ವಿಭಾಗಗಳು

ಸುದ್ದಿಪತ್ರ


 

ಮಂದಿರ ಭೇಟಿಗೆ ಸಿದ್ಧ ರಾಹುಲ ಪಡೆ!

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಮಂದಿರಗಳನ್ನು ಪ್ರವೇಶಿಸುವುದಕ್ಕಿಂತ ಹೆಚ್ಚು ಶ್ರದ್ಧೆಯಿಂದ ಮಸೀದಿಗಳಿಗೆ ಆತುಕೊಂಡಿದ್ದರು. ಧರ್ಮಸ್ಥಳಕ್ಕೆ ಹೋಗುವಾಗ ಅವರು ಮಾಂಸಹಾರ ಸ್ವೀಕರಿಸಿ ಹೋದದ್ದು ಸರಿಯೋ ತಪ್ಪೋ ಬೇರೆ. ಆದರೆ ಅದು ವಿವಾದವಾದಾಗ ಉತ್ತರ ಕೊಟ್ಟ ರೀತಿಯಂತೂ ನಿಸ್ಸಂಶಯವಾಗಿ ಉದ್ಧಟತನದ್ದೇ ಆಗಿತ್ತು. ಉಡುಪಿಯವರೆಗೂ ಹೋಗಿ ಮಂದಿರಕ್ಕೆ ಹೋಗದಿರುವ ವಿವಾದವಾದಾಗಲೂ ಅವರ ವರ್ತನೆ ಅಷ್ಟೇ ಧಿಮಾಕಿನಿಂದ ಕೂಡಿದ್ದಾಗಿತ್ತು. ಆಗೆಲ್ಲ ಮಾತನಾಡದ ರಾಹುಲ್ ಈಗ ಮಂದಿರ ದರ್ಶನಗಳಿಗೆ ಮನಸ್ಸು ಮಾಡುತ್ತಾನೆಂದರೆ ಸಮಾಜ ಒಪ್ಪುವುದು ಸುಲಭವೇನು?

ಅಂತೂ ರಾಹುಲ್ ಮಂದಿರ ಯಾತ್ರೆ ಕನರ್ಾಟಕದಲ್ಲೂ ಶುರುವಾಗಲಿದೆ. ನರೇಂದ್ರ ಮೋದಿಯವರ ನಾಲ್ಕು ವರ್ಷಗಳ ಆಳ್ವಿಕೆಯ ಪ್ರಭಾವವೆಂದರೆ ಮುಸ್ಲೀಂ ತುಷ್ಟೀಕರಣದ ರೋಗದಿಂದ ಬಳಲುತ್ತಿದ್ದ ಕಾಂಗ್ರೆಸ್ಸು ಹಂತಹಂತವಾಗಿ ಆ ರೋಗವನ್ನು ಕಳೆದುಕೊಳ್ಳುತ್ತಿದೆ. ಆದರೆ ಗುಜರಾತಿನಂತಲ್ಲ ಕನರ್ಾಟಕ ಎನ್ನುವುದು ರಾಹುಲ್ಗೆ ಮತ್ತು ಅವರ ಸುತ್ತಲಿನ ಗುಂಪುಗಳಿಗೆ ಅರ್ಥವಾದರೆ ಸಾಕು ಅಷ್ಟೇ.

