ವಿಭಾಗಗಳು

ಸುದ್ದಿಪತ್ರ


 

‘ಅಣ್ಣಾ’ ಬಲು ಬೇಗ ತಮ್ಮ ಆಗ್ಬಿಡ್ತಾರಾ?

ಅಣ್ಣಾ ಹಜಾರೆ ಬಲು ಬೇಗ ತಮ್ಮ ಮೊನಚು ಕಳ್ಕೊಂಡುಬಿಡ್ತಾರಾ? ಹಾಗೊಂದು ಪ್ರಶ್ನೆ ಪದೇ ಪದೇ ನನ್ನ ಕಾಡ್ತಾ ಇದೆ. ವಾಸ್ತವವಾಗಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹಶುರುವಿಟ್ಟಾಗ ಭ್ರಷ್ಟಾಚಾರ ಇನ್ನು ಮೂಲೆ ಸೇರುವುದು ಖಾತ್ರಿ ಎಂದು ದೇಶಕ್ಕೆ ಅನಿಸಿಬಿಟ್ಟಿತ್ತು. ನಾವೆಲ್ಲಾ ಕೂತಲ್ಲಿ ನಿಂತಲ್ಲಿ ಉಪವಾಸ ಮಾಡಿದ್ದಾಯ್ತು. ಆದರೇನು? ಭ್ರಷ್ಟಾಚಾರದ ಮಾತಿರಲಿ, ಖುದ್ದು ಅಣ್ಣಾನೇ ಮೂಲೆಗುಂಪಾಗಿಹೋದರು. ಜನ್‌ಲೋಕ್‌ಪಾಲ್ ಮಸೂದೆಯ ಬಗೆಗಿನ ಹೋರಾಟದ ಆರಂಭ ಅದೆಷ್ಟು ಅದ್ಭುತವಾಗಿತ್ತೋ ಅಂತ್ಯ ಅಷ್ಟೇ ಕೆಟ್ಟುಹೋಯ್ತು. ಹಜಾರೆಯವರನ್ನು ಅವರ ಸುತ್ತಲಿನವರೇ ಹೈಜಾಕ್ ಮಾಡುವ ಪ್ರಯತ್ನ ಶುರುವಿಟ್ಟರು.

ಹಾಗೆ ನೋಡಿದರೆ, ಅಣ್ಣಾರ ಉಪವಾಸ ಸತ್ಯಾಗ್ರಹದಲ್ಲಿ ರಾಮದೇವ ಬಾಬಾರದ್ದು ಮಹತ್ವದ ಪಾತ್ರ ಅನ್ನುವುದನ್ನು ಅಲ್ಲಗಳೆಯುವಂತಿಲ್ಲ. ದೇಶದುದ್ದಗಲ ಎಲ್ಲೆಲ್ಲಿ ಹಜಾರೆ ಬೆಂಬಲಿಗರು ಉಪವಾಸ ಕುಳಿತರೋ ಅಲ್ಲೆಲ್ಲ ವ್ಯವಸ್ಥೆ ನೋಡಿಕೊಂಡಿದ್ದು, ಜನ ಸೇರಿಸಿದ್ದು, ಭ್ರಷ್ಟಾಚಾರದ ವಿರುದ್ಧ ಮಾತಾಡಿದ್ದು, ಎಲ್ಲವೂ ಬಾಬಾ ಅನುಯಾಯಿಗಳೇ. ಹೀಗಾಗಿ ಟೀವಿಯಲ್ಲಿ ಕಂಡುಬಂದ ಸತ್ಯಾಗ್ರಹದ ಕ್ಲಿಪ್ಪಿಂಗ್‌ಗಳಲ್ಲಿ ಹಜಾರೆಯವರ ಚಿತ್ರದ ಜತೆ ಬಾಬಾರ ಚಿತ್ರವೂ ತೂಗಾಡುತ್ತಿತ್ತು. ವಿಶ್ವಕಪ್ ಮುಗಿದು ಐಪಿಎಲ್ ಮುಂಚಿನ ಖಾಲಿ ಸಮಯದಲ್ಲಿ ಸುದ್ದಿಯ ಹಪಾಹಪಿತನದಲ್ಲಿದ್ದ ಮಾಧ್ಯಮಗಳು ಈ ಉಪವಾಸಕ್ಕೆ ವಿಶೇಷ ಮಹತ್ವ ನೀಡಿದವು. ಹಜಾರೆಯವರು ಈ ಹಿಂದೆ ಹಲವಾರು ಬಾರಿ ಉಪವಾಸಕ್ಕೆ ಕುಳಿತಿದ್ದರು, ಅದನ್ನು ಮುರಿದಿದ್ದರು. ಅದೊಂದೂ ಸುದ್ದಿಯಾಗಲಿಲ್ಲ. ಈ ಬಾರಿ ಮಾತ್ರ ಮಾಧ್ಯಮಗಳು ಗಾಂಧಿಯ ಅಪರಾವತಾರ ಹಜಾರೆ ಎಂದು ಷರಾ ಬರೆದುಬಿಟ್ಟಿದ್ದು ಅನೇಕ ಗಾಂಧಿ ಅನುಯಾಯಿಗಳಿಗೆ ಅಚ್ಚರಿ ಹುಟ್ಟಿಸಿತ್ತು. ಅದು ಒತ್ತಟ್ಟಿಗಿರಲಿ, ಮಾಧ್ಯಮಗಳಿಗೆ ತಾವೇ ಶಕ್ತಿ ತುಂಬಿದ ಹೋರಾಟದಿಂದ ರಾಮ್‌ದೇವ್ ಬಾಬಾಗೆ ಪ್ರಚಾರ ಸಿಗತೊಡಗಿದ್ದು ಮಾತ್ರ ನುಂಗಿ ಜೀರ್ಣಿಸಿಕೊಳ್ಳಲಾಗದ ತುತ್ತಾಗಿಬಿಟ್ಟಿತು.

