ವಿಭಾಗಗಳು

ಸುದ್ದಿಪತ್ರ


 

ವಿವೇಕಾನಂದರ ಕನಸಿನ ತರುಣರು ಎಲ್ಲಿದ್ದಾರೆ!?

ರಾಜ್ಯ ಸರ್ಕಾರಕ್ಕೆ ರೋಗ ಬಂದಿದೆ ಅಂತ ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಘೋಷಿಸಿದ್ದರೆ ನಿಜ. ಅದರಲ್ಲಿ ಎರಡು ಮಾತಿಲ್ಲ. ಆದರೆ ಕೇಂದ್ರ ಸರ್ಕಾರ ಸತ್ತೇಹೋಗಿದೆಯಲ್ಲ!?

SwamiVivekanandaನೂರಾ ಹದಿನಾರು ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ತರುಣರೆದುರು ಗಂಭೀರವಾಗಿ ಹೇಳಿದ್ದರು. ’ನನಗೆ ಫುಟ್‌ಬಾಲ್ ಆಟ ಬಲು ಇಷ್ಟ. ನೀವು ಸ್ವರ್ಗಕ್ಕೆ ಹತ್ತಿರವಾಗೋದು ಭಗವದ್ಗೀತೆ ಓದುವುದರಿಂದ ಅಲ್ಲ; ಫುಟ್‌ಬಾಲ್ ಆಡುವುದರಿಂದ’. ಹೀಗೇಕೆ ಎಂದು ತಲೆ ಕೆರಕೊಂಡು ಪ್ರಶ್ನಿಸಿದರೆ ಅವರು ಹೇಳಿದ್ದೇನು ಗೊತ್ತೆ? ’for every kick you have a counter cick there’ (ಅಲ್ಲಿ ಪ್ರತೀ ಒದೆತಕ್ಕೂ ಪ್ರತಿಒದೆತವಿರುತ್ತದೆ) ಅಂತ. ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆಯವರನ್ನು ಆ ಸ್ಥಾನದಿಂದ ಕೆಳಗಿಳಿಸಿ ಫುಟ್‌ಬಾಲ್ ಆಡಲು ಕಳಿಸುವ ತುರ್ತು ಅಗತ್ಯವಿದೆ. ಕೇಂದ್ರ ಸರ್ಕಾರ ಅಕ್ಷರಶಃ ನಿರ್ವೀರ್ಯತೆಯನ್ನು ಪ್ರದರ್ಶಿಸುತ್ತಿದೆ. ಸೈನಿಕರಿಬ್ಬರ ತಲೆ ಕಡಿದ ಪಾಕಿಸ್ತಾನಕ್ಕೆ, ಯೋಧರನ್ನು ಬಾಂಬಿಟ್ಟು ಉಡಾಯಿಸಿದ ನಕ್ಸಲರಿಗೆ ಚೆನ್ನಾಗಿ ಗೊತ್ತು; ’ಮನಮೋಹನ್ ಸರ್ಕಾರ ಇರುವವರೆಗೆ ತಾವಾಡಿದ್ದೇ ಆಟ’.
ಮೃತರ ಕುಟುಂಬಕ್ಕೆ ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಪರಿಹಾರ ಘೋಷಿಸಿ ತಣ್ಣಗಾಗಿದ್ದಾರೆ. ಇದೇ ಮುಖ್ಯಮಂತ್ರಿಗಳು ಈ ಹಿಂದೆ ಬಂಧಿತ ಉಗ್ರರನ್ನು ಜೈಲಿನಿಂದ ಬಿಡುಗಡೆ ಮಾಡಹೊರಟು ಸುದ್ದಿ ಮಾಡಿದ್ದರು. ಅದ್ಯಾವ ಮುಖ ಹೊತ್ತು ಇವರೆಲ್ಲ ಮೃತ ಸೈನಿಕರ ತಂದೆ ತಾಯಿಯರೆದುರು ನಿಲ್ಲುತ್ತಾರೆ ಎನ್ನುವುದೇ ಅಚ್ಚರಿ. ಐದು ವರ್ಷದ ಅಧಿಕಾರಕ್ಕಾಗಿ ಇಷ್ಟೆಲ್ಲ ಕಸರತ್ತು ನಡೆಸುವ ಇವರು ಹೆತ್ತ ತಾಯಿಗೇ ಚೂರಿ ಇರಿಯುವ ಪಾಖಂಡಿ ಮಕ್ಕಳೇ ಸರಿ.