1

ಮೊತ್ತ ಮೊದಲನೆಯದಾಗಿ ಗುಜರಾತಿನಲ್ಲಿ ಭಾಜಪಾದ ಆಳ್ವಿಕೆಯ ವಿರುದ್ಧದ ಅಲೆ ಇತ್ತು. ಭಾಜಪಾವನ್ನು ಪೂತರ್ಿ ಒಪ್ಪಿಕೊಳ್ಳಲಾಗದ ಹಾಗಂತ ಮುಸಲ್ಮಾನರ ಓಲೈಕೆಯಲ್ಲಿಯೇ ಕಾಲ ಕಳೆದಿರುವ ಕಾಂಗ್ರೆಸ್ಸನ್ನು ಒಪ್ಪಿಕೊಳ್ಳಲಾಗದಂತಹ ಗೊಂದಲಮಯ ವಾತಾವರಣದಲ್ಲಿದ್ದರು ಅಲ್ಲಿನ ಜನತೆ. ಆಗ ಸಹಜವಾಗಿಯೇ ರಾಹುಲ್ಗೆ ಐಡಿಯಾ ಕೊಟ್ಟ ಸುತ್ತಲ ಗುಂಪು ಅವರನ್ನು ಸಾಫ್ಟ್ ಹಿಂದುತ್ವದೆಡೆಗೆ ಎಳೆದು ತಂತು. ರಾಹುಲ್ ಮಂದಿರ ಯಾತ್ರೆ ಶುರುವಾಯ್ತು. ನಾಟಕವಾದರೂ ಸರಿ ಕಾಂಗ್ರೆಸ್ಸಿನ ಈ ಬದಲಾವಣೆ ಭಾಜಪಾದ ವಿರುದ್ಧ ಸಮರ ಸಾರಿದ್ದ ಅನೇಕರನ್ನು ಒಟ್ಟುಗೂಡಿಸಿತು. ಅವರ ಈ ನಡೆಯನ್ನು ಊಹಿಸಿಯೂ ಇರದಿದ್ದ ಮೋದಿ ಪಾಳಯಕ್ಕೆ ಒಮ್ಮೆ ಹಿನ್ನಡೆಯಾದದ್ದಂತೂ ಸಹಜ. ಈ ಹಿನ್ನಡೆಯಿಂದ ಸಾವರಿಸಿಕೊಂಡು ಮೇಲೆ ಬರಲಿಕ್ಕೆ ಹರ ಸಾಹಸವನ್ನೇ ಮಾಡಬೇಕಾಗಿ ಬಂತು. ಮತ್ತೆ ವರವಾಗಿ ಬಂದದ್ದು ಮಣಿಶಂಕರ್ ಐಯ್ಯರ್ನ ‘ನೀಚ್’ ಹೇಳಿಕೆಯೇ. ಮಂದಿರಕ್ಕೆ ಹೋಗಿ ಹಿಂದೂ ಸೆಂಟಿಮೆಂಟ್ನ್ನು ಜಾಗೃತಗೊಳಿಸಿ ಯಾವ ಮೇಲುಗೈಯನ್ನು ರಾಹುಲ್ ಸಾಧಿಸಿದ್ದರೋ ಅದನ್ನು ಗುಜರಾತಿ ಸೆಂಟಿಮೆಂಟಾಗಿ ಪರಿವರ್ತನೆಗೊಳಿಸಿ ಮೋದಿ ನೂರು ಹೆಜ್ಜೆ ಮುಂದೆ ಓಡಿದರು. ಹಳ್ಳಿಗರ ಮೇಲೆ ಅದರ ಪರಿಣಾಮ ಬಹಳ ಆಗಲಿಲ್ಲ. ಆದರೆ ಪಟ್ಟಣಿಗರು ಅಲುಗಾಡಿಬಿಟ್ಟರು. ಭಾವನೆಗಳ ಕೇಂದ್ರವನ್ನು ಕಲಕೋದು ಪ್ರತೀ ಚುನಾವಣೆಯ ಮಹತ್ವದ ಅಂಗ.

