ವಿಭಾಗಗಳು

ಸುದ್ದಿಪತ್ರ


 

ಬಾಯ್ಮುಚ್ಚಿಕೊಂಡಿದ್ದರೆ, ಅದೇ ‘ಭಾಗ್ಯ’!

‘ನಾನು 15 ನೇ ವಯಸ್ಸಿನಲ್ಲಿ ಮಾಡಿದ ಸಾಧನೆ ಎಂಥದ್ದು ಗೊತ್ತೇ?’ ‘ನನ್ನ ಸಮಕ್ಕೆ ಅವತ್ತೇನು? ಇವತ್ತೂ ಯಾರೂ ಇಲ್ಲ’, ‘ನಾನು ಮನಸ್ಸು ಮಾಡಿದರೆ….’ ಹೀಗೆಲ್ಲ ತಮ್ಮ ಬಗ್ಗೆ ತಾವೇ ಹೇಳಿಕೊಳ್ಳುವ, ಗಂಟೆಗಟ್ಟಲೆ ಕೊಚ್ಚಿಕೊಳ್ಳುವ ತಲೆ ಚಿಟ್ಟು ಹಿಡಿಸುವವರು ಆಗಾಗ ಸಂಪರ್ಕಕ್ಕೆ ಬರುತ್ತಲೇ ಇರುತ್ತಾರೆ. ಇನ್ನೂ ಕೆಲವರಂತೂ ‘ನನ್ನ ಮಗ, ನನ್ನ ಮಗಳು….’ ಅಂತ ಶುರು ಮಾಡಿ ಬಿಟ್ಟರೆ ಅದೊಂದು ನಿಲ್ಲದ ರೈಲು! ಹೀಗೆ ತಮ್ಮ ಬಗ್ಗೆ ತಾವೇ ಹೇಳಿಕೊಳ್ಳುವುದು ಆತ್ಮಹತ್ಯೆಗೆ ಸಮಾನವಂತೆ ಗೊತ್ತೇನು?
ಮಹಾಭಾರತ ಯುದ್ಧ ನಡೆವಾಗ, ಅಜರ್ುನನ ಅನುಪಸ್ಥಿತಿಯಲ್ಲಿ ಚಕ್ರವ್ಯೂಹದೊಳಗೆ ನುಗ್ಗಿದ ಅಭಿಮನ್ಯು ವೀರಮರಣ ಕಂಡ. ಕುಪಿತನಾದ ಧರ್ಮರಾಯ ವಿಷಾದದಿಂದ ಅಜರ್ುನನನ್ನು ನಿಂದಿಸುತ್ತಾ ‘ಮಗನನ್ನು ರಕ್ಷಿಸದ ನಿನ್ನ ಗಾಂಡೀವಕ್ಕೆ ಧಿಕ್ಕಾರ’ ಎಂದುಬಿಟ್ಟ. ಎಂದೂ ಕೋಪಕ್ಕೆ ದಾಸನಾಗದವನು ಅಂದು ಘೋರ ಪ್ರಮಾದ ಮಾಡಿಬಿಟ್ಟ. ಈಗ ಅಜರ್ುನನ ಸರದಿ. ‘ಗಾಂಡೀವವನ್ನು ನಿಂದಿಸಿದವರ ನಾ ಬಿಡೆ’ ಎಂಬ ತನ್ನ ಶಪಥ ಈಡೇರಿಸಲು ಆತ ಅಣ್ಣನ ಮೇಲೇರಿ ಹೋಗುವವನಿದ್ದ. ಅಷ್ಟರಲ್ಲಿಯೇ ಆಪತ್ಕಾಲದ ಬಂಧು ಕೃಷ್ಣ, ‘ಅಣ್ಣನನ್ನು ಕೊಲ್ಲುವುದೇ?’ ಎಂದು ಬುದ್ಧಿ ಹೇಳಿದ. ಕೊನೆಗೆ ಅಜರ್ುನನ ಶಪಥ ಈಡೇರಿಸಲು ಅವನು ಹೇಳಿಕೊಟ್ಟ ಉಪಾಯ, ಧರ್ಮರಾಯನ ನಿಂದನೆ ಮಾಡಲು ಹಚ್ಚಿದ್ದು!
ಸಜ್ಜನರನ್ನು ಕೆಟ್ಟದಾಗಿ ನಿಂದಿಸಿದರೆ ಅದು ಅವರ ಪಾಲಿಗೆ ಸಾವೇ ಸರಿ ಎಂಬ ಮಾತು ಅಜರ್ುನನಿಗೆ ಒಪ್ಪಿಗೆಯಾಯಿತು. ಅನಂತರವೇ ಪೀಕಲಾಟ ಶುರುವಾಗಿದ್ದು. ಈಗ ಅಜರ್ುನ ದೇವರಂತಹ ಅಣ್ಣನನ್ನು ನಿಂದಿಸಿದ ನಾನು ಮಹಾಪಾಪಿ, ನಾನೀಗ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದ. ಈಗ ಕೃಷ್ಣ ಮತ್ತೆ ನಡುವೆ ನುಸುಳಿ ಉಪಾಯ ಕೊಟ್ಟ. ‘ನೀನು ನಿಜವಾಗಿ ಸಾಯುವುದು ಬೇಕಿಲ್ಲ. ನಿನ್ನ ಪ್ರಶಂಸೆ ನೀನೇ ಮಾಡಿಕೋ ಸಾಕು. ಅದು ಆತ್ಮಹತ್ಯೆಯೇ ಆಗಿಬಿಡುತ್ತದೆ’ ಎಂದ.
ಒಂದು ಕ್ಷಣ ಯೋಚನೆ ಮಾಡಿ. ಅರಿವಿಗೆ ಬಂದೋ-ಬರದೆಯೋ ನಮ್ಮ ಪ್ರಶಂಸೆ ನಾವೇ ಅದೆಷ್ಟು ಬಾರಿ ಮಾಡಿಕೊಳ್ಳುತ್ತೇವೆ. ಅದು ನಮ್ಮಲ್ಲಿರುವ ಅಸೀಮ ಸಾಮಥ್ರ್ಯವನ್ನೂ ಅಲ್ಪವಾಗಿಸಿಬಿಡುತ್ತದೆ. ನಮ್ಮ ಬಗ್ಗೆ ನಾವೇ ಮಾತನಾಡಿಕೊಳ್ಳುವುದರಲ್ಲಿ ಆನಂದವೇನಿದೆ? ಹೊರಗಿನ ಜನ ನಮ್ಮ ಬಗ್ಗೆ ಒಳ್ಳೆಯ ಮಾತನಾಡುತ್ತಾರಲ್ಲ ಅದು ನಿಜವಾದ ಸಾಧನೆ. ಗಳಿಸುವ ಉತ್ಸುಕತೆಯಿದ್ದರೆ ಇತರರ ಒಲವನ್ನು ಗಳಿಸಬೇಕು. ಅದು ಸುಮ್ಮನಿರುವುದರಿಂದ ಮಾತ್ರ ದಕ್ಕುವಂತಹುದು. ‘ಬೀಜ ಮೊಳಕೆಯೊಡೆದಾಗ ಸದ್ದಿಲ್ಲ, ಹಣ್ಣು ಮಾಗಿದಾಗ ಸದ್ದಿಲ್ಲ. ಮತ್ತೆ ನಿನ್ನ ತುಟಿಗಳನ್ನು ನೀನು ಹೊಲಿದುಕೋ’ ಎಂದು ಡಿವಿಜಿ ಹೇಳಿದ್ದು ಅದಕ್ಕೇ!

Comments are closed.