ಇಷ್ಟು ಸಾಲದೆಂಬಂತೆ, ಪ್ರಚಾರ ಜೋರಾಗುತ್ತಿದ್ದಂತೆ ಅಣ್ಣಾಯಾವುದೋ ಒಬ್ಬ ವ್ಯಕ್ತಿ ರಾಷ್ಟ್ರದ ಆಗುಹೋಗುಗಳನ್ನು ನಿಯಂತ್ರಿಸುವುದನ್ನು ಸಹಿಸಲಾಗದು ಎಂದು ಹೇಳಿಕೆ ನೀಡಿಬಿಟ್ಟರು. ಇದು ನೇರವಾಗಿ ಕಾಂಗ್ರೆಸ್ಸಿನ ಬುಡಕ್ಕೆ ಬೆಂಕಿ ಹೊತ್ತಿಸಿತು. ಒಬ್ಬ ವ್ಯಕ್ತಿಯ ಅಣತಿ ಎಂದ ಅಣ್ಣಾ ಯಾರತ್ತ ಬೊಟ್ಟು ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಿತ್ತು ಬಿಡಿ. ಆ ವೇಳೆಗೆ ಸ್ವಾಮಿ ಅಗ್ನಿವೇಶ್, ಕಿರಣ್ ಬೇಡಿ ಮೊದಲಾದವರು ಅಣ್ಣನ ಸುತ್ತ ನಿಂತು ನಿರ್ದೇಶನ ಕೊಡಲಾರಂಭಿಸಿದರು. ಸೋನಿಯಾಗಾಂಧಿಯನ್ನು ಬಯ್ದದ್ದು ಬೇಸರವಲ್ಲ, ಅಣ್ಣಾ ಹೃದಯಾಂತರಾಳದಿಂದ ಮೋದಿಯ ಆಡಳಿತವನ್ನು ಹೊಗಳಿಬಿಟ್ಟರಲ್ಲ, ಅದು ಅವರ ಒಳಗುದಿಗೆ ಕಾರಣವಾಯ್ತು. ಈಗಂತೂ ಆಂಗ್ಲ ಮಾಧ್ಯಮಗಳು ನಿಗಿನಿಗಿ ಕೆಂಡವಾಗಿಬಿಟ್ಟವು. ಕಾಂಗ್ರೆಸ್ಸು ದಿಗ್ವಿಜಯ್ ಸಿಂಗರನ್ನು ಅಖಾಡಾಕ್ಕೆ ಇಳಿಸಿತು. ಸೋನಿಯಾರಿಂದವಿಜಯೀಭವಎಂದು ಆಶೀರ್ವಾದ ಪಡೆದೇ ದಿಗ್ವಿಜಯ ಸಿಂಗರು ಹಜಾರೆಯವರ ಮೇಲೆ ವಾಗ್ದಾಳಿ ಶುರುವಿಟ್ಟರು. ಒಂದು ಹಂತದಲ್ಲಿಯಂತೂ ಹಜಾರೆಯವರ ಪ್ರಾಮಾಣಿಕತೆ ಕುರಿತಂತೆ ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡಲಾಯ್ತು. ಅಣ್ಣಾ ಕೇಸರಿ ಪಡೆಗಳ ಚಿಂತನೆಗಳಿಂದ ಪ್ರಭಾವಿತರಾಗಿದ್ದಾರೆ ಎಂಬ ಸುದ್ದಿ ಹಬ್ಬಿಸಿ ನಂಬಿಸುವ ಹುನ್ನಾರ ನಡೆಯಿತು. ಈ ಎಲ್ಲ ಬೆಳವಣಿಗೆಗಳಿಂದ ನೊಂದ ಅಣ್ಣಾ ಕೊಂಚ ಕುಗ್ಗಿದರು. ಸೋನಿಯಾ ಗಾಂಧಿಗೆ ಪತ್ರ ಬರೆದು ತಮ್ಮ ವಿರುದ್ಧ ಅಪಪ್ರಚಾರ ನಿಲ್ಲಿಸಿ ಎಂದು ಕೇಳಿಕೊಂಡರು. ಅತ್ತ ರಾಮದೇವ ಬಾಬಾರ ಚಿತ್ರಗಳನ್ನು ವೇದಿಕೆಗಳಿಂದ ಕೆಳಗಿಳಿಸುವಂತೆ ಹಜಾರೆಯವರ ಸುತ್ತಲಿನವರು ಫತ್ವಾ ಹೊರಡಿಸಿದರು. ಪತ್ರಕರ್ತರು ಮಾತನಾಡಿಸಲು ಬಂದರೆ ಅಗ್ನಿವೇಶರು ಮುಂದೆ ಬಂದುಬಿಡುತ್ತಿದ್ದರು. ಹೀಗೆ ತೀವ್ರ ಘಟ್ಟ ತಲುಪಬಹುದಾಗಿದ್ದ ಹೋರಾಟವೊಂದು ಹಳ್ಳ ಹಿಡಿಯುವ ಎಲ್ಲ ಲಕ್ಷಣಗಳು ಗೋಚರವಾದವು. ಉಪವಾಸದ ಕೊನೆಯ ದಿನಗಲಲ್ಲಂತೂ ಬಾಬಾ ಅನುಯಾಯಿಗಳಾಗಿದ್ದು ಉಪವಾಸ ಮಾಡಿದವರನ್ನು ಹತ್ತಿರಕ್ಕೂ ಬಿದದೆ ತಡೆಯಲಾಯ್ತು. ಕಿರಣ್ ಬೇಡಿಯಂತೂ ಅಣ್ಣಾ ಹಜಾರೆಯವರ ಉಪವಾಸ ಮುರಿಯಲು ಸೋನಿಯಾಗಾಂಧಿಯನ್ನು ಕರೆಸುವ ಯೋಜನೆ ರೂಪಿಸಿದರು. ಅಲ್ಲಿಗೆ, ಸ್ವಿಸ್ ಬ್ಯಾಂಕಿನಲ್ಲಿ ಕಪ್ಪುಹಣ ಪೇರಿಸಿಟ್ಟವರನ್ನೆ ಭ್ರಷ್ಟಾಚಾರ ನ್ವಿರುದ್ಧದ ಉಪವಾಸ ಸತ್ಯಾಗ್ರಹ ಮುರಿಯಲು ಕರೆಸಿ ಅವರಿಂದ ಹಾಲು ಕುಡಿಸುವ ಅಪದ್ಧಕ್ಕೆ ಸಿದ್ಧತೆ ನಡೆಯಿತು. ಇದನ್ನರಿತ ರಾಮದೇವ ಬಾಬಾ ಹೆಲಿಕಾಪ್ಟರಿನಲ್ಲಿ ತುರ್ತಾಗಿ ದೆಹಲಿಗೆ ತೆರಳಿ, ವಿರೋಧದ ನಡುವೆಯೂ ವೇದಿಕೆ ಏರಿ ಭ್ರಷ್ಟಾಚಾರದ ವಿರುದ್ಧ ಭಾಷಣ ಮಾಡಿದರು. ಭಾರತಮಾತೆಗೆ ಜೈ ಕಾರ ಘೋಷಿಸಿದರು. ಭಾರತಮಾತೆಗೆ ಜೈಕಾರ ಇರುವಲ್ಲಿ ತನಗೇನು ಕೆಲಸ ಎಂದುಕೊಂಡ ಸೋನಿಯಾ ಅತ್ತ ತಲೆ ಹಾಕಲಿಲ್ಲ. ಹಜಾರೆ ಬದುಕಿನ ಕಪ್ಪು ಪುಟವೊಂದು ಬರೆಯದೆ ಉಳಿದುಕೊಂಡಿತು.