ಎರಡನೆಯದಾಗಿ, ಮೊದಲಬಾರಿಗೆ ಈ ತಂತ್ರಗಾರಿಕೆಯನ್ನು ಕಾಂಗ್ರೆಸ್ಸು ಬಳಸಿದ್ದರಿಂದ ಅದನ್ನು ಎದುರಿಸುವಲ್ಲಿ ಬಿಜೆಪಿ ತಡಬಡಾಯಿಸಿದ್ದು ಖಂಡಿತ ನಿಜ. ಆದರೆ ಈಗ ಈ ಉಪಾಯ ಬಿಜೇಪಿಗಷ್ಟೇ ಹಳೆಯದಲ್ಲ, ಕನ್ನಡಿಗರಿಗೂ ಸಾಕಷ್ಟು ಹಳೆಯದಾಗಿಬಿಟ್ಟಿದೆ. ಈ ಮಂದಿರದೆಡೆಗಿನ ಓಟವನ್ನು ಆತ ಇಲ್ಲಿ ಬಲುದೊಡ್ಡ ನಾಟಕವನ್ನಾಗಿ ನೋಡುತ್ತಿದ್ದಾನೆ. ಏಕೆಂದರೆ ಇಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಮಂದಿರಗಳನ್ನು ಪ್ರವೇಶಿಸುವುದಕ್ಕಿಂತ ಹೆಚ್ಚು ಶ್ರದ್ಧೆಯಿಂದ ಮಸೀದಿಗಳಿಗೆ ಆತುಕೊಂಡಿದ್ದರು. ಧರ್ಮಸ್ಥಳಕ್ಕೆ ಹೋಗುವಾಗ ಅವರು ಮಾಂಸಹಾರ ಸ್ವೀಕರಿಸಿ ಹೋದದ್ದು ಸರಿಯೋ ತಪ್ಪೋ ಬೇರೆ. ಆದರೆ ಅದು ವಿವಾದವಾದಾಗ ಉತ್ತರ ಕೊಟ್ಟ ರೀತಿಯಂತೂ ನಿಸ್ಸಂಶಯವಾಗಿ ಉದ್ಧಟತನದ್ದೇ ಆಗಿತ್ತು. ಉಡುಪಿಯವರೆಗೂ ಹೋಗಿ ಮಂದಿರಕ್ಕೆ ಹೋಗದಿರುವ ವಿವಾದವಾದಾಗಲೂ ಅವರ ವರ್ತನೆ ಅಷ್ಟೇ ಧಿಮಾಕಿನಿಂದ ಕೂಡಿದ್ದಾಗಿತ್ತು. ಆಗೆಲ್ಲ ಮಾತನಾಡದ ರಾಹುಲ್ ಈಗ ಮಂದಿರ ದರ್ಶನಗಳಿಗೆ ಮನಸ್ಸು ಮಾಡುತ್ತಾನೆಂದರೆ ಸಮಾಜ ಒಪ್ಪುವುದು ಸುಲಭವೇನು? ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸಲ್ಮಾನರ ಮತ ಸೆಳೆಯಲೆಂದೋ, ಸುತ್ತ ಹುತ್ತ ಕಟ್ಟಿಕೊಂಡಿರುವ ಕಾಮ್ರೇಡುಗಳ ಪ್ರಭಾವಕ್ಕೊಳಗಾಗಿಯೋ ಇಲ್ಲಿ ಹಿಂದುಗಳ ಹೃದಯಕ್ಕೆ ಇರಿದು ಗಾಯ ಮಾಡಿಯಾಗಿದೆ. ಇಂತಹ ಹೊತ್ತಲ್ಲಿ ಈಗ ರಾಹುಲ್ ಮಂದಿರ ಯಾತ್ರೆ ಆ ಹಿಂದುಗಳ ಗಾಯಕ್ಕೆ ಮುಲಾಮು ಹಚ್ಚಲು ಖಂಡಿತ ಯಶಸ್ವಿಯಾಗಲಾರದು.

