲೇ ಇಲ್ಲ. ಅವರನ್ನು ತಳ್ಳಿ ನುಗ್ಗಬಲ್ಲ ಸಮರ್ಥರಾಗಿರುತ್ತಿದ್ದರು ಅಷ್ಟೇ. ಒಂದು ಹಂತದಲ್ಲಂತೂ ನಿರಾಶ್ರಿತರಿಗಿಂತಲೂ ಎನೂ ತೊಂದರೆಯಾಗದೇ ಆರಾಮಾಗಿದ್ದೂ ಬರುತ್ತಿದ್ದ ಪರಿಹಾರ ಸಾಮಗ್ರಿಗಳನ್ನು ಕಸಿಯುತ್ತ, ಹಳ್ಳಿಯ ಆರಂಭದಲ್ಲೇ ಹೊಂಚು ಹಾಕುತ್ತ ಕುಳಿತಿರುತ್ತಿದ್ದ ರೌಡಿಗಳು, ಗಠಾಣಿಯರು ದಿನಗಳೆದಂತೆ ಸಾಮಾನ್ಯ ದೃಶ್ಯವಾಗಿದ್ದರು. ಅನೇಕರು ತಾವು ತಂದ ಸಾಮಗ್ರಿಗಳನ್ನು ವಿತರಿಸದೇ ಹಾಗೆಯೇ ಹೋಗಿದ್ದುಂಟು. ಒಟ್ಟಿನಲ್ಲಿ ನೊಂದವರಿಗೆ ಸೂಕ್ತ ಪರಿಹಾರ ವಿತರಿಸುವ ವ್ಯವಸ್ಥೆಯಲ್ಲಿ ನಾವು ಸಂಪೂರ್ಣ ಸೋತಿದ್ದೆವು. ಕೊಡುವವರ ಸಂಖ್ಯೆ ಪಡೆಯುವವರಿಗಿಂತಲೂ ಬಲು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದ್ದುದೇ ಇದಕ್ಕೆಲ್ಲ ಕಾರಣವಾಗಿದ್ದರಬಹುದೇನೋ?

3

ಇಂತಹ ಸಂದರ್ಭಗಳಲ್ಲಿ ಕೊಡುವ ಮತ್ತು ಪಡೆಯುವ ವ್ಯವಸ್ಥೆಯನ್ನು ಸ್ವಲ್ಪ ಸುಧಾರಿಸುವುದು ನಮ್ಮಿಂದಾಗದೇ? ಒಂದಂತೂ ಈ ಬಾರಿ ಸುಧಾರಣೆ ಕಂಡಿದೆ ಅದೇನೆಂದರೆ ದಾನಿಗಳ್ಯಾರೂ ಹಣ ಕೊಡುತ್ತಿಲ್ಲ ಬದಲಿಗೆ ತಾವೇ ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸಿ ತಲುಪಿಸಲೆತ್ನಿಸಿದ್ದಾರೆ. ಆದರೆ ಹೀಗೆ ಎಲ್ಲರೂ ತಾವೇ ಕೊಡುವ ಧಾವಂತಕ್ಕೆ ಬಿದ್ದಾಗಲೇ ಸಮಸ್ಯೆ ಭೂತಾಕಾರವಾಗಿ ಬೆಳೆಯೋದು. ಎಲ್ಲಿಗೆ ಹೋಗಬೇಕೆಂಬುದು ಗೊತ್ತಾಗದೇ ಜನ ಕಂಡಲ್ಲೆಲ್ಲಾ ಹಂಚಿ ಮರಳಿ ಊರಿಗೆ ಹೋಗಿಬಿಡುವ ಆತುರ ಅವರಿಗೆ. ಪಂಚಾಯತಿ, ತಾಲೂಕು ಅಧಿಕಾರಿಗಳು ಮತ್ತು ಜಿಲ್ಲಾಡಳಿತವೂ ಮೂಗು ತೂರಿಸಲಾಗದಷ್ಟು ವಿಕಟ ಪರಿಸ್ಥಿತಿ ಅಲ್ಲಿ. ಯಾರು ಕಾರಲ್ಲಿ ಹೋದರೂ ಊರಿನ ಜನ ಎಳೆದೆಳೆದುಕೊಂಡು ಹೋಗಿ ತಮ್ಮ ಮನೆ ತೋರಿಸುತ್ತಾರೆ. ಅಧಿಕಾರಿಗಳು ನೋಡಿದರೊಳಿತು, ಪರಿಹಾರ ಹೆಚ್ಚು ಸಿಗುತ್ತದೆ ಎಂಬ ನಂಬಿಕೆ. ನೆನಪಿಡಿ. ಆಗಿರುವ ಅನಾಹುತಕ್ಕಿಂತಲೂ ಆಗಿದೆ ಎಂದು ತೋರ್ಪಡಿಸುತ್ತಿರುವುದು ಹತ್ತು ಪಾಲು ಹೆಚ್ಚು. ಪರಿಹಾರ ವಿತರಣೆಯ ಸವಾಲು ಕಡಿಮೆಯದ್ದಲ್ಲ! ಪಟ್ಟದಕಲ್ಲಿನಲ್ಲಿ ತರುಣರು ಮಾಡಬಹುದಾದ ಕೆಲಸವೇನಿದೆ ಎಂದು ಅವಲೋಕನಕ್ಕೆಂದು ಹೋಗಿದ್ದಾಗ ಊರಿನ ಜನರು ಸುತ್ತುವರಿದು ತಮ್ಮ ಮುಳುಗಡೆಗೆ ಅಲ್ಲಿನ ಸ್ಮಾರಕವೇ ಕಾರಣ ಎಂದುಬಿಟ್ಟರು. ನನ್ನ ಕಿವಿಗಳನ್ನು ನಾನೇ ನಂಬದಾದೆ. ಸ್ಮಾರಕದ ಕಾರಣಕ್ಕೆ ಇಡಿಯ ಊರಿಗೆ ಬೆಲೆ ಬಂದಿದೆ, ಅದರಿಂದಾಗಿ ಜಗತ್ತಿನ ಜನ ಬಾಗಲಕೋಟೆಯತ್ತ ತಿರುಗಿ ಕುಳಿತಿದ್ದಾರೆ. ಅನೇಕರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದೆ ಅದು. ಎಲ್ಲಕ್ಕಿಂತಲೂ ಮಿಗಿಲಾಗಿ, ಕನ್ನಡದ ಸಂಸ್ಕೃತಿಯನ್ನು ಶತ-ಶತಮಾನಗಳಿಂದ ಜಗತ್ತಿಗೆ ಪರಿಚಯಿಸುತ್ತಿರುವ ಸ್ಮಾರಕ ಅದು. ಹೀಗಿರುವಾಗ ಅದನ್ನೇ ಬಲಿಕೊಟ್ಟು ತಮ್ಮ ಮನೆಯನ್ನು ಉಳಿಸಿಬಿಡಿ ಎನ್ನೋದು ಯಾವ ನ್ಯಾಯ? ಸ್ಮಾರಕದ ಬಳಿಯಿರುವವರಿಗೆ ಬದಲಿ ವ್ಯವಸ್ಥೆ ಮಾಡಲು ಅದೆಷ್ಟೇ ಪ್ರಯತ್ನ ಪಟ್ಟರೂ ಜಗ್ಗದ ಜನ ಈಗ ಬೊಬ್ಬೆಯಿಟ್ಟರೆ ಏನು ಹೇಳಬೇಕು ಹೇಳಿ?!