ಅದರನಂತರವಾದರೂ ಅಣ್ಣಾ ಸರಿಯದ ಹೆಜ್ಜೆ ಇಟ್ಟರಾ? ‘ಇತರರ ಪ್ರಾಮಾಣಿಕತೆ ಬಗ್ಗೆ ನಾನು ಹೇಳಲಾರೆ. ನನ್ನ ಬಗ್ಗೆ ನಾನು ಗ್ಯಾರಂಟಿ ಕೊಡಬಲ್ಲೆನಷ್ಟೆಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟ ಅಣ್ಣಾ ವ್ಯತಿರಿಕ್ತವಾಗಿ ವರ್ತಿಸತೊದಗಿದರು. ಮೊದಲೊಮ್ಮೆ ಅಹಮಾದಾಬಾದ್ ಭೇಟಿಯಲ್ಲಿ ಮೋದಿ ಸರ್ಕಾರವನ್ನು ಹೊಗಳಿದ್ದ ಅಣ್ಣಾ, ಕೆಲವು ಕಾಂಗ್ರೆಸ್ಸಿಗರು ಗಲಾಟೆ ಮಾಡಿದರೆಂಬ ಕಾರಣಕ್ಕೆ ಈಗ ಅದನ್ನು ಅತಿ ಭ್ರಷ್ಟ ಸರ್ಕಾರ ಎಂದು ಕರೆದು ಹೇಳಿಕೆ ಕೊಟ್ಟುಬಿಟ್ಟರು! ಇನ್ನು ಅವರ ಜೊತೆ ಇರುತ್ತಿರುವ ಸ್ವಾಮಿ ಅಗ್ನಿವೇಶರಂತೂ ಅನೇಕ ವಿಚಾರಗಳಲ್ಲಿ ಹಿಂದುತ್ವದ ವಿರೋಧವಾಗಿ ಮಾತಾಡುವವರು. ಕಾಶ್ಮೀರದ ವಿಶಯ ಬಂದಾಗ, ಅದನ್ನು ಪಾಕಿಸ್ಥಾನಕ್ಕೆ ಕೊಟ್ಟರೆ ನಷ್ಟವಿಲ್ಲ ಅನ್ನುವ ಅರುಂಧತಿ ರಾಯ್‌ರಂಥವರ ಬೆಂಬಲಕ್ಕೆ ನಿಲ್ಲುವಂಥವರು. ಇಂತಹವರ ಒದನಾಟದಲ್ಲಿರುವ ಅಣ್ಣಾ ಹಜಾರೆ ಯಶಸ್ವಿಯಾಗಿ ಭ್ರಷ್ಟಾಚಾರ ವಿರುದ್ಧದ ಹೋರಾಟ ಮುನ್ನಡೆಸಬಲ್ಲರೆ?