2

ಮಂದಿರದ ಯಾತ್ರೆ ಇಲ್ಲಿ ವಿಫಲವಾಗಲು ಮೂರನೆಯ ದೊಡ್ಡ ಕಾರಣವಿದೆ ಅದೇನೆಂದರೆ ಕಾಂಗ್ರೆಸ್ಸಿನ ಈ ನಡೆಯನ್ನು ಈ ಬಾರಿ ಮುಂಚಿತವಾಗಿಯೇ ಊಹಿಸಿರುವ ಭಾಜಪಾ ಅದಕ್ಕೆ ಸ್ಪಷ್ಟ ಪ್ರತ್ಯುತ್ತರ ನೀಡಲು ಸಜ್ಜಾಗಿದೆ. ಹೀಗಾಗಿಯೇ ಅದು ಕಠೋರ ಹಿಂದುತ್ವವನ್ನು ತನ್ನ ಅಜೆಂಡಾದಿಂದ ಆಚೆಗಿರಿಸಿ ಅಭಿವೃದ್ಧಿಯ ಕಲ್ಪನೆಯತ್ತ ವಾಲುತ್ತಿದೆ. ಅಭಿವೃದ್ಧಿಯ ವಿಚಾರಕ್ಕೆ ಬಂದರೆ ಸಿದ್ದರಾಮಯ್ಯನವರ ಐದು ವರ್ಷಗಳ ಆಡಳಿತ ಭಾಗ್ಯಗಳ ಮೆರವಣಿಗೆ ಬಿಟ್ಟರೆ ಮತ್ತೇನು ಅಲ್ಲವೆನ್ನುವ ಅರಿವು ನಾಡಿನ ಜನತೆಗೆ ಚೆನ್ನಾಗಿರುವುದರಿಂದ ಅವರನ್ನು ಬಗ್ಗುಬಡಿಯಲು ಈ ಮಾರ್ಗವೇ ಹೆದ್ದಾರಿ ಎಂದರಿತಿದೆ ಕಮಲ ಪಡೆ. ವಿಕಾಸದ ಹಾದಿಯ ಈ ಪ್ರಶ್ನೆಗಳಿಗೆ ಉತ್ತರಿಸಲು ಕಾಂಗ್ರೆಸ್ಸಿಗೆ ಖಂಡಿತ ಅಸಾಧ್ಯ. ಏಕೆಂದರೆ ಭಾಜಪಾ ಮುಖ್ಯಮಂತ್ರಿ ಅಭ್ಯಥರ್ಿ ಎಂದು ಬಿಂಬಿಸಿರುವ ಯಡ್ಯುರಪ್ಪನವರ ಅವಧಿಯಲ್ಲಿ ಕನರ್ಾಟಕದಲ್ಲಿ ಮೂಲಸೌಕರ್ಯಗಳು ಸಾಕಷ್ಟು ಅಭಿವೃದ್ಧಿ ಕಂಡಿದ್ದವು. ರೈತಸ್ನೇಹೀ ಯೋಜನೆಗಳು ಚಾಲ್ತಿಗೆ ಬಂದಿದ್ದವು. ಮಠಮಾನ್ಯಗಳಂತೂ ಆ ಅವಧಿಯಲ್ಲಿಯೇ ಸಾಕಷ್ಟು ಸಕರ್ಾರೀ ಗೌರವ ಪಡೆದುಕೊಂಡಿದ್ದು. ಇವೆಲ್ಲವನ್ನೂ ಮುಂದಿಟ್ಟುಕೊಂಡು ಹೊರಟರೆ ಮಂದಿರ ಯಾತ್ರೆ ನಿಸ್ಸಂಶಯವಾಗಿ ವಿಫಲವಾಗುವುದೇ ಸರಿ.

ಎಲ್ಲ ಲೆಕ್ಕಾಚಾರವನ್ನೂ ಪಕ್ಕಕ್ಕಿಡಿ. ಈ ಎಲ್ಲ ಮಂದಿರ ಯಾತ್ರೆ ಯಶಸ್ವಿಯಾದರೂ, ಸೋತರೂ ಅನಾಥರಾಗೋದು ಮಾತ್ರ ಮುಸಲ್ಮಾನರು. ಪಾಪ ನಾಲ್ಕೂವರೆ ವರ್ಷಗಳಿಂದ ಸಿದ್ದರಾಮಯ್ಯನವರು ಅವರ ಮತಗಳಿಕೆಗಾಗಿ ಅದೆಷ್ಟು ಓಲೈಸಿದ್ದಾರೆಂದರೆ, ಸ್ಮಗ್ಲಿಂಗ್ ಮಾಡುತ್ತಿದ್ದ ಕಬೀರನಿಗೆ ಹತ್ತು ಲಕ್ಷ ಕೊಟ್ಟು; ದುಷ್ಟ ಸಂಘಟನೆ ಪಿಎಫ್ಐ ಮೇಲಿನ ಎಲ್ಲ ಕೇಸುಗಳನ್ನು ಮರಳಿ ಪಡೆದು, ಹಿಂದುಗಳ ಹತ್ಯೆಯಾದಾಗ ಅದನ್ನು ‘ಸಹಜ ಸಾವು’ ಎಂದೆಲ್ಲ ಕರೆದು ಭೂಮಿಕೆ ಸಿದ್ಧ ಪಡಿಸಿಕೊಂಡಿದ್ದರು. ಮುಸಲ್ಮಾನರಿಗೂ ಕಾಂಗ್ರೆಸ್ಸು ತಮ್ಮದೆನ್ನುವ ಭಾವನೆ ಬಲಿತಿತ್ತು. ಈಗ ನೋಡಿ. ಕಾಂಗ್ರೆಸ್ಸಿನ ಹೈಕಮಾಂಡೇ ಮೃದುವೋ ಉಗ್ರವೋ ಹಿಂದುತ್ವದತ್ತ ಹೊರಳಿರುವುದು ಅವರಿಗೆ ಗಾಬರಿ ಹುಟ್ಟಿಸಿದೆ. ಗುಜರಾತಿನಲ್ಲೂ ಹೀಗೆಯೇ ಆಗಿತ್ತು. ಕಾಂಗ್ರೆಸ್ಸಿನ ಮಂದಿರದ ಬೂಟಾಟಿಕೆ ಯಾತ್ರೆಗಳಿಂದ ಹಿಂದುಗಳಲ್ಲಿ ಕೆಲವರು ಸಮಾಧಾನಗೊಂಡರೇನೋ ಆದರೆ ಮುಸಲ್ಮಾನರು ಗೊಂದಲಕ್ಕೀಡಾದರು. ಗೋಧ್ರಾದಲ್ಲಿ ಆಡಳಿತ ವಿರೋಧಿ ಅಲೆಯ ನಡುವೆಯೂ ಭಾಜಪಾ ಗೆದ್ದಿರುವುದು ಇದರ ಸೂಚಕವಷ್ಟೇ. ಅದು ಸಹಜವೂ ಹೌದು. ಹಬ್ಬಗಳಂದು ಟೋಪಿ ಹಾಕಿಕೊಂಡು ಬಿರ್ಯಾನಿ ತಿಂದು ಮುಸಲ್ಮಾನರನ್ನು ಓಲೈಸಿ ಅವರನ್ನು ಸದಾ ದಾರಿದ್ರ್ಯದಲ್ಲಿರಿಸಿ ಸಮಯ ಬಂದಾಗ ಭಡಕಾಯಿಸಿ ವೋಟು ಪಡೆಯುವ ಮಂದಿಗಿಂತ; ಟ್ರಿಪಲ್ ತಲಾಖ್ನ್ನು ನಿಷೇಧಿಸಿ ಹೆಣ್ಣುಮಕ್ಕಳನ್ನು ಬೆಳಕಿಗೆ ತಂದ, ಹಜ್ ಅನುದಾನ ನಿಲ್ಲಿಸಿ ಆ ಹಣವನ್ನು ಮುಸ್ಲೀಂ ಹೆಣ್ಣುಮಕ್ಕಳ ಶಿಕ್ಷಣಕ್ಕೆಂದು ಮೀಸಲಿಟ್ಟ ಮೋದಿಯನ್ನು ನೂರುಪಾಲು ನಂಬಬಹುದು.