ಇಷ್ಟಕ್ಕೂ ಸೈನಿಕರ ಬದುಕು ಬವಣೆಗಳ ಅರಿವು ಇವರಿಗಿದೆಯಾ? ಜಾರ್ಜ್ ಫರ್ನಾಂಡಿಸ್‌ರ ಅನಂತರ ಯಾವನಾದರೂ ರಕ್ಷಣಾ ಸಚಿವ ಸೈನಿಕರೊಂದಿಗೆ ಹರಟುತ್ತ ಕಾಫಿ ಕುಡಿದಿದ್ದಾನಾ? ಒಮ್ಮೆಯಾದರೂ ಅವನನ್ನು ತಬ್ಬಿಕೊಂಡು ಆತ್ಮಸ್ಥೈರ್ಯ ಹೆಚ್ಚಿಸಿದ್ದಾನಾ? ಅವೆಲ್ಲ ಬಿಡಿ. ಗಡಿ ಭಾಗಗಳನ್ನೆ ನೋಡದ ರಕ್ಷಣಾ ಸಚಿವರೂ ಈ ದೇಶದಲ್ಲಿ ಆಗಿಹೋಗಿದ್ದಾರೆ. ಅವರಿಗೆಲ್ಲ ’ಸೈನಿಕ’ನೆಂದರೆ ಸಂಬಳಕ್ಕಾಗಿ ದುಡಿಯುವ ಕೂಲಿ ಕಾರ್ಮಿಕನಷ್ಟೆ ಹೊರತು ಬೇರೇನೂ ಅಲ್ಲ. ಕ್ಷಮಿಸಿ. ಸೈನಿಕರ ಜಾಗದಲ್ಲಿ ಈ ಮಂತ್ರಿಗಳ ಮಕ್ಕಳ ತಲೆ ಕಡಿದುಕೊಂಡು ಹೋಗಿದ್ದರೆ ಪಾಕಿಸ್ತಾನದ ಕುರಿತಂತೆ ಹೀಗೇ ಮಾತಾಡುತ್ತಿದ್ದರಾ? ಅಲ್ಲಿಂದ ಬರುವವರಿಗೆ ವೀಸಾ ಕೊಟ್ಟು ಕೆಂಪು ಹಾಸಿನ ಸ್ವಾಗತ ಕೋರುತ್ತಿದ್ದರಾ?
ಹಾಗೆ ಕೇಳಲು ಕಾರಣವಿದೆ. ೧೯೮೯ರಲ್ಲಿ ಮುಫ್ತಿ ಮುಹಮ್ಮದ್ ಸಯೀದ್ ಈ ದೇಶದ ಮೊದಲ ಮುಸಲ್ಮಾನ ಗೃಹ ಮಂತ್ರಿಯಾದ. ಅದಾದ ಐದೇ ದಿನಗಳಲ್ಲಿ ಜಮ್ಮು ಕಾಶ್ಮೀರ್ ಲಿಬರೇಷನ್ ಫ್ರಂಟ್ ಅವನ ಮಗಳು ೨೩ರ ಹರೆಯದ ರುಬಿಯಾ ಸಯೀದ್‌ಳನ್ನು ಅಪಹರಿಸಿತು. ಇಡಿಯ ಸಂಸತ್ತು ತತ್ತರಿಸಿಹೋಯ್ತು. ವಿ.ಪಿ.ಸಿಂಗರ ಕಣ್ಣೀರ ಧಾರೆಗಂತೂ ಕೊನೆಯಿಲ್ಲದಾಯ್ತು. ಮಗಳನ್ನು ಕಳಕೊಂಡ ಸಹೋದ್ಯೋಗಿಯನ್ನು ಸಂತೈಸುವುದಕ್ಕೆ ಪದಗಳೇ ಸಾಕಾಗಲಿಲ್ಲ. ಆಗ ಮಂತ್ರಿಗಳಾಗಿದ್ದ ಐ.ಕೆ.ಗುಜ್ರಾಲ್, ಆರಿಫ್ ಮುಹಮ್ಮದ್ ಖಾನ್ ಶ್ರೀನಗರಕ್ಕೆ ಧಾವಿಸಿ ಸಂಧಾನಕ್ಕೆ ಮುಂದಾದರು. ರುಬಿಯಾಳ ಬಿಡುಗಡೆಗೆ ಪ್ರತಿಯಾಗಿ ಐದು ಉಗ್ರರನ್ನು ಬಿಟ್ಟುಕೊಡಲಾಯಿತು. ಅವತ್ತು ರಜೌರಿಯ ಜೈಲಿನ ಹೊರಗೆ ಸಾವುರಾರು ಜನ ಜಮಾಯಿಸಿದ್ದರು. ವಿಜಯೋತ್ಸವ ಆಚರಿಸಿದರು. ಅದರ ನಡುವೆಯೇ ಐದೂ ಉಗ್ರರು ಮರೆಯಾಗಿಬಿಟ್ಟರು. ಆಮೇಲೆ ಗೊತ್ತಾಯ್ತು, ಇವೆಲ್ಲ ಪೂರ್ವ ನಿಯೋಜಿತ ಕೃತ್ಯ. ಇದರಲ್ಲಿ ಮುಫ್ತಿ ಮುಹಮ್ಮದರ ಮತ್ತೊಬ್ಬ ಮಗಳು ಮೆಹಬೂಬಾ ಮುಫ್ತಿಯದೇ ಕೈವಾಡವಿತ್ತು ಅಂತ. ಆಕೆ ಗೆಲುವಿನ ನಗೆ ಬೀರಿ ಪ್ರತ್ಯೇಕ ಕಾಶ್ಮೀರದ ಧ್ವಜ ಹಾರಿಸಿ ಬೀಗಿದ್ದಳು.
ಈಗ ಪ್ರಶ್ನೆ ಇರೋದು ಮಂತ್ರಿಗಳ ಮಕ್ಕಳೆಂದರೆ ಅಷ್ಟೊಂದು ಬೆಲೆ ಕೊಡಬೇಕಾ? ಅಥವಾ ಸೈನಿಕರ ಜೀವವನ್ನೆ ತುಚ್ಛವಾಗಿ ಕಾಣಬೇಕಾ? ಸತ್ತ ಸೈನಿಕನಿಗೂ ತಂದೆ ತಾಯಿ ಇದ್ದಾರೆ. ಅವರದ್ದೂ ದುಃಖ ಮಡುಗಟ್ಟಿದೆ ಎನ್ನುವುದನ್ನು ಮರೆಯಬಾರದಲ್ಲವೆ?