ಹಾಗೊಂದು ಪ್ರಶ್ನೆ ನಮ್ಮನ್ನು ಒಳಗೊಳಗೆ ಕೊರೆಯುತ್ತಿದೆ. ಉತ್ತರವನ್ನು ಹುಡುಕುತ್ತ ಹೈರಾಣಾಗಿದ್ದೇವೆ. ದೇಶದ ದೌರ್ಭಾಗ್ಯ ಇದೇ. ಹೋರಾಟವೊಂದು ನಿಗದಿತ ಗಮ್ಯ ಮುಟ್ಟುತ್ತದೆ ಎನ್ನುವಾಗಲೇ ಯಾರೋ ಬಂದು ದಾರಿತಪ್ಪಿಸಿಬಿಡುತ್ತಾರೆ. ಹೀಗೆ ದಾರಿ ತಪ್ಪಿಸುವವರು ಆರಂಭದಲ್ಲಿ ಅಣ್ಣಾಎಂದೇ ಕರೆಯುತ್ತಿರುತ್ತಾರೆ. ಬರಬರುತ್ತಾ ಅವರೆ ಲಘುವಾಗಿಏನ್ ತಮ್ಮಾಅನ್ನುವ ಮಟ್ಟಕ್ಕೆ ಇಳಿದುಬಿಡುತ್ತಾರೆ. ಇದಕ್ಕೆ ಅಂದಿನ ಗಾಂಧಿನೆಹರೂ ಸಂಬಂಧ ಒಳ್ಳೆಯ ಉದಾಹರಣೆ!

.

1 Response to ‘ಅಣ್ಣಾ’ ಬಲು ಬೇಗ ತಮ್ಮ ಆಗ್ಬಿಡ್ತಾರಾ?

  1. Hariharapurasridhar

    ನಮ್ಮ ದೇಶದ ಸಮಸ್ಯೆಗಳಿಗೆ ಸಧ್ಯಕ್ಕೆ ಬಾಬಾ ರಾಮದೇವ್ ಮಾತ್ರವೇ ಉತ್ತರವಾಗಬಲ್ಲರು. ಹಜಾರೆಯವರು ಹಗುರವಾಗಿಬಿಟ್ಟರು