4

ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಇಡಿಯ ಭಾರತವನ್ನು ಏಕಛತ್ರದಡಿ ತರುವ ಪ್ರಯತ್ನ. ವಿಕಾಸದ ಈ ಓಟದಲ್ಲಿ ಯಾವ ಪಕ್ಷಕ್ಕೂ ಸೇರದೆ ಮಧ್ಯೆ ನಿಂತಿರುವವರಿಗೆಲ್ಲ ಇಷ್ಟವಾಗೋದು ಈ ವಿಚಾರಧಾರೆಯೇ. ಹೀಗಾಗಿ ರಾಹುಲ್ ಎಸೆಯುವ ಸಾಫ್ಟ್ ಹಿಂದುತ್ವದ ದಾಳ ಕನರ್ಾಟಕದ ಮಟ್ಟಿಗೆ ಅವರಿಗೇ ಮುಳುವಾಗೋದು ನಿಶ್ಚಿತ. ಆದರೆ ಇದರ ಲಾಭವನ್ನು ಬಿಜೇಪಿ ಪಡೆಯಲಿದೆಯೋ ಅಥವಾ ಜನತಾ ದಳ ಪಡೆದುಕೊಳ್ಳುವುದೋ ಎಂಬುದಷ್ಟೇ ಮುಂದಿರುವ ದೊಡ್ಡ ಪ್ರಶ್ನೆ. ಮುಸಲ್ಮಾನ ಹೆಣ್ಣುಮಕ್ಕಳ ಪರವಾಗಿ ಮೋದಿಯವರು ಕೈಗೊಂಡ ದಿಟ್ಟ ನಿರ್ಣಯಗಳ ನಂತರ ಆ ಮನೆಗಳು ಖಂಡಿತ ಒಡೆದಿವೆ. ಗಂಡ ಮೋದಿಯ ಪರವಾಗಿಲ್ಲದಿರಬಹುದು ಆದರೆ ಹೆಂಡತಿ ಖಂಡಿತ ಮೋದಿಯ ಜಪ ಮಾಡುತ್ತಿರುತ್ತಾಳೆ. ಭಾಜಪಾ ಈ ಹೆಣ್ಣುಮಕ್ಕಳ ಮನಸ್ಸುಗಳನ್ನು ಸೂಕ್ಷ್ಮವಾಗಿ ತಟ್ಟಲು ಸಾಧ್ಯವಾದರೆ ಈ ಬಾರಿ ದೊಡ್ಡ ಬದಲಾವಣೆ ಖಂಡಿತ ಸಾಧ್ಯ. ಅದೇ ವೇಳೆ ಕಾಂಗ್ರೆಸ್ಸಿನಿಂದ ಭ್ರಮ ನಿರಸನಗೊಂಡ ಮುಸಲ್ಮಾನರೇನಾದರೂ ದಳದೆಡೆಗೆ ವಾಲಿಬಿಟ್ಟರೆ ಕಾಂಗ್ರೆಸ್ಸು ಮುಕ್ತ ಕನರ್ಾಟಕ ಶತಃಸಿದ್ಧ!