ಇವೆಲ್ಲ ಅರ್ಥವಾಗಬೇಕೆಂದರೆ ಉದ್ವಿಗ್ನ ಸ್ಥಿತಿ ಇರುವ ಗಡಿ ಪ್ರದೇಶಗಳಿಗೆ ಹೋಗಿ ಸೈನಿಕರ ಡೇರೆಯಲ್ಲಿ ಒಂದೆರಡು ಗಂಟೆ ಕಳೆದು ಬರಬೇಕು. ಅವರ ನೋವು – ದುಃಖ – ಸಂಕಟಗಳನ್ನು ಹಂಚಿಕೊಳ್ಳಬೇಕು. ಅಲ್ಪದರಲ್ಲಿಯೇ ತೃಪ್ತಿ ಹೊಂದಿ ಆನಂದಿಸುತ್ತಾರಲ್ಲ, ಅದನ್ನು ಅನುಭವಿಸಬೇಕು. ನಾವು ಬಾಂಗ್ಲಾದ ಗಡಿಗೆ ಭೇಟಿ ಕೊಟ್ಟಿದ್ದಾಗ ಅಲ್ಲಿ ಆಂಧ್ರ ಮೂಲದ ಸೈನಿಕನೊಬ್ಬನಿದ್ದ. ಅವನು ನಮ್ಮನ್ನು ಕಂಡೊಡನೆ ಖುಷಿಯಿಂದ ಉಬ್ಬಿಹೋಗಿದ್ದ. ಕೈಯಾರೆ ಟೀ ಮಾಡಿ ತಂದು ಕೊಟ್ಟ. ’ಊರಿಗೆ ಹೋಗಿದ್ಯಾ?’ ಎಂದು ಕೇಳಿದ್ದಕ್ಕೆ ವ್ಯಂಗ್ಯದ ನಗೆ ನಕ್ಕು ಸುಮ್ಮನಾದ. ’ಮಗಳು ಹುಟ್ಟಿದಾಗ ಹೋಗಿದ್ದೆ. ನಾಡಿದ್ದು ಅವಳ ಹುಟ್ಟುಹಬ್ಬ. ರಜೆ ಸಿಗೋದು ಅನುಮಾನ’ ಎಂದ. ಪೂರಾ ಒಂದು ವರ್ಷ ಹೆಂಡತಿ – ಮಕ್ಕಳ ಮುಖ ಅವನು ನೋಡಿಯೇ ಇಲ್ಲ. ತಂದೆ ತಾಯಿಯರನ್ನು ಹತ್ತಿರದಿಂದ ಸಂತೈಸಿಲ್ಲ. ಒಟ್ಟಾರೆ ಅವನು ಅಷ್ಟೂ ದಿನ ನೋಡಿದ್ದು ಗಡಿ ಬೇಲಿಯನ್ನು ಮಾತ್ರ. ಅತ್ತಲಿಂದ ಧಾವಿಸಿ ಬಂದು ಆಕ್ರಮಿಸುವ ಧೂರ್ತರನ್ನು ಮಾತ್ರ…..
ಒಂದು ನಿಮಿಷ ಯೋಚಿಸಿ. ವರ್ಷಗಟ್ಟಲೆ ಮುಖವನ್ನೆ ನೋಡಿರದ ಮಗನ ತಲೆಯನ್ನು ಯಾರೋ ಕಡಿದುಬಿಟ್ಟಿದ್ದಾರೆಂಬ ಸುದ್ದಿಯನ್ನು ವೃದ್ಧ ತಂದೆ ತಾಯಿಯರು ಅದು ಹೇಗೆ ಸ್ವೀಕರಿಸಿಯಾರು? ಅವನ ಹೆಂಡತಿ ಮಕ್ಕಳ ಜವಾಬ್ದಾರಿ ಯಾರದ್ದು? ಹೋಗಲಿ. ಆಕೆ ಹುತಾತ್ಮನ ಹೆಂಡತಿ ಅಂತಾದರೂ ಕರೆಸಿಕೊಳ್ತಾಳಾ? ಊಹೂಂ. ಅವಳ ಗಂಡ ಯುದ್ಧದಲ್ಲಿ ಸತ್ತವನಲ್ಲ. ಕೇಂದ್ರ ಸರ್ಕಾರ ಶಾಂತಿಯ ಮತುಕತೆ ನಡೆಸುತ್ತಿರುವಾಗ ಸತ್ತವನು. ಹೀಗಾಗಿ ಅದು ಶೌರ್ಯವಲ್ಲ ಅಂತ ಸರ್ಕಾರ ಷರಾ ಬರೆದುಬಿಡುತ್ತದೆ. ಹೀಗಾಗಿ ಅವನ ಸಾವಿಗೆ ಸೇನಾ ಮೆಡಲ್‌ಗಳಾಗಲೀ ಮಹಾವೀರ ಚಕ್ರ, ಪರಮ ವೀರ ಚಕ್ರಗಳಾಗಲೀ ಯಾವುದೂ ಇಲ್ಲ. ಎಲ್ಲವೂ ಗೃಹ ಸಚಿವರು, ರಕ್ಷಣಾ ಸಚಿವರು, ವಿದೇಶಾಂಗ ಸಚಿವರ ಕೊರಳಿಗೇ! ಏಕೆಂದರೆ ಇಂತಹ ಸಂದರ್ಭದಲ್ಲೂ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಿಸಬಲ್ಲರಲ್ಲ, ಹೆಚ್ಚು ಹೆಚ್ಚು ಜನರಿಗೆ ವೀಸಾ ಕೊಟ್ಟು ಕರೆಸಿಕೊಳ್ಳಬಲ್ಲರಲ್ಲ!?