4

ಇವೆಲ್ಲವನ್ನೂ ಸೇರಿಸಿಯೇ ವ್ಯವಸ್ಥೆ ಸುಧಾರಿಸಬೇಕೆಂದಿದ್ದು ನಾನು. ಶಿವಮೊಗ್ಗದಲ್ಲಿ ಡಿಸಿ ಮುಲಾಜಿಲ್ಲದೇ ಪ್ರಕಟಣೆ ಹೊರಡಿಸಿಬಿಟ್ಟಿದ್ದರು; ‘ಪರಿಹಾರ ಸಾಮಗ್ರಿಯನ್ನು ಜಿಲ್ಲಾಡಳಿತದ ಮೂಲಕವೇ ವಿತರಿಸಬೇಕು ಮತ್ತು ಯಾರೂ ಗಂಜಿ ಕೇಂದ್ರಕ್ಕೆ ಹೋಗಿ ನೇರವಾಗಿ ನೀಡುವಂತಿಲ್ಲ’ ಅಂತ. ಒಂದು ರೀತಿ ಒಳ್ಳೆಯದೇ. ಆದರೆ ಇದು ನಗರ ಮಟ್ಟಕ್ಕೆ ಹೊಂದಬಹುದೇನೋ. ಅಲ್ಲಿಂದ ಹಳ್ಳಿಗಳಿಗೆ ಅದನ್ನು ಮುಟ್ಟಿಸುವುದು ಸಾಹಸದ ಕೆಲಸ. ಇದಕ್ಕೆ ಪೂರ್ವ ತಯಾರಿ ಸಾಕಷ್ಟು ಬೇಕು. ಕೊನೆಯ ಪಕ್ಷ ಗಂಜಿ ಕೇಂದ್ರಗಳಲ್ಲಿ ಸಂತ್ರಸ್ತರನ್ನು ಸೂಕ್ತವಾಗಿ ಗುರುತಿಸುವ ದಾಖಲಿಸುವ ಕೆಲಸ ಆಗಿದ್ದರೆ ಉಪಯೋಗವಾಗಿರುತ್ತಿತ್ತೇನೋ? ವಿತರಣೆಗೆ ಹಳ್ಳಿಗಳನ್ನು, ಅಪಘಾತಕ್ಕೊಳಗಾಗಿರುವ ಜನರ ಸಂಖ್ಯೆಯನ್ನೂ ಜಿಲ್ಲಾಡಳಿತವೇ ಕಾಲಕಾಲಕ್ಕೆ ಬಿಡುಗಡೆ ಮಾಡಿದ್ದರೂ ವ್ಯವಸ್ಥೆ ನೆಟ್ಟಗಿರುತ್ತಿತ್ತೇನೋ? ಎಲ್ಲರೂ ಟಿವಿ ನೋಡುತ್ತಿದ್ದರು. ಅಲ್ಲಿ ಕ್ಷಣಕ್ಷಣಕ್ಕೂ ಸಿಗುತ್ತಿದ್ದ ಮಾಹಿತಿಯನ್ನು ಆಧರಿಸಿ ಅತ್ತ ಧಾವಿಸುತ್ತಿದ್ದರು. ನೆನಪಿಡಿ. ನೂರು ಸಂತ್ರಸ್ತರಲ್ಲಿ ಒಬ್ಬನಿಗೆ ತೊಂದರೆಯಾದರೂ ಅದು ಸುದ್ದಿ ಬರೆಯುವವನ ಪಾಲಿಗೆ ಹಬ್ಬ. ಆದರೆ ಉಳಿದ 99 ಜನರಿಗೆ ವ್ಯವಸ್ಥೆ ಸರಿಯಾಗಿ ಸಿಗುವಂತೆ ಮಾಡಲು ಶ್ರಮಿಸಿದವರನ್ನು ಕೇಳುವರಾರು? ಅನೇಕ ಗಂಜಿ ಕೇಂದ್ರಗಳು ಪ್ರವಾಹದ ಆರಂಭದ ಹೊತ್ತಲ್ಲೆ ತೆರೆಯಲ್ಪಟ್ಟವು ಮತ್ತು ಅವುಗಳನ್ನು ನಿಭಾಯಿಸಲು ಜಿಲ್ಲಾಡಳಿತ ಸಹಕಾರ ಮಾಡಿತ್ತಾದರೂ ಜವಾಬ್ದಾರಿ ಹೊತ್ತು ಅದನ್ನು ನಡೆಸುವವರು ಬೇಕಿದ್ದರಲ್ಲ ಆಯಾ ಊರುಗಳಲ್ಲೇ ಅದಕ್ಕೆ ಸ್ವಯಂ ಸೇವಕರು ಹುಟ್ಟಿಕೊಂಡರು. ಗೋಕಾಕಿನ ಅಡಿಬೆಟ್ಟಿಯಲ್ಲಿ ಸ್ವಚ್ಛತೆಯ ಕಾರ್ಯದಲ್ಲಿ ನಿರತರಾಗಿದ್ದಾಗ ಒಂದಷ್ಟು ತರುಣರು ಮಾತನಾಡಿಸಲು ಬಂದರು. ಮಂಡ್ಯದಿಂದ ಲಾರಿಯೊಂದಿಗೇ ಬಂದ ಅವರು ಗ್ಯಾಸು, ತರಕಾರಿ, ಅಕ್ಕಿ-ಬೇಳೆ ಜೊತೆಗೆ ಅಡುಗೆ ಭಟ್ಟರನ್ನೂ ಕರೆತಂದುಬಿಟ್ಟಿದ್ದರು. ಊರೂರಿಗೆ ಹೋಗಿ ಇಡಿಯ ಊರಿಗೇ ಅಡುಗೆ ಮಾಡಿ ಹಾಕಿಸುತ್ತ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸುತ್ತಿದ್ದರು. ಗಂಜಿ ಕೇಂದ್ರಗಳು ಮುಚ್ಚಿದ ನಂತರ ಮನೆ ಸ್ವಚ್ಛತೆಯಲ್ಲಿ ನಿರತರಾಗಿದ್ದ ಇವರಿಗೆ ಅಡುಗೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಈ ಮಿತ್ರರು ತೊಡೆದು ಹಾಕಿದ್ದರು. ಆದರೆ ಇವರಿಗೂ ಮುಂದೆಲ್ಲಿ ಹೋಗಬೇಕೆಂಬ ಮಾರ್ಗದರ್ಶನ ಇರಲಿಲ್ಲ. ಇಷ್ಟೆಲ್ಲ ಆಧುನಿಕ ವ್ಯವಸ್ಥೆ ಹೊಂದಿರುವ ನಾವು ಎಲ್ಲಿ ಏನಾಗುತ್ತಿದೆಯೆಂಬ ತತ್ಕ್ಷಣದ ಮಾಹಿತಿಯನ್ನು ಸಮಾಜದ ಜೊತೆ ಹಂಚಿಕೊಳ್ಳುವಂತಾಗಿದ್ದರೆ ಪರಿಹಾರದ ಪ್ರವಾಹವನ್ನೂ ನಿಯಂತ್ರಿಸಬಹುದಿತ್ತು.

ಇನ್ನು ಮುಂದೆ ಇನ್ನೂ ಕೆಟ್ಟ ಸ್ಥಿತಿ ಇದೆ. ಸಕರ್ಾರದ ಪರಿಹಾರದ ಘೋಷಣೆಯಾದ ಮೇಲೆ ಅದನ್ನು ಪಡೆಯಲು ಧಾವಿಸುವ ಮಂದಿ ಒಬ್ಬರೇ ಇಬ್ಬರೇ?! ಆಪ್ತರ ವಶೀಲಿಬಾಜಿಗಳು, ಗುಮ್ಮ ತೋರಿಸಿ ಹಣಕೀಳುವ ದಗಾಕೋರರು, ಸುಳ್ಳು ಹೇಳಿ ತಿಜೋರಿ ತುಂಬಿಸಿಕೊಳ್ಳುವ ಪುಢಾರಿಗಳು ಎಲ್ಲರೂ ಸಾಲಾಗಿ ನಿಲ್ಲುತ್ತಾರೆ. ಬೊಕ್ಕಸ ಬರಿದಾಗುತ್ತದೆ ಆದರೆ ನೊಂದ ಕಟ್ಟಕಡೆಯ ವ್ಯಕ್ತಿ ಮಾತ್ರ ಹಾಗೆಯೇ ಉಳಿದುಬಿಡುತ್ತಾನೆ.