ಒಟ್ಟಾರೆ ವ್ಯೂಹಗಳ ರಚನೆಯ ಕಸರತ್ತು ಈಗ ಎಲ್ಲಾ ಪಾಳಯದಲ್ಲೂ. ಯಾರು ಮೊದಲ ಅಚ್ಚರಿಯ ದಾಳ ಎಸೆಯುವರೋ ಅವರು ಮುಂದಡಿ ಇಡುವುದು ನಿಶ್ಚಿತ. ಭಾಜಪಾದ ನಾಯಕರೆಲ್ಲರೂ ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ಶೈಲಿ ನೋಡಿದರೆ ಕಾಂಗ್ರೆಸ್ಸಿಗಿಂತ ಮುಂಚಿತವಾಗಿ ಅವರು ಲಯ ಕಂಡುಕೊಂಡಂತಿದೆ. ಜೊತೆಗೆ ದಿನಕಳೆದಂತೆ ಯಡ್ಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯಥರ್ಿಯೆಂದು ಸ್ಪಷ್ಟ ಮನಸ್ಸಿನಿಂದ ಅವರು ಒಪ್ಪಿಕೊಳ್ಳುತ್ತಿರುವದು ಎದ್ದು ಕಾಣುತ್ತಿದೆ. ಇದು ಕಾಂಗ್ರೆಸ್ಸಿಗಿಂತ ಭಾಜಪಾವನ್ನು ಚುನಾವಣೆಯ ತಯಾರಿಯಲ್ಲಿ ಒಂದು ರಹದಾರಿ ಮುಂದೆ ನಿಲ್ಲಿಸಿದೆ. ಅತ್ತ ಸಿದ್ದರಾಮಯ್ಯನವರು ಕಾಂಗ್ರೆಸ್ಸಿನಲ್ಲಿ ಇರುವ ನಾಯಕರನ್ನೆಲ್ಲ ತುಳಿದು ದಿನಗಳೆದಂತೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಪರಮೇಶ್ವರ್ ಎದುರಿಗೆಷ್ಟೇ ಸಮಾಧಾನದ ಮಾತನಾಡಿದರೂ ಬೆಂಕಿಯ ಚೆಂಡು ಒಳಗೆ ಉರಿಯುತ್ತಲೇ ಇದೆ. ದಿನೇಶ್ ಗುಂಡುರಾಯರ ಬಳಿ ನೀವು ಕುಳಿತು ‘ನೀವೇ ಮುಖ್ಯಮಂತ್ರಿಯಾದರೆ ಚೆನ್ನ’ ಎಂದು ಹೇಳಿ ನೋಡಿ ಅವರೂ ಒಮ್ಮೆ ರೋಮಾಂಚಿತರಾಗಿಬಿಡುತ್ತಾರೆ. ಅಷ್ಟರಮಟ್ಟಿಗೆ ಒಳಗೆ ಬೆಂಕಿ ಹೊಗೆಯಾಡುತ್ತಿದೆ. ಪ್ರತೀ ಬಾರಿ ಸಿದ್ದರಾಮಯ್ಯನವರು ಏಕಪಕ್ಷೀಯ ನಿರ್ಣಯ ಕೈಗೊಂಡಾಗಲೆಲ್ಲ ಈ ಅತೃಪ್ತ ಆತ್ಮಗಳು ಭುಸುಗುಡುತ್ತವೆ. ಒಂದು ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿ, ಕಾಂಗ್ರೆಸ್ಸು ಹೊರಗೆ ಸುಣ್ಣ ಬಣ್ಣ ಬಳಸಿಕೊಂಡು, ಒಳಗಿನಿಂದ ಒಡೆದ ಮನೆಯಾಗಿದೆ; ಬಿಜೇಪಿ ಹೊರಗೆ ಒಡೆದಂತೆ ಕಂಡರೂ ಒಳಗಿನಿಂದ ಬಲಾಢ್ಯಗೊಳ್ಳುತ್ತಿದೆ. ಸಿದ್ದರಾಮಯ್ಯನವರು ನಡೆಸಿದ ಯಾತ್ರೆ ವೈಭವದಿಂದ ಕೂಡಿದ್ದರೂ ಏಕತೆಯ ಕೊರತೆಯಿತ್ತು; ಯಡ್ಯೂರಪ್ಪನವರ ಪರಿವರ್ತನಾ ಯಾತ್ರೆ ನಾಯಕರು-ಕಾರ್ಯಕರ್ತರನ್ನು ಏಕಸೂತ್ರದಡಿ ಬೆಸೆಯಲು ಯಶಸ್ವಿಯಾಯ್ತು.
ಇನ್ನೂ ಕದನದ ಕಾವು ಶುರುವಾಗಿದೆಯಷ್ಟೇ! ಮುಂದೆ ಮುಂದೆ ನೋಡಿ ಬೆಂಕಿ ಹೇಗೆ ಹೊತ್ತಿಕೊಳ್ಳುತ್ತೆ ಅಂತ!!

Comments are closed.