ರಾಜ್ಯ ಸರ್ಕಾರಕ್ಕೆ ರೋಗ ಬಂದಿದೆ ಅಂತ ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಘೋಷಿಸಿದ್ದರೆ ನಿಜ. ಅದರಲ್ಲಿ ಎರಡು ಮಾತಿಲ್ಲ. ಆದರೆ ಕೇಂದ್ರ ಸರ್ಕಾರ ಸತ್ತೇಹೋಗಿದೆಯಲ್ಲ!?
ನಕ್ಸಲರು ರಾಂಚಿಯಲ್ಲಿ ನೆಲಬಾಂಬಿನ ಮೇಲೆ ಕೈಕಾಲು ಕಡಿದು ಯೋಧನನ್ನು ಮಲಗಿಸಿಹೋದರು. ನರಳುತ್ತಿದ್ದ ಆತ ಕೂಗಲೂ ಆಗದೆ ಸೋತು ಹೋಗಿದ್ದ. ಆತನನ್ನು ಉಳಿಸಲೆಂದು ಹೋದವರು ಅವನೊಡನೆಯೇ ಭಸ್ಮೀಭೂತರಾದರು. ಇವೆಲ್ಲ ಕೇಳಿಯೂ ಸುಮ್ಮನಿರಬೇಕೆನ್ನಿಸುತ್ತ? ಸಾಯುವ ಮುನ್ನ ಆ ಸೈನಿಕ ಅನುಭವಿಸಿದ ನೋವಿನ ಅನುಭವ ಅಂದಾಜು ಮಾಡಿಕೊಳ್ಳಬಲ್ಲಿರಾ? ಕೈ ಕಾಲು ಕಡಿಯುವಾಗಿನ ಆತನ ಆರ್ತನಾದ ನಿಮಗೆ ಕೇಳುತ್ತೇನು? ಎಲ್ಲಿ ಅಡಗಿದ್ದಾರೆ ಮಾನವ ಹಕ್ಕುಗಳ ಉದ್ಘೋಷಕರು? ಅದೆಲ್ಲಿ ಕಾಣೆಯಾಗಿದ್ದರೆ ಬುದ್ಧಿ ಜೀವಿಗಳು? ಯುನಿವರ್ಸಿಟಿಗಳ ಲೈಬ್ರರಿಗಳಲ್ಲಿ ಲೆನಿನ್‌ನ, ಮಾವೋ – ಮಾರ್ಕ್ಸ್‌ನ ಪುಸ್ತಕಗಳನ್ನಿಟ್ಟು ನಕ್ಸಲ್‌ವಾದಕ್ಕೆ ಪುಷ್ಟಿ ಕೊಡುವ ಆ ಪ್ರಾಧ್ಯಾಪಕರೆಲ್ಲ ಈ ಹಿಂಸೆಯ ಹಿಂದೆ ನಿಂತಿರುವ ಪೆಡಂಭೂತಗಳೇ.
ಪ್ರತೀಕಾರವಿದೆ. ಖಂಡಿತ ಇದಕ್ಕೆಲ್ಲ ಪ್ರತೀಕಾರವಿದೆ. ಅಮಾಯಕರ ಬಲಿ ತೆಗೆದುಕೊಂಡವರಷ್ಟೆ ಅಲ್ಲ, ಅವರ ಹಿಂದೆ ನಿಂತವರೂ ಆ ಪ್ರತೀಕಾರದ ಬೆಂಕಿಯಲ್ಲಿ ಬೇಯಲಿದ್ದಾರೆ.