5

ಈ ನಡುವೆ ಪ್ರವಾಹದ ಸಂದರ್ಭದಲ್ಲಿ ಹಗಲು ರಾತ್ರಿಗಳನ್ನು ಒಂದು ಮಾಡಿ ದುಡಿದ ವಿದ್ಯುತ್ ಇಲಾಖೆಯ ಪವರ್ಮೆನ್ಗಳು ಮರೆತುಹೋಗಿಬಿಡುತ್ತಾರೆ. ತನ್ನ ಮನೆಯನ್ನು ಖಾಲಿ ಮಾಡಿಸಿ ಇತರರನ್ನು ಪ್ರವಾಹದ ಸುಳಿಯಿಂದ ಪಾರುಮಾಡುತ್ತಲೇ ಉಳಿದ ಧನಂಜಯ ಮತ್ತವನ ತಂದೆ ರಾವ್ ಸಾಹೇಬರು ಕಾಲಕ್ರಮದಲ್ಲಿ ಯಾರಿಗೂ ನೆನಪಿರುವುದಿಲ್ಲ. ಉರುಳಿದ ಮನೆಗಳನ್ನು ಬಿಟ್ಟು ರೋಸಿ ಹೋಗಿ ಸಕರ್ಾರ ಈ ಹಿಂದೆಯೇ ಕಟ್ಟಿಸಿಕೊಟ್ಟಿದ್ದ ಆಶ್ರಯ ಮನೆಗಳಿಗೆ ತೆರಳಿಬಿಡುವವರು ಬರುಬರುತ್ತ ಹಳೆಯ ಮನೆಯನ್ನೂ ಮರೆತುಬಿಡಬಹುದು. ಆದರೆ ಈ ನಡುವೆ ಇಂಥದ್ದೊಂದು ಭೀಕರ ಆಘಾತದಿಂದ ನಾವು ಪಾಠ ಕಲಿತು ಇನ್ನು ಮುಂದೆ ಈ ಬಗೆಯ ಸಮಸ್ಯೆಗಳು ಘಟಿಸದಂತೆ, ಅಕಸ್ಮಾತ್ ಆಗಿಬಿಟ್ಟರೂ ಪರಿಹಾರ ಕಾರ್ಯ ತ್ವರಿತವಾಗಿ ಮತ್ತು ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳುವ ಯೋಜನೆಯನ್ನು ರೂಪಿಸಿ ಇಟ್ಟುಕೊಳ್ಳಲಿಲ್ಲವೆಂದರೆ ಇನ್ನು ಮುಂದಿನ ದಿನಗಳು ಬಲು ಕಷ್ಟ. ಏಕೆಂದರೆ ನಾವು ಕಟ್ಟಿಕೊಂಡು ಕುಳಿತಿರುವ ಡ್ಯಾಮುಗಳೆಲ್ಲದರ ಆಯಸ್ಸು ಹೂಳಿನಿಂದಾಗಿ ದಿನೇ ದಿನೇ ಕಡಿಮೆಯಾಗುತ್ತಲೇ ಇದೆ. ನಾವು ನಮಗೆ ಅರಿಯದೇ ನೀರನ್ನುಗುಳುವ ಜ್ವಾಲಾಮುಖಿಯ ಮೇಲೆ ಕುಳಿತಿದ್ದೇವೆ!

Comments are closed.