ಸ್ವಾಮಿ ವಿವೇಕಾನಂದರು ಕರೆ ಕೊಟ್ಟಿದ್ದರು. ’ಭಾರತ ಮಾತೆಗೆ ಕನಿಷ್ಠ ಪಕ್ಷ ಒಂದು ಸವಿರ ಯುವಕರದ್ದಾದರೂ ಬಲಿ ಬೇಕು. ಬಲಿ ಪುರುಷ ಸಿಂಹರದ್ದು, ಮೂರ್ಖರದ್ದಲ್ಲ. ಪ್ರಾಣ ಹೋಗುವವರೆಗೆ ಹಿಂಜರಿಯದೆ ಹೋರಾಡುವ ನಿಸ್ವಾರ್ಥಿಗಳಾದ ಯುವಕರು ಬೇಕು..’ ಇಂತಹ ಯುವಕರು ಊರಿಂದೂರಿಗೆ ಹೋಗಿ ಮಾಯಾ ದೀಪವನ್ನೆ ಹಿಡಿದು ಈ ನಾಡಿನ ಪರಂಪರೆಯನ್ನು, ಹಿರಿಮೆ ಗರಿಮೆಗಳನ್ನು ಪ್ರತಿಯೊಬ್ಬರಿಗೂ ಮುಟ್ಟಿಸಬೇಕೆಂದು ಬಯಸುತ್ತಿದ್ದರು ಅವರು. ’ಭಯವೇ ಮೃತ್ಯು, ಭಯದ ಆಚೆಯ ದಡಕ್ಕೆ ಹೋಗಬೇಕು. ಕೇವಲ ರಕ್ತ ಮಾಂಸ ಮೂಳೆಗಳ ಮುದ್ದೆ ಹೊತ್ತುಕೊಂಡು ಏನು ಪ್ರಯೋಜನ? ನಡೆ.. ಹೊರಡು.. ನಿನ್ನ ಮೋಕ್ಷಕ್ಕೆ, ಜಗತ್ತಿನ ಹಿತಕ್ಕೆ ಹೊರಡು..’ ಎಂದಿದ್ದರು ಸ್ವಾಮೀಜಿ.
ಈಗ ಸಮಯ ಬಂದಿದೆ. ಇನ್ನು ಕಣ್ಮುಚ್ಚಿ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ಕೆಲವು ಸಾವಿರ ಜನರ ಸ್ವಾರ್ಥಕ್ಕಾಗಿ ಸಾವಿರಾರು ವರ್ಷಗಳಷ್ಟು ಪ್ರಾಚೀನ ಇತಿಹಾಸ ಹೊಂದಿರುವ ಭಾರತ ಮಲಿನಗೊಳ್ಳುವುದರಲ್ಲಿ ಅರ್ಥವೇ ಇಲ್ಲ. ನೆಹರು – ಜಿನ್ನಾರ ಸ್ವಾರ್ಥಕ್ಕೆ ದೇಶ ತುಂಡಾಯ್ತು. ಈಗ ಮತ್ತೆ ದೇಶ ಅಂತಹ ಸ್ಥಿತಿಗೆ ತಳ್ಳಲ್ಪಡುತ್ತಿದೆ. ಪುಂಡರೆದುರು ಹೇಡಿಯಾಗಿ ತಲೆ ತಗ್ಗಿಸಿ ನಿಲ್ಲುತ್ತಿದೆ. ಎದೆಯೊಳಗೆ ಹೊತ್ತಿಕೊಂಡ ಬೆಂಕಿ ಜೀವವನ್ನೆ ಸುಡುತ್ತಿದೆ. ಇನ್ನು ಅಳುತ್ತ ಕೂತರೆ ಪ್ರಯೋಜನವಿಲ್ಲ. ನಮ್ಮ ನಮ್ಮ ಸ್ವಾರ್ಥವನ್ನು ಬದಿಗಿಟ್ಟು ಮಹತ್ತಾದ ಆದರ್ಶವೊಂದಕ್ಕೆ ಮನೆ ಬಿಟ್ಟು ನಾವು ಹೊರಡಬೇಕಿದೆ. ಸ್ವಾಮೀಜಿ ಹೇಳುವಂತೆ ’ನಮ್ಮ ನಮ್ಮ ಅಂಕಪಟ್ಟಿಗಳನ್ನು ಯೋಗ್ಯತಾಪತ್ರಗಳನ್ನು ಸಮುದ್ರಕ್ಕೆಸೆದು ರಾಷ್ಟ್ರಕಾರ್ಯಕ್ಕೆ ಧಾವಿಸಬೇಕಿದೆ. ಈಗಲ್ಲದಿದ್ದರೆ ಇನ್ನೆಂದಿಗೂ ಅಲ್ಲ. ಒಂದೆಡೆ ಪಾಕಿಸ್ತಾನ, ಮತ್ತೊಂದೆಡೆ ಹೊಂಚು ಹಾಕಿ ಕುಳಿತ ಚೀನಾ, ಒಳಗೆ ಅಡಗಿರುವ ಭಯೋತ್ಪಾದಕರು – ನಕ್ಸಲರು. ಅವರಿಗೆ ಬೆಂಬಲವಾಗಿ ಆತುಕೊಂಡ ದೇಶದ್ರೋಹಿ ಬುದ್ಧಿಜೀವಿಗಳು. ಇವರೆಲ್ಲರನ್ನೂ ಎದುರಿಸಿ ನಿಲ್ಲಲು ಸಮರ್ಥ ಶಕ್ತಿಯಾಗಿ ನಾವು ನಿಲ್ಲಲೇಬೇಕಿದೆ.
’ನನ್ನ ಕೆಚ್ಚೆದೆಯ ಹುಡುಗರೇ, ನೀವೆಲ್ಲ ಮಹತ್ಕಾರ್ಯಗಳನ್ನು ಸಾಧಿಸಲು ಜನ್ಮವೆತ್ತಿದ್ದೀರಿ ಎಂಬುದರಲ್ಲಿ ವಿಶ್ವಾಸವಿಡಿ. ನಾಯಿ ಕುನ್ನಿಗಳ ಬೊಗಳುವಿಕೆ ನಿಮ್ಮನ್ನು ಹೆದರಿಸದಿರಲಿ. ಅಷ್ಟೇ ಏಕೆ, ಸ್ವರ್ಗದ ಗುಡುಗು ಸಿಡಿಲುಗಳೂ ನಿಮ್ಮನ್ನು ಕಂಗೆಡಿಸದಿರಲಿ. ಎದ್ದು ನಿಂತು ಕಾರ್ಯೋನ್ಮುಖರಾಗಿ’ ಎಂದಿದ್ದಾರೆ ವಿವೇಕಾನಂದರು.
ಇಷ್ಟಾದರೂ ನಮ್ಮ ಹೃದಯಗಳು ಕರಗಲಿಲ್ಲ ಅಂದರೆ ಮೂವತ್ಮೂರು ಕೋಟಿ ದೇವತೆಗಳೂ ನಮ್ಮನ್ನು ಉದ್ಧರಿಸಲಾರರು ಬಿಡಿ!

2 Responses to ವಿವೇಕಾನಂದರ ಕನಸಿನ ತರುಣರು ಎಲ್ಲಿದ್ದಾರೆ!?

  1. Aravind

    anna nija kanri…neevu heliddu satya

  2. Raju

    Dear chakravarti brother, pratiyobba bharatiyaniyallu e rithi vicharagalu idave, adare avugalannu yav rithi namma jivanadalli alavadisikollabeku, yava riti navu horadabeku annodu ivattin yuvakarige gottil… idakkenadru namma yuvakarige salahe kodi anna..